Monday, December 10, 2018

ಇಂದಿನ ಇತಿಹಾಸ History Today ಡಿಸೆಂಬರ್ 10

ಇಂದಿನ ಇತಿಹಾಸ History Today ಡಿಸೆಂಬರ್  10
2018: ನವದಹಲಿ/ ಲಂಡನ್ಸ್ಥಗಿತಗೊಂಡಿರುವಕಿಂಗ್ ಫಿಶರ್ ಏರ್ ಲೈನ್ಸ್ ಮುಖ್ಯಸ್ಥ, ಮದ್ಯ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡಬೇಕು ಎಂದು ಇಂಗ್ಲೆಂಡಿನ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಚಾರಿತ್ರಿಕ ಅದೇಶ ನೀಡಿತು. ಇದರೊಂದಿಗೆ ವಿಜಯ್ ಮಲ್ಯ ಗಡೀಪಾರು ಹೋರಾಟದಲ್ಲಿ ಭಾರತ ಕೊನೆಗೂ ವಿಜಯ ಸಾಧಿಸಿತು. ಒಂಬತ್ತು ತಿಂಗಳುಗಳ ವಿಚಾರಣೆಯ ಬಳಿಕ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನ ನ್ಯಾಯಾಧೀಶೆ ಎಮ್ಮಾ ಅರ್ಬುಥ್ನಾಟ್ ಅವರು ತಮ್ಮ ತೀರ್ಪನ್ನು ನೀಡಿದ್ದು, ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮುಂದಿಟ್ಟಿರುವ ಆರೋಪಗಳ ಬಗ್ಗೆ ವಿಚಾರಣೆ ಎದುರಿಸಲು ಮಲ್ಯ ಅವರನ್ನು ಗಡೀಪಾರು ಮಾಡಬಹುದು ಎಂದು ಆಜ್ಞಾಪಿಸಿದರು. ಭಾರತವು ೯೦೦೦ ಕೋಟಿ ರೂಪಾಯಿಗಳ ಸಾಲ ವಂಚನೆ ಹಾಗೂ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಲುವಾಗಿ ವಿಜಯ್ ಮಲ್ಯ ಅವರನ್ನು ಗಡೀಪಾರು ಮಾಡುವಂತೆ ಇಂಗ್ಲೆಂಡ್ ಕೋರ್ಟಿಗೆ ಮನವಿ ಸಲ್ಲಿಸಿತ್ತು. ಗಡೀಪಾರು ವಾರಂಟ್ ಅನ್ವಯ ೨೦೧೭ರ ಏಪ್ರಿಲ್ ತಿಂಗಳಲ್ಲಿ ಬಂಧಿತರಾಗಿದ್ದ ಮಲ್ಯ ಅವರು ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಬಳಿಕ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿತ್ತುರಾಜಕೀಯ ಅಭಿಪ್ರಾಯಗಳಿಗಾಗಿ ಮಲ್ಯ ಪ್ರಕರಣವನ್ನು ಹುಟ್ಟು ಹಾಕಲಾಗಿದೆ ಎಂಬುದನ್ನು ಸೂಚಿಸಲು ಯಾವುದೇ ಸಾಕ್ಷ್ಯಾಧಾರವೂ ಕಾಣುತ್ತಿಲ್ಲ. ಸಿಬಿಐ ಅಧಿಕಾರಿ ರಾಕೇಶ್ ಅಸ್ತಾನ ಅವರು ತಮ್ಮ ವಾದಗಳಿಗೆ ವಿರುದ್ಧವಾಗಿ ಭ್ರಷ್ಟ ಮಾರ್ಗ ಅನುಸರಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವೂ ಇಲ್ಲ ಎಂದೂ ನ್ಯಾಯಾಧೀಶೆ  ಎಮ್ಮಾ ಅರ್ಬುಥ್ನಾಟ್ ತಮ್ಮ ತೀರ್ಪಿನಲ್ಲಿ ತಿಳಿಸಿದರುನಿಯಮಾವಳಿಗಳ ಪ್ರಕಾರ ಈಗ ಪ್ರಕರಣವನ್ನು ಇಂಗ್ಲೆಂಡಿನ ಗೃಹ ಕಾರ್ಯದರ್ಶಿಯವರಿಗೆ ಒಪ್ಪಿಸಲಾಗಿದ್ದು, ಗೃಹ ಕಾರ್ಯದರ್ಶಿಯವರು ಗಡೀಪಾರು ಆದೇಶವನ್ನು ಹೊರಡಿಸಬೇಕಾಗಿದೆ. ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ವಿಜಯ್ ಮಲ್ಯ ಅವರಿಗೆ ೧೪ ದಿನಗಳ ಕಾಲಾವಕಾಶ ಇದೆ. ಮರುಪಾವತಿ ಕೊಡುಗೆ ಬೊಗಳೆ ಅಲ್ಲ: ತೀರ್ಪು ಬರುವುದಕ್ಕೆ ಮುನ್ನ, ಸೋಮವಾರ ಕೂಡಾ ವಿಜಯ್ ಮಲ್ಯ ಅವರು ಪೂರ್ತಿ ಅಸಲು ಮರುಪಾವತಿಯ ತಮ್ಮ ಕೊಡುಗೆ ಬೊಗಳೆ ಅಲ್ಲ ಎಂದು ಕೋರ್ಟಿನ ಹೊರಗೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಪ್ರತಿಪಾದಿಸಿದ್ದರು.  ‘ನಾನು (ಹಣವನ್ನು) ಕದ್ದಿದ್ದೇನೆ ಎಂಬ ಕಥೆಯನ್ನು ಸುಳ್ಳೆಂದು ಸಾಬೀತು ಪಡಿಸಲು ನಾನು ಬಯಸಿದ್ದೇನೆ ಎಂದು ಅವರು ಹೇಳಿದರು.  ‘ನಾನು ಒಂದೇ ಒಂದು ಪೈಸೆ ಸಾಲ ಪಡೆದಿಲ್ಲ. ಸಾಲ ಪಡೆದದ್ದು ಕಿಂಗ್ ಫಿಶರ್ ಏರ್ ಲೈನ್ಸ್. ನೈಜ ಮತ್ತು ದುಃಖಕರ ವಹಿವಾಟು ವೈಫಲ್ಯದ ಪರಿಣಾಮವಾಗಿ ಹಣ ನಷ್ಟವಾಗಿದೆ. ಖಾತರಿದಾರನಾಗುವುದು ವಂಚನೆಯಲ್ಲ ಎಂದು ಇದಕ್ಕೆ ಮುನ್ನ ಮಲ್ಯ ಟ್ವೀಟ್ ಮಾಡಿದ್ದರು.  ‘ಶೇಕಡಾ ನೂರರಷ್ಟು ಅಸಲು ಪಾವತಿಯ ನನ್ನ ಕೊಡುಗೆಯನ್ನು ಸ್ವೀಕರಿಸಿ ಎಂದು ಅವರು ಟ್ವೀಟ್ ಮೂಲಕವೂ  ಮನವಿ ಮಾಡಿದ್ದರು. ‘ತೀರ್ಪು ಏನೇ ಬರಲಿ, ನನ್ನ  ವಕೀಲರ ತಂಡ ಅದನ್ನು ಪರಿಶೀಲಿಸುತ್ತದೆ ಮತ್ತು ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಮಲ್ಯ ಹೇಳಿದ್ದರುಅಸಲು ಮರುಪಾವತಿಯ ತಮ್ಮ ಕೊಡುಗೆಗೂ, ಗಡೀಪಾರು ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ವೆನ್ಮಿನ್ಸ್ಟರ್ ಕೋರ್ಟಿನ ತೀರ್ಪನ್ನು ಗೌರವಿಸುವೆ ಎಂದೂ ಮಲ್ಯ ಹೇಳಿದ್ದರುತಮ್ಮ ವಿರುದ್ದದ ಪ್ರಕರಣ ರಾಜಕೀಯ ದುರುದ್ದೇಶದ್ದು, ಮತ್ತು ತಾನು ವಂಚಿಸಿರುವುದಾಗಿ ಆಪಾದಿಸಲಾದ ಸಾಲಗಳು ತಾವು ತೆಗೆದುಕೊಂಡದ್ದಲ್ಲ, ಈಗ ಸ್ಥಗಿತಗೊಂಡಿರುವ ತಮ್ಮ ಏರ್ ಲೈನ್ಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ತೆಗೆದುಕೊಂಡದ್ದು ಎಂಬ ನೆಲೆಯಲ್ಲಿ ವಿಜಯ್ ಮಲ್ಯ ಅವರು ಗಡೀಪಾರು ಪ್ರಕರಣವನ್ನು ಪ್ರಶ್ನಿಸಿದ್ದರುವೆಸ್ಟ್ಮಿನ್ಸ್ಟರ್ ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಅವರುನಾವು ಆದಷ್ಟೂ ಶೀಘ್ರ ಅವರನ್ನು ಭಾರತಕ್ಕೆ ಕರೆತರುವುದಾಗಿ ಮತ್ತು ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಹಾರೈಸುತ್ತೇವೆ. ಸಿಬಿಐ ಗೆ ತನ್ನದೇ ಆಂತರಿಕ ಬಲವಿದೆ. ಪ್ರಕರಣದಲ್ಲಿ ಅತ್ಯಂತ ಕಠಿಣ ಶ್ರಮ ವಹಿಸಿದ್ದೇವೆ. ನಮ್ಮ ಬಳಿ ಬಲಾಢ್ಯ ಕಾನೂನು ಮತ್ತು ವಾಸ್ತವಾಂಶಗಳಿವೆ. ಮತ್ತು ಗಡೀಪಾರು ಪ್ರಕ್ರಿಯೆಯನ್ನು ಮುಂದಕ್ಕೆ ಒಯ್ಯುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.  ರಾಹುಲ್ ಗಾಂಧಿ ಪ್ರತಿಕ್ರಿಯೆ: ಮಧ್ಯೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುವಿಷಯವು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಬಂಧಪಟ್ಟದ್ದಾದ ಕಾರಣ ಇದು ವಿಜಯವಲ್ಲ’ ಎಂದು ಹೇಳಿದರು. ಮಲ್ಯ ಬಗೆಗೆ ಮಾತನಾಡುವ ಬದಲು ಮೋದಿ ಸರ್ಕಾರ ರಫೇಲ್ ಬಗ್ಗೆ ಮಾತನಾಡಬೇಕು ಎಂದು ಅವರು ನುಡಿದರುಮುಂದೇನಾಗುತ್ತದೆ?:  ಸೋಮವಾರದ ವಿದ್ಯಮಾನ ಒಂದು ಹಂತದ ಕೊನೆ ಅಷ್ಟೆ. ಕೋರ್ಟಿನ ನಿರ್ಧಾರವು ತಮ್ಮ ವಿರುದ್ಧ ಬಂದಲ್ಲಿ ಮೇಲ್ಮನವಿ ಹೋಗುವ ಅವಕಾಶ ಭಾರತ ಮತ್ತು ಮಲ್ಯ ಇಬ್ಬರಿಗೂ ಇದೆ. ಇದರ ಅರ್ಥ ವರ್ಷಗಳಲ್ಲದೇ ಹೋದರೂ, ಇನ್ನೂ ಒಂದಷ್ಟು  ತಿಂಗಳುಗಳ ಕಾಲ ಹೋರಾಟ ಮುಂದುವರೆಯುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟರು. ಸಿಬಿಐ ತಂಡ ಲಂಡನ್ನಿನಲ್ಲಿ: ಏತನ್ಮಧ್ಯೆ, ಕೇಂದ್ರೀಯ ತನಿಖಾ ದಳದ (ಸಿಬಿಐ) ಜಂಟಿ ನಿರ್ದೇಶಕ . ಸಾಯಿ ಮನೋಹರ್ ಅವರು ಪ್ರಕರಣದ ತೀರ್ಪು ಹೊರಬೀಳುವ ವೇಳೆಯಲ್ಲಿ ನ್ಯಾಯಾಲಯದಲ್ಲಿ ಇದ್ದು, ಮುಂದಿನ ಕ್ರಮಗಳ ಸಿದ್ಧತೆ ನಡೆಸಿತು. ಸಿಬಿಐಯ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರು ಮುನ್ನ ಕಳೆದ ಡಿಸೆಂಬರ್ನಿಂದ ಇಂಗ್ಲೆಂಡಿನಲ್ಲಿ ಬ್ರಿಟಿಷ್ ಕ್ರೌನ್ ಪ್ರಾಸೆಕ್ಯೂಷನ್ ಜೊತೆಗೆ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮ ಜೊತೆಗಿನ ಸಂಘರ್ಷದ ಪರಿಣಾಮವಾಗಿ ಕೇಂದ್ರ ಸರ್ಕಾರವು ಅಲೋಕ್ ಕುಮಾರ್ ವರ್ಮ ಜೊತೆಗೆ ರಾಕೇಶ್ ಅಸ್ತಾನ ಅವರನ್ನು ಅಧಿಕಾರ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. ತತ್ ಕ್ಷಣ ಮಲ್ಯ ಗಡೀಪಾರು ಸಾಧ್ಯವೇ?: ಲಂಡನ್ನಿನ ಕಾನೂನು ತಜ್ಞರ ಪ್ರಕಾರ, ಮಲ್ಯ ಅವರಿಗೆ ತಮ್ಮ ವಿರುದ್ಧ ಬಂದಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ೧೪ ದಿನಗಳ ಕಾಲಾವಕಾಶ ಇದೆ. ಅವಧಿಯಲ್ಲಿ ಅವರನ್ನು ಬಂಧಿಸಲು ಸಾಧ್ಯವಿಲ್ಲ. ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ಮಾಡಿದರೆ ಪ್ರಕರಣ ಇತ್ಯರ್ಥವಾಗಲು ಹಲವು ತಿಂಗಳುಗಳೇ ಬೇಕಾಗಬಹುದು. ಪ್ರಕ್ರಿಯೆ ಕನಿಷ್ಠ ೫ರಿಂದ ತಿಂಗಳನ್ನು ತೆಗೆದುಕೊಳ್ಳಬಹುದು. ಮೇಲ್ಮನವಿ ನ್ಯಾಯಾಲಯದಲ್ಲೂ ತೀರ್ಪು ತಮ್ಮ ವಿರುದ್ಧ ಬಂದರೆ, ಅವರು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕಿಗಾಗಿ ಅರ್ಜಿ ಸಲ್ಲಿಸಬಹುದು. ಇದು ಕನಿಷ್ಠ ಆರು ವಾರಗಳನ್ನು ತೆಗೆದುಕೊಳ್ಳಬಹುದು. ಮಲ್ಯ ಅವರು ಹಕ್ಕು ಗಳಿಸುವಲ್ಲಿ ವಿಜಯ ಸಾಧಿಸಿದರೆ, ಗಡೀಪಾರು ಪ್ರಕ್ರಿಯೆ ಮತ್ತು ಹಲವು ತಿಂಗಳು ಅಥವಾ ವರ್ಷ ಕಾಲ ಮುಂದಕ್ಕೆ ಹೋಗಬಹುದು.
ಆರ್ಥರ್ ರಸ್ತೆ ಜೈಲಿನಲ್ಲಿ ಬಿಗಿ ಭದ್ರತೆ: ಮಲ್ಯ ಅವರು ಗಡೀಪಾರಾಗಿ ಭಾರತಕ್ಕೆ ಬಂದರೆ ಅವರನ್ನು ಇರಿಸಲಾಗುವ ಮುಂಬೈಯ ಆರ್ಥರ್ ರಸ್ತೆ ಸೆರೆಮನೆಯಲ್ಲಿ ಅತ್ಯಂತ ಬಿಗಿ ಭದ್ರತೆ ಕಲ್ಪಿಸಬೇಕಾಗುತ್ತದೆ. ಸೆರೆಮನೆ ಸಮುಚ್ಚಯದ ಒಳಗೆ ಎರಡು ಅಂತಸ್ತಿನ ಕಟ್ಟಡದ ಅತ್ಯಂತ ಭದ್ರತೆಯ ಬ್ಯಾರಕ್ಕಿನಲ್ಲಿ ಮಲ್ಯ ಅವರನ್ನು ಇರಿಸಬೇಕಾಗುತ್ತದೆ. ೨೬/೧೧ರ ಮುಂಬೈ ಭಯೋತ್ಪಾದಕ ದಾಳಿ ಅಪರಾಧಿ ಮೊಹಮ್ಮದ್ ಅಜ್ಮಲ್ ಕಸಬ್ ನಲ್ಲಿ ಇದೆ ಕಟ್ಟಡದಲ್ಲಿ ಇರಿಸಲಾಗಿತ್ತು ಎಂದು ಸೆರೆಮನೆ ಅಧಿಕಾರಿಯೊಬ್ಬರು ಹೇಳಿದರು. ಭದ್ರತೆಯ ದೃಷ್ಟಿಯಿಂದ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ನುಡಿದರು. ವೈದ್ಯಕೀಯ ತುರ್ತನ್ನು ಪೂರೈಸುವ ಸಲುವಾಗಿ ಬ್ಯಾರಕ್ಕಿನ ಸಮೀಪದಲ್ಲೇ ಡಿಸ್ಪೆನ್ಸರಿಯನ್ನೂ ಒದಗಿಸಲಾಗಿದ್ದು, ಅಲ್ಲಿ ವೈದ್ಯರಿಂದ ಹಿಡಿದು ಎಲ್ಲ ವೈದ್ಯಕೀಯ ಸಿಬ್ಬಂದಿಯ ಸೇವೆಯೂ ಲಭುವಿರುತ್ತದೆ ಎಂದು ಅವರು ನುಡಿದರು.

2018: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಊರ್ಜಿತ್ ಪಟೇಲ್ ಅವರು ತತ್ ಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಪ್ರಕಟಿಸಿದರು.  ಇದೇ ವೇಳೆಗೆ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ರಾಜೀನಾಮೆ ವದಂತಿಯನ್ನು ಬ್ಯಾಂಕ್ ತಳ್ಳಿ ಹಾಕಿತು. ಸಂಕ್ಷಿಪ್ತ ಹೇಳಿಕೆಯೊಂದನ್ನು ನೀಡಿರುವ ಪಟೇಲ್ ಅವರು ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ನೀಡಿದರು. ‘ವೈಯಕ್ತಿಕ ಕಾರಣಗಳಿಗಾಗಿ, ನಾನು ನನ್ನ ಹಾಲಿ ಹುದ್ದೆಯಿಂದ ತತ್ ಕ್ಷಣದಿಂದ ಜಾರಿಗೆ ಬರುವಂತೆ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು ನನ್ನ ಪಾಲಿಗೆ ಭಾಗ್ಯ ಮತ್ತು ಗೌರವವಾಗಿತ್ತು ಎಂದು ಪಟೇಲ್ ಅವರು ತಮ್ಮ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದರು.  ಆರ್ ಬಿಐ ಸಿಬ್ಬಂದಿ, ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಬೆಂಬಲ ಮತ್ತು ಕಠಿಣ ಶ್ರಮವು ಬ್ಯಾಂಕಿನ ಇತ್ತೀಚಿನ ಸಾಧನೆಗಳಿಗೆ ಕಾರಣವಾಗಿದೆ. ನನ್ನ ಸಹೋದ್ಯೋಗಿಗಳು, ನಿರ್ದೇಶಕರು ಮತ್ತು ಆರ್ಬಿಐ ಕೇಂದ್ರೀಯ ಮಂಡಳಿಗೆ ನನ್ನ ಧನ್ಯವಾದಗಳನ್ನು ಅರ್ಪಿಸಲು ನಾನು ಅವಕಾಶವನ್ನು ಬಳಸಿಕೊಳ್ಳುತ್ತೇನೆ ಮತ್ತು ಅವರೆಲ್ಲರಿಗೂ ಅತ್ಯುತ್ತಮ ಭವಿಷ್ಯವನ್ನು ಹಾರೈಸುತ್ತೇನೆ ಎಂದು ಊರ್ಜಿತ್ ಪಟೇಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಹುದ್ದೆಗೆ ೨೦೧೬ರ ಜೂನ್ ೧೯ರಂದು ರಾಜೀನಾಮೆ ನೀಡಿದ ರಘುರಾಮ ರಾಜನ್ ಅವರ ಅಧಿಕಾರಾವಧಿ  ಸೆಪ್ಟೆಂಬರಿನಲ್ಲಿ ಮುಗಿದ ಬಳಿಕ ಊರ್ಜಿತ್ ಪಟೇಲ್ ಅವರು ಆರ್ ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕೆ ಮುನ್ನ ಅವರು ಬ್ಯಾಂಕಿನ ಡೆಪ್ಯುಟಿ ಗವರ್ನರ್ ಆಗಿದ್ದರು೨೦೧೩ರಲ್ಲಿ ಡೆಪ್ಯುಟಿ ಗವರ್ನರ್ ಆಗುವುದಕ್ಕೆ ಮುನ್ನ ಡಾ. ಪಟೇಲ್ ಅವರು ಬೋಸ್ಟನ್ ಕನ್ಸಲ್ಟಿಂಗ್ ಸಮೂಹದಲ್ಲಿ ಇಂಧನ ಮತ್ತು ಮೂಲ ಸವಲತ್ತು ಸಲಹೆಗಾರರಾಗಿದ್ದರುಯಾಲೆ ವಿಶ್ವ ವಿದ್ಯಾಲಯದಿಂದ ಅರ್ಥಶಾಸ್ತ್ರ ಪಿಎಚ್ ಡಿ ಪಡೆದಿದ್ದ ಪಟೇಲ್ ಆಕ್ಸಫರ್ಡ್ ವಿಶ್ವ ವಿದ್ಯಾಲಯದಿಂದ ಎಂ.ಫಿಲ್ ಪಡೆದಿದ್ದರು. ಪಟೇಲ್ ಅವರು ಅಂತಾರಾಷ್ಟ್ರೀಯ ಹಣಕಸು ನಿಧಿಯಲ್ಲಿ (ಐಎಂಎಫ್) ೧೯೯೦ರಿಂದ ೧೯೯೫ರ ನಡುವಣ ಅವಧಿಯಲ್ಲಿ ಸೇವೆ ಸಲ್ಲಿಸಿದ್ದು, ಅಮೆರಿಕ, ಭಾರತ, ಬಹಾಮಾಸ್ ಮತ್ತು ಮ್ಯಾನ್ಮಾರಿನಲ್ಲಿ ಕಾರ್ಯ ನಿರ್ವಹಿಸಿದ್ದರುಕೇಂದ್ರೀಯ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ನಡುವೆ ರಿಸರ್ವ್ ಬ್ಯಾಂಕ್ ಎಷ್ಟು ಸ್ವಾಯತ್ತತೆ ಹೊಂದಿರಬೇಕು ಎಂಬ ವಿಚಾರದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ತಲೆದೋರಿದ ಬಳಿಕ ಪಟೇಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಸಾಲ ನೀಡಿಕೆಯಲ್ಲಿನ ನಿಯಂತ್ರಣಗಳನ್ನು ಕಡಿಮೆಗೊಳಿಸಬೇಕು ಮತ್ತು ಬ್ಯಾಂಕಿನ ಹೆಚ್ಚುವರಿ ಮೀಸಲು ನಿಧಿ ಬಳಸಲು ಸರ್ಕಾರಕ್ಕೆ ಅವಕಾಶ ಇರಬೇಕು ಎಂಬುದಾಗಿ ಕೇಂದ್ರ ಸರ್ಕಾರ ಕೋರಿತ್ತು ಮತ್ತು ಇದು ಉಭಯರ ನಡುವಣ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿತ್ತುಪ್ರಧಾನಿ ಶ್ಲಾಘನೆ: ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಆರ್ ಬಿಐ ಗವರ್ನರ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಊರ್ಜಿತ್ ಪಟೇಲ್ ಅವರ ಸೇವೆಗಾಗಿ ಶ್ಲಾಘಿಸಿದರು. ಆಚಾರ್ಯ ರಾಜೀನಾಮೆ ವದಂತಿ ನಿರಾಕರಣೆ: ಮಧ್ಯೆ, ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ಅವರೂ ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳನ್ನು  ಆರ್ ಬಿಐ ವಕ್ತಾರರು ತಳ್ಳಿ ಹಾಕಿದರು. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ ಸುದ್ದಿ ಬಂದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ಅವರೂ ರಾಜೀನಾಮೆ ನೀಡಿದ್ದಾರೆ ಎಂದು ವದಂತಿಗಳು ವೈರಲ್ ಆಗಿದ್ದವು. ಆಚಾರ್ಯ ಅವರು ಮುನ್ನ ಆರ್ ಬಿಐ ವ್ಯವಹಾರಗಳಲ್ಲಿ ಸರ್ಕಾರದ ಹಸ್ತಕ್ಷೇಪ ವಿರುದ್ಧ ಎಚ್ಚರಿಕೆ ನೀಡಿದ್ದರು. ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ವಿರಾಲ್ ಆಚಾರ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿಲ್ಲ ವಕ್ತಾರ ಸ್ಪಷ್ಟ ಪಡಿಸಿದರು.


2018: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆಯನ್ನುಪ್ರತಿಭಟನೆಯ ಸಂಕೇತ ಎಂಬುದಾಗಿ ಬಣ್ಣಿಸಿರುವ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರುಪ್ರತಿಯೊಬ್ಬ ಭಾರತೀಯನಿಗೂ ಇದು ಕಳವಳದ ವಿಚಾರ. ಸಮಸ್ಯೆಯ ವ್ಯಾಪ್ತಿಯನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬನೂ ಕಾಳಜಿ ವಹಿಸಬೇಕು ಎಂದು ಹೇಳಿದರು. ಕೇಂದ್ರೀಯ ಬ್ಯಾಂಕಿನ ಸಾಲ ನೀತಿ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತೀವ್ರ ಟೀಕೆ ಮಾಡಿದ ಕೆಲ ದಿನಗಳ ಬಳಿಕ ಊರ್ಜಿತ್ ಪಟೇಲ್ ಅವರು ವೈಯಕ್ತಿಕ ಕಾರಣಗಳನ್ನು ಮುಂದೊಡ್ಡಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಘುರಾಮ್ ರಾಜನ್ ಅವರು ಹೇಳಿಕೆ ನೀಡಿದರು.  ‘ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ರಾಜೀನಾಮೆ ಅತ್ಯಂತ ಕಳವಳಕಾರಿ ವಿಷಯ. ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಾಗದೇ ಹೋದಾಗ ಸರ್ಕಾರಿ ಸೇವಕ ಪ್ರತಿಭಟನೆಯ ಸಂಕೇತವಾಗಿ ರಾಜೀನಾಮೆ ನೀಡಿದ್ದಾರೆ. ಎಲ್ಲ ಭಾರತೀಯರೂ ಪಟೇಲ್ ರಾಜೀನಾಮೆ ಬಗ್ಗೆ ಕಳವಳ ಪಡಬೇಕು ಎಂದು ರಾಜನ್ ಹೇಳಿದರು.

2018: ನವದೆಹಲಿ: ಕೇಂದ್ರ ಸಚಿವ ಮತ್ತು ಆರ್ಎಲ್ ಎಸ್ ಪಿ ಮುಖ್ಯಸ್ಥ ಉಪೇಂದ್ರ ಕುಶವಾಹ  ಅವರು ಪ್ರಧಾನಿ ಮಂತ್ರಿ ನರೇಂದ್ರ ಮೋದಿ  ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು. ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ ಸ್ಥಾನ ಹಂಚಿಕೆ ವಿಚಾರವಾಗಿ ಕುಶವಾಹ ಮತ್ತು  ಬಿಜೆಪಿಯ ನಡುವೆ ಕೆಲವು ತಿಂಗಳುಗಳಿಂದ ನಡೆಯತ್ತಿರುವ ಉದ್ಭವಿಸಿದ  ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ  ಒಂದು ದಿನ ಮುಂಚಿತವಾಗಿ ಬೆಳವಣಿಗೆ ನಡೆಯಿತು. ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ  ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಎನ್ ಡಿಎ ಮೈತ್ರಿಕೂಟದ ಅಂಗಪಕ್ಷಗಳ ಸಭೆ ದೆಹಲಿಯಲ್ಲಿ ಕುಶವಾಹ ಅವರು ಭಾಗವಹಿಸುವುದಿಲ್ಲ. ಸೀಟು ಹಂಚಿಕೆ ವಿಷಯದಲ್ಲಿ ನಿಲುವು ಸ್ಪಷ್ಟ ಪಡಿಸಲು ನವೆಂಬರ್ ೩೦ ರಂದು ಗಡುವನ್ನು ಪಕ್ಷವು  ಬಿಜೆಪಿಗೆ ನೀಡಿತ್ತು ಎಂದು ಪಕ್ಷದ ಕಾರ್ಯದರ್ಶಿ ಫಜಲ್ ಸ್ಪಷ್ಟಪಡಿಸಿದರು. "ಸೀಟು ಹಂಚಿಕೆ ಕುರಿತು ಶೀಘ್ರ  ನಿರ್ಧಾರ ತೆಗೆದುಕೊಳ್ಳದಿದ್ದರೆ ಅದು  ಎನ್ ಡಿಎಗೆ  ತುಂಬಾ ಹಾನಿಕಾರಕವಾಗಲಿದೆಎಂದು ನಾವು ಎಚ್ಚರಿಸಿದ್ದೆವು.. ನಮಗೆ  ನಾವು ಗೌರವಾನ್ವಿತ ಸಂಖ್ಯೆಯ ಸ್ಥಾನಗಳನ್ನು ಪಡೆಯಬೇಕಾಗಿದೆ ಎಂದು ಅವರು ನುಡಿದರು. ೨೦೧೪ ಚುನಾವಣೆಯಲ್ಲಿ ಎನ್ ಡಿ ಯಲ್ಲಿ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಆರ್ಎಲ್ಎಸ್ ಪಿ ಮೂರು ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ೨೨ ಸ್ಥಾನಗಳನ್ನು ಮತ್ತು ಎಲ್ ಜೆಪಿ  ಆರು ಸ್ಥಾನಗಳನ್ನು ಪಡೆದಿದ್ದವು.  ಆದರೆ, ಮಹಾಮೈತ್ರಿಯು ವಿಘಟಿತಗೊಂಡ ಬಳಿಕ ಕಳೆದ ವರ್ಷ ಜೆಡಿ (ಯು) ಎನ್ ಡಿಎ ಗೆ ವಾಪಸಾದ ಬಳಿಕ  ಸಮೀಕರಣ ಬದಲಾಯಿತು೨೦೧೯ ಲೋಕಸಭೆ ಚುನಾವಣೆಯಲ್ಲಿ ಆರ್ಎಲ್ಎಸ್ಪಿಗೆ ಎರಡು ಸ್ಥಾನಗಳನ್ನೂ ನೀಡಲಾಗಿಲ್ಲ  ಎಂದು ಕುಶವಾಹ  ಬಿಜೆಪಿಯೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿ(ಯು) ಸಮಾನ ಸಂಖ್ಯೆಯ ಸ್ಥಾನಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದವು. ಆರ್ಎಲ್ಎಸ್ ಪಿ ಈಗ ವಿರೋಧೀ ಕಾಂಗ್ರೆಸ್ ಜೊತೆ  ಕೈ ಜೋಡಿಸಬಹುದು ಎನ್ನಲಾಗಿದ್ದು, ಲಾಲು ಪ್ರಸಾದ್ ಅವರ ಆರ್ ಜೆ ಡಿ ಮತ್ತು ಕಾಂಗ್ರೆಸ್ ಈಗಾಗಲೇ ಕಾಂಗ್ರೆಸ್ ಜೊತೆ ಸೇರಿವೆ. ಲೋಕಸಭೆಗೆ ಬಿಹಾರ ೪೦ ಎಂಪಿಗಳನ್ನು ಕಳುಹಿಸುತ್ತದೆ.

2018: ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ ದುಬೈಯಿಂದ ಭಾರತಕ್ಕೆ ಗಡೀಪಾರಾಗಿ ಬಂದಿರುವ ಮಧ್ಯವರ್ತಿ ಕ್ರಿಸ್ಟಿಯನ್ ಮೈಕೆಲ್, ಐದು ದಿನಗಳ ಸಿಬಿಐ ತನಿಖೆಯಲ್ಲಿ ಬಾಯಿ ಬಿಡದ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಮೈಕೆಲ್ಗೆ ಮತ್ತೆ ಐದು ದಿನಗಳ ಸಿಬಿಐ ರಿಮಾಂಡ್ ಮಂಜೂರು ಮಾಡಿದರು. ಐದು ದಿನಗಳ ಸಿಬಿಐ ರಿಮಾಂಡ್ ಮುಕ್ತಾಯವಾದ ಕಾರಣ ಕ್ರಿಸ್ಟಿಯನ್ ಮೈಕೆಲ್ನನ್ನು ವಿಶೇಷ ಸಿಬಿಐ ನ್ಯಾಯಾಧೀಶ ಅರವಿಂದ ಕುಮಾರ್ ಅವರ ಎದುರು ಹಾಜರು ಪಡಿಸಲಾಗಿತ್ತು. ಪ್ರಕರಣದ ತನಿಖೆಯಲ್ಲಿ ಕ್ರಿಸ್ಟಿಯನ್ ಮೈಕೆಲ್ ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಸಿಬಿಐ, ಆತನನ್ನು ಮತ್ತೆ ದಿನಗಳ ಅವಧಿಗೆ ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿಕೆ ಮಂಡಿಸಿತು.ಮೈಕೆಲ್ ಪರ ವಕೀಲರ ಕಸ್ಟಡಿ ವಿಸ್ತರಣೆಯ ಸಿಬಿಐ ಮನವಿಯನ್ನು ವಿರೋಧಿಸಿದರು. ಮೈಕೆಲ್ ವಿರುದ್ಧ ದೋಷಾರೋಪಣೆ ಮಾಡುವಂತಹ ಯಾವುದೇ ದಾಖಲೆಯನ್ನೂ ಈವರೆಗೆ ತೋರಿಸಿಲ್ಲವಾದ್ದರಿಂದ ಸಿಬಿಐ ಕಸ್ಟಡಿ ವಿಸ್ತರಣೆಯ ಅಗತ್ಯವಿಲ್ಲ ಎಂದು ಮೈಕೆಲ್ ಪರ ವಕೀಲರು ವಾದಿಸಿದರು. ಮಧ್ಯೆ ತನ್ನ ಹಿಂದಿನ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡ ಮೈಕೆಲ್, ಹೊಸದಾಗಿ ವಿಸ್ತೃತ ಜಾಮೀನು ಅರ್ಜಿಯನ್ನು ಸಲ್ಲಿಸಿದ. ಇಂಗ್ಲೆಂಡ್ ಪ್ರಜೆಯಾಗಿರುವ ಮೈಕೆಲ್ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ (ಯುಎಇ) ಡಿಸೆಂಬರ್ ರಾತ್ರಿ ಭಾರತಕ್ಕೆ  ಗಡೀಪಾರು ಮಾಡಲಾಗಿತ್ತು. ಭಾರತಕ್ಕೆ ತಂದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ತನಿಖೆಯ ಸಲುವಾಗಿ ಐದು ದಿನಗಳ ಸಿಬಿಐ ಕಸ್ಟಡಿ ಮಂಜೂರು ಮಾಡಿತ್ತು. ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸೇರಿದಂತೆ ಸಂಬಂಧ ಪಟ್ಟ ಎಲ್ಲ ದಾಖಲೆಗಳನ್ನೂ ಆರೋಪಿಗೆ ನೀಡುವಂತೆ ಕೋರ್ಟ್ ಆಜ್ಞಾಪಿಸಿತ್ತು.ಮೈಕೆಲ್ನನ್ನು ಹಾಜರು ಪಡಿಸುವ ಮುನ್ನವೇ ಪಾಟಿಯಾಲ ಹೌಸ್ ನ್ಯಾಯಾಲಯ ಸಮುಚ್ಚಯದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ೧೫-೨೦ ಸಿಆರ್ಪಿ ಎಫ್ ಮತ್ತು ೩೦ ಮಂದಿ ದೆಹಲಿ ಪೊಲೀಸರನ್ನು ನ್ಯಾಯಾಲಯ ಸಮುಚ್ಚಯದಲ್ಲಿ ಮತ್ತು ಎಲ್ಲ ಮಹಾದ್ವಾರಗಳ ಬಳಿಯಲ್ಲೂ ನಿಯೋಜಿಸಲಾಗಿತ್ತು. ನಿಯೋಜಿತ ಸಿಬ್ಬಂದಿಯಲ್ಲಿ ಮಹಿಳಾ ಅಧಿಕಾರಿಗಳೂ ಇದ್ದರು. ೫೪ರ ಹರೆಯದ ಕ್ರಿಸ್ಟಿಯನ್ ಮೈಕಲ್ ಡಿಸೆಂಬರ್ ೪ರ ರಾತ್ರಿ ೧೦.೩೫ ಗಂಟೆಗೆ ಗಲ್ಫ್ ಸ್ಟ್ರೀಮ್ ಜೆಟ್ ಮೂಲಕ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಬಂದ ತತ್ ಕ್ಷಣವೇ ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆತನನ್ನು ಬಂಧಿಸಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಒಳಪಟ್ಟಿರುವ ಮೂವರು ಮಧ್ಯವರ್ತಿಗಳ ಪೈಕಿ ಕ್ರಿಸ್ಟಿಯನ್ ಮೈಕೆಲ್ ಒಬ್ಬನಾಗಿದ್ದು, ಇತರ ಇಬ್ಬರು ಆರೋಪಿಗಳಾದ ಗುಯಿಡೊ ಹಶ್ಚಕೆ ಮತ್ತು ಕಾರ್ಲೊ ಗೆರೋಸಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಇಂಟರ್ ಪೋಲ್ಗೆ ವರದಿ ಮಾಡಿದ್ದು ಇಂಟರ್ ಪೋಲ್ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಿದೆ. ಉಳಿದ ಇಬ್ಬರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ೫೫೬.೨೬೨ ಮಿಲಿಯನ್ ಯೂರೋ ಮೌಲ್ಯದ ವಿವಿಐಪಿ ಹೆಲಿಕಾಪ್ಟರ್ಗಳ ಸರಬರಾಜಿಗಾಗಿ ೨೦೧೦ರ ಫೆಬ್ರುವರಿ ೮ರಂದು ಸಹಿ ಮಾಡಲಾದ ಒಪ್ಪಂದದಿಂದ ಬೊಕ್ಕಸಕ್ಕೆ ಅಂದಾಜು ೩೯೮.೨೧ ಮಿಲಿಯನ್ ಯೂರೋ ( ಸುಮಾರು ,೬೬೬ ಕೋಟಿ ರೂಪಾಯಿ) ನಷ್ಟವಾಗಿದೆ ಎಂದು ಸಿಬಿಐ ಆಪಾದಿಸಿತ್ತು.೨೦೧೬ರ ಜೂನ್ ತಿಂಗಳಲ್ಲಿ ಮೈಕೆಲ್ ವಿರುದ್ಧ ದಾಖಲಿಸಿದ್ದ ತನ್ನ ದೋಷಾರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯಿಂದ ೩೦ ಮಿಲಿಯನ್ ಯೂರ್ (ಸುಮಾರು ೨೨೫ ಕೋಟಿ ರೂಪಾಯಿ) ಮೈಕೆಲ್ ಗೆ ಸಂದಾಯವಾಗಿತ್ತು ಎಂದು ಆಪಾದಿಸಿತ್ತು. ಹಣವು ೧೨ ಹೆಲಿಕಾಪ್ಟರ್ ವ್ಯವಹಾರವನ್ನು ಅನುಷ್ಠಾನಗೊಳಿಸಲು ಸಂಸ್ಥೆಯಿಂದ ಪಾವತಿ ಮಾಡಲಾದ ಲಂಚ (ಕಿಕ್ ಬ್ಯಾಕ್) ಹೊರತು ಬೇರೇನಲ್ಲ. ರಾಷ್ಟ್ರದಲ್ಲಿ ವಿವಿಧ ಕೆಲಸಗಳ ಗುತ್ತಿಗೆ (ಕಾಂಟ್ರಾಕ್ಟ್) ಮೂಲಕ ಸಂಸ್ಥೆಯ ಪರವಾಗಿ ವಹಿವಾಟು ಅನುಷ್ಠಾನಕ್ಕಾಗಿ ಹಣ ಪಾವತಿ ಮಾಡಲಾಗಿತ್ತು ಎಂದು ದೋಷಾರೋಪ ಪಟ್ಟಿ ಹೇಳಿತ್ತು.ಮೈಕೆಲ್ ಗೆ ಆತನ ದುಬೈ ಮೂಲದ ಗ್ಲೋಬಲ್ ಸರ್ವೀಸಸ್ ಮೂಲಕ ಹಣವನ್ನು ಪಾವತಿ ಮಾಡಲಾಗಿದ್ದುದನ್ನು ಜಾರಿ ನಿರ್ದೇಶನಾಲಯದ ತನಿಖೆ ಪತ್ತೆ ಹಚ್ಚಿತ್ತು. ದೆಹಲಿಯಲ್ಲಿ ಇಬ್ಬರು ಭಾರತೀಯರ ಜೊತೆಗೆ ಆರಂಭಿಸಲಾಗಿದ್ದ್ದ ಮಾಧ್ಯಮ ಸಂಸ್ಥೆಗೆ, ಅಗಸ್ಟಾ ವೆಸ್ಟ್ ಲ್ಯಾಂಡ್ ಮೂಲಕ ತನಗೆ ಲಭಿಸಿದ ಹಣವನ್ನು ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಚಟುವಟಿಕೆಗಳ ಸಲುವಾಗಿ ಆತ ನೀಡಿದ್ದ ಎಂದು ದೋಷಾರೋಪ ಪಟ್ಟಿ ತಿಳಿಸಿತ್ತು೧೨ ಡಬ್ಲ್ಯೂ - ೧೦೧ ವಿವಿಐಪಿ ಹೆಲಿಕಾಪ್ಟರುಗಳನ್ನು ಭಾರತೀಯ ವಾಯುಪಡೆಗೆ ಸರಬರಾಜು ಮಾಡುವ ಸಲುವಾಗಿ ಇಟಲಿ ಮೂಲಕ ಫಿನ್ಮೆಕ್ಕಾನಿಕಾದ ಬ್ರಿಟಿಶ್ ಆಧೀನ ಸಂಸ್ಥೆ ಅಗಸ್ಟಾ ವೆಸ್ಟ್ಲ್ಯಾಂಡ್ ಜೊತೆಗೆ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಭಾರತವು ೨೦೧೪ರ ಜನವರಿ ೧ರಂದು ರದ್ದು ಪಡಿಸಿತ್ತು. ವಹಿವಾಟು ಗಳಿಕೆಗಾಗಿ ೪೨೩ ಕೋಟಿ ರೂಪಾಯಿಗಳಷ್ಟು ಮೊತ್ತದ ಲಂಚ ನೀಡಲಾಗಿದೆ ಮತ್ತು ಗುತ್ತಿಗೆ ಬದ್ಧತೆಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಗಳನ್ನು ಭಾರತವು ಒಪ್ಪಂದ ರದ್ದಿಗೆ ನೀಡಿತ್ತುದೋಷಾರೋಪ ಪಟ್ಟಿ: ೨೦೧೭ರ ಸೆಪ್ಟೆಂಬರ್ ೧ರಂದು, ಸಿಬಿಐ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು ಅದರಲ್ಲಿ ಮೈಕೆಲ್ ಹೆಸರನ್ನು ಆರೋಪಿಗಳ ಪೈಕಿ ಒಬ್ಬರಾಗಿ ಹೆಸರಿಸಲಾಗಿತ್ತು. ವಿವಿಐಪಿ ಹೆಲಿಕಾಪ್ಟರ್ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಇತರ ಒಂಬತ್ತು ಮಂದಿಯ ಜೊತೆಗೆ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ. ತ್ಯಾಗಿ ಅವರ ವಿರುದ್ಧವೂ ದೆಹಲಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆಮೈಕೆಲ್ ಗೆ ಸಿಬಿಐ ಪ್ರಶ್ನಾವಳಿ: ಮಧ್ಯೆ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐದು ಅಂಶಗಳ ಪ್ರಶ್ನಾವಳಿಯೊಂದನ್ನು ದುಬೈಯಿಂದ ಗಡೀಪಾರಾಗಿ ಭಾರತಕ್ಕೆ ಬಂದಿರುವ ಕ್ರಿಸ್ಟಿಯನ್ ಮೈಕೆಲ್ಗೆ ನೀಡಿತ್ತುಇದರಲ್ಲಿ ನಿಗೂಢವಾದಎಪಿ ಮತ್ತುಎಫ್ ಎಂ ಗುರುತು ವಿವರಿಸುವಂತೆ ಸಿಬಿಐ ಸೂಚಿಸಿತ್ತು. ಸೂಚಿಸಲಾದ ಇಬ್ಬರು ವ್ಯಕ್ತಿಗಳಿಗೆ ವ್ಯಕ್ತಿಗಳಿಗೆ ನೀಡಲಾದ ಲಂಚದ ಮೊತ್ತ ಮತ್ತು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳ ಜೊತೆಗಿನ ಶಂಕಿತ ಸಂಪರ್ಕಗಳ ಬಗೆಗೂ ಸಿಬಿಐ ಮೈಕೆಲ್ ಬಳಿ ಪ್ರಶ್ನಿಸಿತ್ತು.ಮೂಲಗಳ ಪ್ರಕಾರ ಮೈಕಲ್ ಗೆ ಕೇಳಲಾಗಿರುವ ಪ್ರಶ್ನೆಗಳು ಕೆಳಗಿನಂತಿದ್ದವು: -’ಎಪಿ ಮತ್ತುಎಫ್ ಎಎಂ ಯಾರು? ಅವರಿಗೆ ನೀಡಲಾಗಿರುವ ಲಂಚದ ಮೊತ್ತ ಎಷ್ಟು? -ಗುತ್ತಿಗೆ ನೀಡಿಕೆ ಪ್ರಕ್ರಿಯೆಯನ್ನು ನೀವು ನಿಕಟವಾಗಿ ಗಮನಿಸುತ್ತಿದ್ದಿರಾ? -ವಾಯುಪಡೆಯ ಹಿರಿಯ ಅಧಿಕಾರಿಗಳ ಜೊತೆಗೆ ನಿಮಗೆ ಎಂತಹ ಸಂರ್ಪಕ ಇತ್ತು?  -ನಿಮ್ಮಿಂದ ಅನುಷ್ಠಾನಗೊಂಡ ನಕಲಿ ಗುತ್ತಿಗೆಗಳ ಮೂಲಕ ನೀವು ಲಂಚ ಪಡೆದಿದ್ದೀರಾ-ಅಗಸ್ಟಾಕ್ಕೆ ಸರಿಹೊಂದುವಂತೆ ಎತ್ತರದ ನಿರ್ದಿಷ್ಟ ವಿವರಣೆಗಳನ್ನು ಬದಲಾಯಿಸುವಂತೆ ನೀವು ಐಎಎಫ್ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಿರಾ? ಹೆಲಿಕಾಪ್ಟರ್ ಹಗರಣದ ಇನ್ನೊಬ್ಬ ಮಧ್ಯವರ್ತಿ ಗುಯಿಡೊ ಹಶ್ಚಕೆ ಬರೆದದ್ದು ಎಂದು ಆಪಾದಿಸಲಾದ ಟಿಪ್ಪಣಿಯೊಂದರಲ್ಲಿಎಪಿ ಮತ್ತುಎಫ್ ಎಎಂ ಸಂಕ್ಷೇಪಾಕ್ಷರಗಳು ಮೊತ್ತ ಮೊದಲಿಗೆ ಕಂಡು ಬಂದಿದ್ದವು. ತಪ್ಪು ಲೆಕ್ಕ ಮತ್ತು ಭ್ರಷ್ಟಾಚಾರಕ್ಕಾಗಿ ಅಗಸ್ಟಾ ವೆಸ್ಟ್ ಲ್ಯಾಂಡ್ ಮಾಜಿ ಮುಖ್ಯಸ್ಥ ಬ್ರೂನೋ ಸ್ಪಾಗ್ನೊಲಿನಿ ಅವರನ್ನು ಮತ್ತು ಫಿನ್ಮೆಕ್ಯಾನಿಕಾದ ಮಾಜಿ ಸಿಇಒ ಗುಯಿಸೆಪ್ಪೆ ಒರ್ಸಿ ಅವರನ್ನು ಇಟಲಿಯ ನ್ಯಾಯಾಲಯವೊಂದು ಜೈಲಿಗೆ ಕಳುಹಿಸಿದಾಗ ಟಿಪ್ಪಣಿಯನ್ನು ಉಲ್ಲೇಖಿಸಲಾಗಿತ್ತುಎಪಿ ಸಂಕ್ಷೇಪಾಕ್ಷರವು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರ ನಿಕಟವರ್ತಿ ಹಾಗೂ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಅವರದ್ದಾಗಿದ್ದು, ’ಎಫ್ ಎಎಂ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ್ದು ಎಂದು ಬಿಜೆಪಿ ಆಪಾದಿಸಿತ್ತು. ಕ್ರಿಸ್ಟಿಯನ್ ಮೈಕಲ್ ಗಡೀಪಾರಿನೊಂದಿಗೆ ಹಗರಣದ ಎಲ್ಲ ಪ್ರಮುಖರ ಹೆಸರುಗಳೂ ಬಹಿರಂಗಗೊಳ್ಳಲಿವೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
 2017: ಪಾಲನ್ ಪುರ (ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ನಡೆಸುತ್ತಿದೆ ಎಂದು ಇಲ್ಲಿ ಆಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಉನ್ನತ ನಾಯಕರು ಇತ್ತೀಚೆಗೆ ಪಾಕ್ ನಾಯಕರನ್ನು ಭೇಟಿ ಮಾಡಿದ್ದೇಕೆ ಎಂದು ಪಕ್ಷವು ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.  ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಪಾಕಿಸ್ತಾನಿ ಸೇನೆಯ ಮಾಜಿ ಮಹಾ ನಿರ್ದೇಶಕ ಸರ್ದಾರ್ ಅರ್ಷದ್ ರಫೀಕ್ ಅವರು ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರಧಾನಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.  ಪಾಕಿಸ್ತಾನಿ ನಾಯಕರು ಉನ್ನತ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಮಣಿ ಶಂಕರ ಅಯ್ಯರ್ ಅವರು ತಮ್ಮನ್ನು ’ನೀಚ ಎಂಬುದಾಗಿ ಕರೆದರು ಪ್ರಧಾನಿ ಆಪಾದಿಸಿದರು. ಮಣಿ ಶಂಕರ ಅಯ್ಯರ್ ಅವರ ಮನೆಯಲ್ಲಿ ಸಭೆ ನಡೆದಿರುವ ಬಗ್ಗೆ ಮಾಧ್ಯಮ ವರದಿಗಳು ಬಂದಿವೆ. ಸಭೆಯಲ್ಲಿ ಪಾಕಿಸ್ತಾನದ ಹೈಕಮೀಷನರ್, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಭಾರತದ ಮಾಜಿ ಉಪ ರಾಷ್ಟ್ರಪತಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಲ್ಗೊಂಡಿದ್ದರು ಎಂದು ಮೋದಿ ಹೇಳಿದರು.  ‘ಅಯ್ಯರ್ ಮನೆಯಲ್ಲಿ ನಡೆದ ಈ ಸಭೆ ಸುಮಾರು ೩ ಗಂಟೆ ಕಾಲ ನಡೆಯಿತು. ಸಭೆಯ ಮರುದಿನವೇ ಮಣಿ ಶಂಕರ ಅಯ್ಯರ್ ’ಮೋದಿ ನೀಚ ವ್ಯಕ್ತಿ ಎಂದು ಹೇಳಿದರು ಎಂದು ಪ್ರಧಾನಿ ನುಡಿದರು.  ‘ಇದು ಅತ್ಯಂತ ಗಂಭೀರ ವಿಷಯ ಎಂದೂ ಅವರು ಹೇಳಿದರು. ಅರ್ಷದ್ ರಫೀಕ್ ಅವರು ಮುಂದಿನ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಅಹ್ಮದ್ ಪಟೇಲ್ ಅವರನ್ನು ಬೆಂಬಲಿಸಿದರು ಎಂದೂ ಮೋದಿ ಹೇಳಿದರು. ಒಂದೆಡೆಯಲ್ಲಿ ಪಾಕಿಸ್ತಾನ ಸೇನೆಯ ಮಾಜಿ ಮಹಾ ನಿರ್ದೇಶಕರು ಗುಜರಾತ್ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ಇನ್ನೊಂದೆಡೆಯಲ್ಲಿ ಪಾಕಿಸ್ತಾನದ ಜನರು ಮಣಿ ಶಂಕರ ಅಯ್ಯರ್ ಅವರ ಮನೆಯಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಅವರು ನುಡಿದರು. ‘ಈ ಸಭೆಯ ಬಳಿಕ ಗುಜರಾತಿನ ಜನತೆ, ಹಿಂದುಳಿದ ಸಮುದಾಯಗಳು, ಬಡ ಜನತೆ ಮತ್ತು ಮೋದಿಯನ್ನು ಅವಮಾನಿಸಲಾಯಿತು. ಇಂತಹ ಘಟನೆಗಳು ಅನುಮಾನ ಹುಟ್ಟಿಸುತ್ತವೆ ಎಂದು ನಿಮಗೆ ಅನಿಸುತ್ತಿಲ್ಲವೇ? ಎಂದು ಮೋದಿ ಪ್ರಶ್ನಿಸಿದರು. ತಾನು ನಿಖರವಾಗಿ ಏನು ಮಾಡಬಯಸಿರುವುದಾಗಿ ರಾಷ್ಟ್ರದ ಜನತೆಗೆ ಕಾಂಗ್ರೆಸ್ ವಿವರಿಸಬೇಕು ಎಂದು ಅವರು ನುಡಿದರು. ಮೋದಿ ಅವರು ಗುಜರಾತ್ ವಿಧಾನಸಭೆಗೆ ಡಿಸೆಂಬರ್ ೧೪ ರಂದು ನಡೆಯಲಿರುವ ೨ನೇ ಹಂತದ ಚುನಾವಣೆಗಾಗಿ ಉತ್ತರ ಮತ್ತು ಮಧ್ಯ ಗುಜರಾತಿನ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿದರು.

2017: ಭುವನೇಶ್ವರ: ಅತ್ಯಂತ ಸಮಯೋಚಿತ ಆಕ್ರಮಣಕಾರಿ ಆಟವಾಡಿದ ಭಾರತ ಹಾಕಿ ತಂಡ ಜರ್ಮನಿ ತಂಡದ ವಿರುದ್ಧ ಜಯ ಗಳಿಸಿ ಕಂಚಿನ ಪದಕ ಗಳಿಸಿತು. ಭುವನೇಶ್ವರದಲ್ಲಿ ನಡೆದ  ವಿಶ್ವ ಹಾಕಿ ಲೀಗ್ ಪಂದ್ಯದಲ್ಲಿ ಭಾರತ ಹಾಕಿ ತಂಡದ ಪರವಾಗಿ ಎಸ್ವಿ ಸುನಿಲ್‌ (20), ಹರ್ಮನ್ಪ್ರೀತ್ಸಿಂಗ್ (54) ಗಳಿಸಿದ ಗೋಲುಗಳ ನೆರವಿನಿಂದ ಜರ್ಮನಿ ತಂಡದ ವಿರುದ್ಧ 2-1 ಗೋಲುಗಳ ಅಂತರದಿಂದ ಜಯಗಳಿಸಿತು. ಜರ್ಮನಿ ತಂಡದ ಪರವಾಗಿ ಮಾರ್ಕ್ಆಪಲ್‌ (36) ಗೋಲು ಗಳಿಸಿದರು. ಪಂದ್ಯ ಆರಂಭವಾದ 20ನೇ ನಿಮಿಷದಲ್ಲಿ ಇಯೇ ಸುನಿಲ್ ಗೋಲು ಗಳಿಸಿದರು. ಮೊದಲಾರ್ಧದಲ್ಲಿ ಮುನ್ನಡೆ ಹೊಂದಿದ್ದ ಭಾರತ ದ್ವಿತೀಯಾರ್ಧದ ಆರಂಭದಲ್ಲಿಯೇ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಟ್ಟಿತು. ಮಾರ್ಕ್ಗಳಿಸಿದ ಗೋಲಿನಿಂದ ಪಂದ್ಯ ಸಮಸ್ಥಿತಿಗೆ ತಲುಪಿತು.
\
2017: ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಇದೀಗ ೧೯೮೪ ಮತ್ತು ೧೯೯೨ರ ಗಲಭೆಗಳು ಪ್ರವೇಶವಾಗಿವೆ. ಸೋನಿಯಾ ಗಾಂಧಿ ಅವರು ಅಮೃತಸರ ಸ್ವರ್ಣ ದೇಗುಲದಲ್ಲಿ ಮಾಡಿದಂತೆ ಜಾಮಾ ಮಸೀದಿಯಲ್ಲಿ ಕ್ಷಮಾಯಾಚನೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ಚರಣ್ ಸಿಂಗ್ ಸಪ್ರಾ ಸವಾಲು ಹಾಕಿದರು. ‘ನನ್ನ ಪಕ್ಷವಾಗಲೀ ನಾನಾಗಲೀ ೧೯೮೪ರ (ಸಿಖ್ ವಿರೋಧಿ) ಗಲಭೆಗಳನ್ನು ಬೆಂಬಲಿಸಿರಲಿಲ್ಲ. ಸೋನಿಯಾ ಗಾಂಧಿ ಅವರು ಸ್ವರ್ಣದೇಗುಲಕ್ಕೆ ಭೇಟಿ ನೀಡಿ ಮಾಧ್ಯಮದ ಮುಂದೆ ಕ್ಷಮೆ ಯಾಚಿಸಿದರು. ಮನಮೋಹನ್ ಸಿಂಗ್ ಅವರೂ ಸಂಸತ್ತಿನಲ್ಲಿ ಕ್ಷಮೆ ಯಾಚಿಸಿದ್ದಾರೆ. ಕಳೆದ ೩೩ ವರ್ಷಗಳಲ್ಲಿ, ಬಿಜೆಪಿ ನಮ್ಮ ನೋವಿಗೆ ಉಪ್ಪು ಸವರುತ್ತಿದೆ. ನರೇಂದ್ರ ಮೋದಿ ಅವರು ಜಮಾ ಮಸೀದಿಗೆ ಭೇಟಿ ನೀಡಿ ೧೯೯೨ರ ಗಲಭೆಗಳಿಗಾಗಿ ಕ್ಷಮೆ ಯಾಚಿಸುವರೇ ಎಂದು ಪಂಜಾಬಿನ ಕಾಂಗ್ರೆಸ್ ನಾಯಕ ಸುದ್ದಿ ಮಾಧ್ಯಮವೊಂದು ಸಂಘಟಿಸಿದ ಸಮಾರಂಭದಲ್ಲಿ ಪ್ರಶ್ನಿಸಿದರು. ೧೯೮೪ರಲ್ಲಿ ಸಿಖ್ ಅಂಗರಕ್ಷಕರು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ ಬಳಿಕ ಗಲಭೆಗಳು ಬುಗಿಲೆದ್ದಿದ್ದರೆ, ೧೯೯೨ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ ಗಲಭೆಗಳು ಸಂಭವಿಸಿದ್ದವು. ಸಪ್ರಾ ಹೇಳಿಕೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ’ಕಾಂಗ್ರೆಸ್ ಪಕ್ಷವು ಗುಜರಾತ್ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ದಂಗೆಗಳ ವಿಚಾರವನ್ನು ಪ್ರಸ್ತಾಪಿಸಿದೆ ಎದಿರೇಟು ನೀಡಿದರು.  ‘೨೦೦೨ರ ಗಲಭೆಗಳಿಗಾಗಿ ಮೋದಿ ಅವರು ಜಾಮಾ ಮಸೀದಿಗೆ ತೆರಳಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ವಕ್ತಾರರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಪ್ರೇರಿತ ಎನ್ ಜಿಒ ಒಂದು ೨೦೦೨ರ ದಂಗೆಗಳಿಗೆ ಸಂಬಂಧಿಸಿದಂತೆ ಮೋದಿ ವಿರುದ್ಧ ಮಾಡಿದ ಯಾವುದೇ ಆರೋಪವೂ ಸಾಬೀತಾಗಿಲ್ಲ ಎಂಬುದು ಇಡೀ ದೇಶದ ಜನರಿಗೆ ತಿಳಿದಿದೆ ಎಂದು ಶಾ  ಹೇಳಿದರು. ‘ಜಿಗ್ನೇಶ್ ಮೇವಾನಿ ಅವರು ಪಿಎಫ್ ಐ ಇಂದ ಹಣ ಸ್ವೀಕರಿಸುತ್ತಿರುವ ಚಿತ್ರಗಳು ವೈರಲ್ ಆಗಿದೆ. ಪಿಎಫ್ ಐ ಯಾವಾಗಲೂ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಘಟನೆ. ರಾಹುಲ್ ಗಾಂಧಿ ಅವರು ಇಂತಹ ರಾಷ್ಟ್ರವಿರೋಧಿ ಸಂಘಟನೆಗಳ ಜೊತೆಗೆ ಬಾಂಧವ್ಯ ಹೊಂದಿರುವ ವ್ಯಕ್ತಿಗಳನ್ನು ಭೇಟಿ ಮಾಡುತ್ತಾರೆ ಮತ್ತು ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಅವರಿಗೆ ಸೀಟು ನೀಡುತ್ತಾರೆ ಎಂದು ಅಮಿತ್ ಶಾ ಪತ್ರಿಕಾಗೋಷ್ಠಿಯಲ್ಲಿ ನುಡಿದರು. ಸತತ ಐದನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಯತ್ನಿಸುತ್ತಿರುವ ಬಿಜೆಪಿ ಗುಜರಾತಿನಲ್ಲಿ ತೀವ್ರ ಪ್ರಚಾರದಲ್ಲಿ ನಿರತವಾಗಿರುವಾಗ ಸಪ್ರಾ ಅವರ ಹೇಳಿಕೆ ಬಂದಿದೆ. ಇದೇ ವೇಳೆಗೆ ಕಾಂಗ್ರೆಸ್ ಮತ್ತೆ ಚೇತರಿಸಿಕೊಳ್ಳುವ ಸಲುವಾಗಿ ತೀವ್ರ ಹೋರಾಟ ನಡೆಸುತ್ತಿದೆ. ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರದೇಶಗಳಲ್ಲಿ ಡಿ.9ರ ಶನಿವಾರ ಚುನಾವಣೆ ನಡೆದಿದ್ದು ಶೇಕಡಾ ೬೮ರಷ್ಟು ಮತದಾನವಾಗಿದೆ. ಎರಡನೇ ಹಂತದ ಮತದಾನ ಡಿಸೆಂಬರ್ ೧೪ರಂದು ನಡೆಯಲಿದೆ. ಈ ಮಧ್ಯೆ ರಾಹುಲ್ ಗಾಂಧಿ ಅವರು ಮೋದಿ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿ ಮೋದಿ ಅವರು ತಮ್ಮ ಬಗ್ಗೆ ಮಾತ್ರವೇ ಮಾತನಾಡುತ್ತಾರೆ ಎಂದು ಟೀಕಿಸಿದರು. ’ನಾನು ಮೋದಿ ಅವರ ನಿನ್ನೆಯ ಭಾಷಣವನ್ನು ಆಲಿಸಿದ್ದೇನೆ. ಅವರ ಭಾಷಣದಲ್ಲಿ  ಶೇಕಡಾ ೯೦ರಷ್ಟು ಭಾಷಣ ಕೇವರ ಸ್ವಂತದ ಬಗೆಗಷ್ಟೇ ಇತ್ತು ಎಂದು ಗುಜರಾತಿನ ಡಕೋರ್ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ರಾಹುಲ್ ಹೇಳಿದರು.  ಏನಿದ್ದರೂ ಪ್ರಧಾನಿ ವಿರುದ್ಧ ಮಣಿ ಶಂಕರ ಅಯ್ಯರ್ ಅವರು ಪ್ರಯೋಗಿಸಿದ ಪದದ ಬಗ್ಗೆ ಪ್ತಸ್ತಾಪಿಸಿದ ರಾಹುಲ್, ’ಯಾರೇ ಕಾಂಗ್ರೆಸ್ಸಿಗರು ಪ್ರಧಾನಿ ವಿರುದ್ಧ ಇಂತಹ ಕೆಟ್ಟ ಭಾಷೆ ಬಳಸಬಾರದು. ’ಅವರು ಪ್ರಧಾನಿ, ನಿಂದನೀಯ ಪದಗಳನ್ನು ಬಳಸಬೇಡಿ ಎಂದು ನುಡಿದರು. 
2017: ಶ್ರೀನಗರ: ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆಪಾದಿಸಿ ವಿಶ್ವ ಸಂಸ್ಥೆಯ ಸ್ಥಳೀಯ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದ ಜೆಕೆಎಲ್ ಎಫ್ ಅಧ್ಯಕ್ಷ ಮೊಹಮ್ಮದ್ ಯಾಸೀನ್ ಮಲಿಕ್ ಅವರನ್ನು ಭಾನುವಾರ ಇಲ್ಲಿ ಬಂಧಿಸಲಾಯಿತು. ನಗರದದ ಲಾಲ್ ಚೌಕ ಸಮೀಪಕ್ಕೆ ತಲುಪಿದಾಗ ಮಲಿಕ್ ಅವರನ್ನು ಬಂಧಿಸಲಾಯಿತು. ಸೋನ್ವಾರ್ ನಲ್ಲಿ ಪಾಕಿಸ್ತಾನ ಮತ್ತು ಭಾರತದ ಸೇನಾ ವೀಕ್ಷಣೆ ನಡೆಸುವ ವಿಶ್ವಸಂಸ್ಥೆ  ತಂಡದ ಕಚೇರಿಯ ಕಡೆಗೆ ಮೆರವಣಿಗೆಯಲ್ಲಿ ಸಾಗಲು ಯತ್ನಿಸುವಾಗ ಮಲಿಕ್ ಬಂಧನ ನಡೆಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪ್ರತಿಭಟನಾ ಮೆರವಣಿಗೆಯನ್ನು ವಿಫಲಗೊಳಿಸಿದ ಪೊಲೀಸರು ಮಲಿಕ್ ಅವರನ್ನು ಬಂಧಿಸಿ ಕೋತಿಬಾಗ್ ಪೊಲೀಸ್ ಠಾಣೆಗೆ ಒಯ್ದರು ಎಂದು ಅವರು ನುಡಿದರು. ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಹರತಾಳ ಆಚರಿಸುವಂತೆ ಮತ್ತು ವಿಶ್ವ ಸಂಸ್ಥೆಯ ಸ್ಥಳೀಯ ಕಚೇರಿಗೆ ಮೆರವಣಿಗೆ ನಡೆಸುವಂತೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದರು. ‘ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನವಾದ ಡಿಸೆಂಬರ್ ೧೦ ರಂದು ಕಾಶ್ಮೀರಿಗಳು ಸಂಪೂರ್ಣ ಬಂದ್ ಆಚರಿಸುವರು ಎಂದು ಪ್ರತ್ಯೇಕತಾವಾದಿಗಳು ಜಂಟಿ ಪ್ರತಿರೋಧ ನಾಯಕತ್ವ (ಜೆಆರ್ ಎಲ್) ಹೆಸರಿನಲ್ಲಿ ನೀಡಲಾದ ಹೇಳಿಕೆಯಲ್ಲಿ ತಿಳಿಸಿದ್ದರು.  ಸೈಯದ್ ಅಲಿ ಶಾ ಗೀಲಾನಿ, ಮೀರ್‌ವಾಜ್ ಉಮರ್ ಫಾರೂಕ್  ಮತ್ತು ಮೊಹಮ್ಮದ್  ಯಾಸೀನ್ ಮಲಿಕ್ ಸೇರಿ ಜೆಆರ್ ಎಲ್ ಸ್ಥಾಪಿಸಿಕೊಂಡಿದ್ದರು.
2017: ಬರ್ಲಿನ್: ಜರ್ಮನ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ವೈಯಕ್ತಿಕ ಮಾಹಿತಿ ಕಲೆ ಹಾಕಲು ಚೀನೀ ಗುಪ್ತಚರ ಇಲಾಖೆಯು ಸೃಷ್ಟಿಸಿದ ’ಕಪಟ ಪ್ರೊಫೈಲ್ಗಳನ್ನು ಜರ್ಮನಿಯ ಗುಪ್ತಚರ ಸಂಸ್ಥೆ ಪತ್ತೆ ಮಾಡಿದ್ದು ಅವುಗಳ ವಿವರಗಳನ್ನು ಬಹಿರಂಗ ಗೊಳಿಸಿತು. ‘ಕಪಟ ವೈಯಕ್ತಿಕ ಪ್ರೊಫೈಲ್ ಗಳನ್ನು ಹೆಸರಿಸುವ ಅಸಾಧಾರಣ  ಕ್ರಮವನ್ನು ಜರ್ಮನಿಯ ಗುಪ್ತಚರ ಸಂಸ್ಥೆ ಬಿಎಫ್ ವಿ  ಡೊಮೆಸ್ಟಿಕ್ ಇಂಟಲಿಜೆನ್ಸ್ ಸರ್ವೀಸ್ ಕೈಗೊಂಡಿತು. ಈ ಕಪಟ ಸಂಘಟನೆಗಳು ಕಪಟ ಪ್ರೊಫೈಲ್ ಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮಗಳ ಮೂಲಕ ಸರ್ಕಾರಿ ಅಧಿಕಾರಿಗಳ ಮಹತ್ವದ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಅಪಾಯವಿದೆ ಎಂದು ಬಿಎಫ್ ವಿ ಎಚ್ಚರಿಸಿತು.ಲಿಂಕ್ಡ್ ಇನ್ ನಂತಹ ನೆಟ್ ವರ್ಕ್ ಗಳಲ್ಲಿ ಸಕ್ರಿಯವಾಗಿರುವ ಚೀನೀ ಗುಪ್ತಚರ ಸೇವೆಯು ಈ ಮಾರ್ಗದಲ್ಲಿ ಮಾಹಿತಿ ಸಂಗ್ರಹಿಸುವ ಮೂಲಕ ಗೂಢಚರ್ಯೆ ನಡೆಸಲು ಯತ್ನಿಸುತ್ತಿದೆ. ಈ ಪ್ರೊಫೈಲ್ ಗಳನ್ನು ಬಳಸಿಕೊಂಡು ಬಳಕೆದಾರರ ಹವ್ಯಾಸಗಳು, ರಾಜಕೀಯ ಆಸಕ್ತಿಗಳು ಇತ್ಯಾದಿ ಸೇರಿದಂತೆ ಮಹತ್ವದ ಮಾಹಿತಿ ಕಲೆಹಾಕುವ ಕೆಲಸವನ್ನು ಚೀನೀ ಗುಪ್ತಚರ ಇಲಾಖೆ ಮಾಡುತ್ತಿತ್ತು ಎಂದು ಜರ್ಮನ್ ಗುಪ್ತಚರ ಸಂಸ್ಥೆ ತಿಳಿಸಿತು. ಸುಮಾರು ೯ ತಿಂಗಳ ಕಾಲ ಈ ಬಗ್ಗೆ ಸಂಶೋಧನೆ ನಡೆಸಿದ ಬಳಿಕ ಲಿಂಕ್ಡ್ ಇನ್ ವೃತ್ತಿಪರ ನೆಟ್ ವರ್ಕಿಂಗ್ ಸೈಟ್ ಮೂಲಕ ಕಪಟ ಪ್ರೊಫೈಲ್ ದಾರರು ಸುಮಾರು ೧೦,೦೦೦ ಜರ್ಮನ್ ಪ್ರಜೆಗಳನ್ನು ಸಂಪರ್ಕಿಸಿರುವುದನ್ನು ಜರ್ಮನ್ ಗುಪ್ತಚರ ಸಂಸ್ಥೆ ಪತ್ತೆ ಹಚ್ಚಿತು. ಆಡಳಿತ ಪ್ರಮುಖರು, ಸಮಾಲೋಚಕರು, ಚಿಂತಕರು ಅಥವಾ ವಿಧ್ವಾಂಸರ ಸೋಗಿನಲ್ಲಿ ಈ ಪ್ರೊಫೈಲ್ ಗಳನ್ನು ಸೃಷ್ಟಿಸಲಾಗಿತ್ತು ಎಂದು ಬಿಎಫ್ ವಿ ಹೇಳಿತು. ‘ಇನ್ನೂ ದೊಡ್ಡ ಸಂಖ್ಯೆಯ ಜನರನ್ನು ಗುರಿಯಾಗಿ ಇಟ್ಟಿರುವ ಸಾಧ್ಯತೆಗಳಿವೆ. ಇನ್ನೂ ಗುರುತಿಸಲಾಗದ ಕಪಟ ಪ್ರೊಫೈಲ್ ಗಳು ಇರಬಹುದು  ಎಂದು ಬಿಎಫ್ ವಿ ಶಂಕಿಸಿತು.  ’ರೈಸ್ ಎಚ್ ಆರ್ ನಲ್ಲಿ ’ಹೆಡ್ ಹಂಟರ್ ಎಂದು ಗುರುತಿಸಲಾದ ’ರಾಚೆಲ್ ಲಿ ಮತ್ತು ಸೆಂಟರ್ ಫಾರ್ ಸಿನೋ ಯುರೋಪ್ ಡೆವಲಪ್ ಮೆಂಟ್ ಸ್ಟಡೀಸ್ ನಲ್ಲಿ ಪ್ರಾಜೆಕ್ಟ್ ಮಾನೇಜನರ್ ಎಂದು ಪರಿಚಯಿಸಿಕೊಂಡ ’ಅಲೆಕ್ಸ್ ಲಿ ಇವು ಜರ್ಮನ್ ಗುಪ್ತಚರ ಸಂಸ್ಥೆ ಪ್ರಕಟಿಸಿರುವ ಪ್ರೊಫೈಲ್ ಗಳಲ್ಲಿ ಸೇರಿದ್ದವು. ಈ ಪ್ರೊಫೈಲ್ ಗಳ ಪೈಕಿ ಹಲವು ಐರೋಪ್ಯ ರಾಷ್ಟ್ರಗಳ ಹಿರಿಯ ರಾಜತಾಂತ್ರಿಕರು ಮತ್ತು ರಾಜಕಾರಣಿಗಳ ಸಂಪರ್ಕ ಹೊಂದಿವೆ ಎಂದು ರಾಯಿಟರ್ಸ್ ಹೇಳಿತು. ಜರ್ಮನ್  ಗುಪ್ತಚರ ಸಂಸ್ಥೆಯ ಎಚ್ಚರಿಕೆಯು ಐರೋಪ್ಯ ಮತ್ತು ಪಾಶ್ಚಾತ್ಯ ಗುಪ್ತಚರ ವಲಯದಲ್ಲಿ ತೀವ್ರ ಕಳವಳವನ್ನು ಹುಟ್ಟು ಹಾಕಿತು. ಇದರ ಜೊತೆಗೇ ಚೀನಾದ ಭದ್ರತಾ ಸೇವೆಯು ಅಮೆರಿಕದ ನಾಗರಿಕರನ್ನು ತನ್ನ ಏಜೆಂಟರಾಗಿ ನೇಮಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಅಮೆರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ ಎಚ್ಚರಿಕೆ ನೀಡಿದ್ದು ಚೀನಾ ಚಟುವಟಿಕೆಗಳ ಬಗ್ಗೆ ಇನ್ನಷ್ಟು ತಳಮಳವನ್ನು ಸೃಷ್ಟಿಸಿತು. ಯಾವುದಾದರೂ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಬಗ್ಗೆ ಅನುಮಾನ ವ್ಯಕ್ತವಾದರೆ ತನ್ನನ್ನು ಸಂಪರ್ಕಿಸುವಂತೆಯೂ ಬಿಎಫ್ ವಿ ಬಳಕೆದಾರರಿಗೆ  ಸೂಚಿಸಿತು.
2017: ಗುರುಗ್ರಾಮ (ಹರಿಯಾಣ): ಡೆಂಘೆ ಜ್ವರಕ್ಕೆ ಚಿಕಿತ್ಸೆ ಪಡೆಯುವ ಸಲುವಾಗಿ ಆಸ್ಪತ್ರೆಗೆ ದಾಖಲಾಗಿದ್ದ ೭ರ ಹರೆಯದ ಬಾಲಕಿ ಆದ್ಯಳ  ಸಾವಿನ ಹಿನ್ನೆಲೆಯಲ್ಲಿ ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಯ ಹಿರಿಯ ವೈದ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಹರಿಯಾಣ ಸರ್ಕಾರದ ವೈದ್ಯಕೀಯ ಇಲಾಖೆಯು ನೀಡಿದ ದೂರನ್ನು ಅನುಸರಿಸಿ ಪೊಲೀಸರು ಈ ಕ್ರಮ ಕೈಗೊಂಡರು. ರಾಷ್ಟ್ರದ ರಾಜಧಾನಿಗೆ ಸಮೀಪದಲ್ಲಿರುವ ಈ ಖಾಸಗಿ ಆಸ್ಪತ್ರೆಯಲ್ಲಿ ಅತಿಯಾದ ಶುಲ್ಕ ವಸೂಲಿ ಮಾಡುತ್ತಿರುವುದು ಸೇರಿದಂತೆ ಹಲವಾರು ಲೋಪಗಳು ಹರಿಯಾಣ ವೈದ್ಯಕೀಯ ಇಲಾಖೆಯ ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಲಾಖೆಯು ಈ ದೂರು ನೀಡಿತ್ತು. ವೈದ್ಯರ ಸಲಹೆಗೆ ವಿರುದ್ಧವಾಗಿ ಕುಟುಂಬವು ಬಾಲಕಿಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಬಯಸಿದಾಗ ವೈದ್ಯರು ವೆಂಟಿಲೇಟರ್ ತೆಗೆದು ಸಾಮಾನ್ಯ ಆಂಬುಲೆನ್ಸ್ ನಲ್ಲಿ ಆಕೆಯನ್ನು ಕಳುಹಿಸಿಕೊಟ್ಟರು ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿದ್ದು, ಇದರಿಂದಾಗಿಯೇ ಮಗುವಿನ ಸಾವು ಸಂಭವಿಸಿತು ಎಂದು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದರು. ‘ಸರಳ ಮಾತುಗಳಲ್ಲಿ ಹೇಳುವುದಾದರೆ ಇದು ಸಾವಲ್ಲ, ಕೊಲೆ ಎಂದು ಹೇಳಿದ್ದ ಸಚಿವ ಅನಿಲ್  ವಿಜ್,  ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸುವ ಭರವಸೆ ನೀಡಿದ್ದರು. ಫೋರ್ಟಿಸ್ ಆಸ್ಪತ್ರೆಗೆ ಆಗಸ್ಟ್  ೩೧ರಂದು ದಾಖಲಾಗಿದ್ದ ಬಾಲಕಿ ತೀವ್ರ ಡೆಂಘೆ ಜ್ವರದ ಪರಿಣಾಮವಾಗಿ ಸೆಪ್ಟೆಂಬರ್ ೧೪ರಂದು ಮೃತಳಾಗಿದ್ದಳು. ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಈದಿನ ದಾಖಲಿಸಲಾದ ಪ್ರಕರಣದಲ್ಲಿ  ಆಸ್ಪತ್ರೆಯ ಆಡಳಿತವನ್ನು ಆರೋಪಿಯಾಗಿ ಹೆಸರಿಸಲಾಗಿಲ್ಲ, ಬಾಲಕಿ ಆದ್ಯಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರನ್ನು ಮಾತ್ರವೇ ಆರೋಪಿಯಾಗಿ ಹೆಸರಿಸಲಾಯಿತು. ಆದರೆ ಆಸ್ಪತ್ರೆಯ ಸಂಕಷ್ಟ  ಇನ್ನಷ್ಟು ಹೆಚ್ಚುವ ಸಾಧ್ಯತೆಗಳು ನಿಚ್ಚಳವಾಗಿವೆ. ಬಾಲಕಿ ಸಾವಿನ ಬಗ್ಗೆ ನಡೆಸಲಾದ ಸರ್ಕಾರಿ ತನಿಖೆಯು ಇತರ ಹಲವಾರು ಉಲ್ಲಂಘನೆಗಳನ್ನು ಬೆಳಕಿಗೆ ತಂದಿದೆ. ಉದಾಹರಣೆಗೆ ಆಸ್ಪತ್ರೆಗೆ ೨೦೦೪ರಲ್ಲಿ ಭೂಮಿಯನ್ನು ನೀಡುವಾಗ ಶೇಕಡಾ ೨೦ರಷ್ಟು ಹಾಸಿಗೆಗಳನ್ನು ಬಡವರಿಗೆ ಮೀಸಲು ಇಡಬೇಕು ಎಂದು ಸೂಚಿಸಲಾಗಿತ್ತು. ಆದರೆ ಈ ಷರತ್ತಿನ ಪಾಲನೆ ಆಗಿಲ್ಲ ಎಂಬುದೂ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಸಚಿವರು ಹೇಳಿದರು. ಬಾಲಕಿ ಆದ್ಯಳ ಸಾವಿನ ಸಂದರ್ಭದಲ್ಲಿ ಕುಟುಂಬ ಸದಸ್ಯರು ನೀಡಿದ ದೂರಿನಿಂದ ಆಸ್ಪತ್ರೆ ಚಿಕಿತ್ಸೆಗ್ಸೆ ದುಬಾರಿ ಶುಲ್ಕ ವಿಧಿಸಿದ್ದೂ ಬೆಳಕಿಗೆ ಬಂದಿದೆ. ಬಾಲಕಿಗೆ ನೀಡಿದ ಔಷಧಗಳಿಂದಲೇ ಆಸ್ಪತ್ರೆ ಶೇಕಡಾ ೧೦೮ರಷ್ಟು ಲಾಭ ಗಳಿಸಿದೆ ಎಂಬುದು ಬಾಲಕಿಯ ತಂದೆ ನೀಡಿದ್ದ ದೂರನ್ನು ಆಧರಿಸಿ ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು  ವೈದ್ಯಕೀಯ ಇಲಾಖೆ ತನ್ನ ೪೧ ಪುಟಗಳ ವರದಿಯಲ್ಲಿ ತಿಳಿಸಿತ್ತು. ಕೆಲವು ಔಷಧಗಳಿಗೆ ಶೇಕಡಾ ೭೧೭ರಷ್ಟು ದುಬಾರಿ ಶುಲ್ಕ ವಿಧಿಸುತ್ತಿರುವುದೂ ಬೆಳಕಿಗೆ ಬಂದಿದೆ. ಇದರ ಜೊತೆಗೆ ನಿರ್ಲಕ್ಷ್ಯ, ಅಕ್ರಮಗಳೂ ಸೇರಿವೆ ಎಂದು ವರದಿ ಹೇಳಿತ್ತು.
2017: ಲಂಡನ್: ಐಸಿಸ್ (ಐಎಸ್ ಐಎಸ್) ಮಹತ್ವದ ನೆಲೆಯನ್ನು ಕಳೆದುಕೊಂಡಿರಬಹುದು, ಆದರೆ ಅದು ಇನ್ನೂ ಸಂಪೂರ್ಣವಾಗಿ ಪರಾಭವಗೊಂಡಿಲ್ಲ. ಭಯೋತ್ಪಾದಕ ಗುಂಪು ಗಡಿಯಾಚೆಯಿಂದ ಈಗಲೂ ಬೆದರಿಕೆ ಒಡ್ಡುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ಪ್ರಧಾನಿ ಥೆರೇಸಾ  ಮೇ  ಇಲ್ಲಿ ಇರಾಕ್ ಗೆ ಎಚ್ಚರಿಕೆ ನೀಡಿದರು. ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಅವರು ಐಸಿಸ್ ವಿರುದ್ಧದ ರಾಷ್ಟ್ರದ ಸಮರ ಅಧಿಕೃತವಾಗಿ ಮುಕ್ತಾಯಗೊಂಡಿದೆ ಎಂದು ಶನಿವಾರಘೋಷಿಸಿದ್ದರು. ಸಮರಗ್ರಸ್ತ ರಾಷ್ಟ್ರದಲ್ಲಿ ಭಯೋತ್ಪಾದಕ ಸಂಘಟನೆಯು ಈಗ ಯಾವುದೇ ಮಹತ್ವದ ಪ್ರದೇಶದಲ್ಲಿ ತನ್ನ ಸ್ವಾಮ್ಯವನ್ನು ಹೊಂದಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.  ಥೆರೇಸಾ ಮೇ ಅವರು ಈ ’ಚಾರಿತ್ರಿಕ ಕ್ಷಣದಲ್ಲಿ ಅಬಾದಿ ಮತ್ತು ಎಲ್ಲ ಇರಾಕಿಗಳನ್ನು ಅಭಿನಂದಿಸುವುದಾಗಿ ಹೇಳಿದರು. ಇದು ಹೆಚ್ಚು ಶಾಂತಿಯುತವಾದ, ಸಮೃದ್ಧ ರಾಷ್ಟ್ರದೆಡೆಗಿನ ಹೊಸ ಅಧ್ಯಾಯದ ಸಂಕೇತ. ಆದರೆ ಮಾಡಬೇಕಾದ ಇನ್ನಷ್ಟು ಕೆಲಸಗಳಿವೆ ಎಂದೂ ಅವರು ನುಡಿದರು. ‘ಡಾಯಿಶ್ (ಐಸಿಸ್) ಕುಸಿಯುತ್ತಿದೆ, ಆದರೆ ಅವರು ಇನ್ನೂ ಸಂಪೂರ್ಣವಾಗಿ ಪರಾಭವಗೊಂಡಿಲ್ಲ ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಅವರು ಈಗಲೂ ಸಿರಿಯಾ ಗಡಿಯಿಂದ ಇರಾಕ್ ಗೆ ಬೆದರಿಕೆ ಒಡ್ಡ ಬಲ್ಲರು ಎಂದು ಥೆರೇಸಾ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.  ಇರಾಕ್ ಮರುನಿರ್ಮಾಣಕ್ಕಾಗಿ ಇಂಗ್ಲೆಂಡ್ ೩೦ ದಶಲಕ್ಷ ಪೌಂಡ್ ಗಳನ್ನು ಸ್ಥಿರತೆ, ೨೦ ದಶಲಕ್ಷ ಪೌಂಡ್ ಗಳನ್ನು ಮಾನವೀಯ ನೆರವು ಹಾಗೂ ೧೦ ದಶಲಕ್ಷ ಪೌಂಡ್ ಗಳನ್ನು ಭಯೋತ್ಪಾದನೆ ನಿಗ್ರಹ ಬಲ ವೃದ್ಧಿಗಾಗಿ ಒದಗಿಸುವುದು ಎಂದು ಮೇ ನುಡಿದರು. ಹೊಸ ಅಧ್ಯಾಯವನ್ನು ಆರಂಭಿಸುವಲ್ಲಿ ಜಾಗತಿಕ ಮೈತ್ರಿಕೂಟದ ಸದಸ್ಯನಾಗಿ ಇರಾಕ್ ಜೊತೆ ಭುಜಕ್ಕೆ ಭುಜ ಕೊಟ್ಟು ನಡೆಯಲು ಇಂಗ್ಲೆಂಡ್  ಹೆಮ್ಮೆ ಪಡುತ್ತದೆ ಎಂದು ಅವರು ಹೇಳಿದರು. ಐಸಿಸ್ ನಿಗ್ರಹ ಸಮರದಲ್ಲಿ ಇರಾಕ್ ನೆರವಿಗೆ ನಿಂತಿದ್ದ ಇಂಗ್ಲೆಂಡ್ ಇರಾಕಿನಲ್ಲಿ ೧೩೫೦ ವಾಯುದಾಳಿಗಳನ್ನೂ ನಡೆಸಿದ್ದಲ್ಲದೆ, ಇರಾಕಿನ ೬೦,೦೦೦ ಯೋಧರಿಗೆ ತರಬೇತಿಯನ್ನೂ ನೀಡಿತ್ತು.


2016: ದೀಸಾ ( ಗುಜರಾತ್)ಸದನದಲ್ಲಿ ನೋಟು ರದ್ದತಿ ನಿರ್ಧಾರದ ಚರ್ಚೆಗೆ ವಿಪಕ್ಷಗಳು ಅಡ್ಡಿಯುಂಟು ಮಾಡುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದರು. ಗುಜರಾತಿನ ದೀಸಾ ಎಂಬಲ್ಲಿ ಸಹಕಾರಿ ಹಾಲು ಉತ್ಪಾದನಾ ಘಟಕ ಉದ್ಘಾಟಿಸಿದ ನಂತರ ರೈತರ ಸಭೆಯನ್ನು ಉದ್ದೇಶಿಸಿ  ಮಾತನಾಡಿದ ಅವರು, ಸರ್ಕಾರ ಚರ್ಚೆಗೆ ಸದಾ ಸಿದ್ಧವಾಗಿದೆ. ವಿಪಕ್ಷಗಳು ನನಗೆ ಲೋಕಸಭೆಯಲ್ಲಿ ಮಾತನಾಡಲು ಬಿಡುವುದಿಲ್ಲ. ಆದ್ದರಿಂದ ನಾನು ಜನಸಭೆಯಲ್ಲಿ ಮಾತನಾಡುತ್ತೇನೆ ಎಂದರು. ಸಂಸತ್ನಲ್ಲಿ ಚಳಿಗಾಲದ ಅಧಿವೇಶನದಲ್ಲಿ ನಡೆಯುತ್ತಿರುವ ಘಟನೆಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೂ ನೋವು ತಂದಿದೆ. ಡಿಸೆಂಬರ್ 8ರಂದು ವಿಪಕ್ಷಗಳು ಸದನದಲ್ಲಿ ಚರ್ಚೆಗೆ ಅಡ್ಡಿಯುಂಟು ಮಾಡಿ ಕಲಾಪ ಮುಂದೂಡಲ್ಪಟ್ಟಾಗ, ರಾಷ್ಟ್ರಪತಿ ಅವರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸದನವಿರುವುದು ಧರಣಿ ಸತ್ಯಾಗ್ರಹ ಮಾಡುವುದಕ್ಕಲ್ಲ. ಅದಕ್ಕಾಗಿ ರಸ್ತೆಗಳಿವೆ. ದಯವಿಟ್ಟು ನೀವು ನಿಮ್ಮ ಕೆಲಸ ಮಾಡಿ ಎಂದು ರಾಷ್ಟ್ರಪತಿ ವಿಪಕ್ಷದವರ ವಿರುದ್ಧ ಕಿಡಿ ಕಾರಿದ್ದರು. 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಮೋದಿ,  ಇದು ದೇಶದಲ್ಲಿನ ಕಪ್ಪು ಹಣ ಮತ್ತು ನಕಲಿ ನೋಟುಗಳ ವಿರುದ್ಧದ ಸಮರವಾಗಿದೆ ಎಂದರು.
2016: ನವದೆಹಲಿ: ಗಣ್ಯರ ಬಳಕೆಗೆ 12 ಅಗಸ್ಟಾ ವೆಸ್ಟ್ಲ್ಯಾಂಡ್ಹೆಲಿಕಾಪ್ಟರುಗಳ  ಖರೀದಿ ಒಪ್ಪಂದ ಸಂಬಂಧ  450 ಕೋಟಿ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಬಂಧನಕ್ಕೊಳಗಾದ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌.ಪಿ.ತ್ಯಾಗಿ ಮತ್ತು ಇನ್ನಿಬ್ಬರು ಆರೋಪಿಗಳನ್ನು ಸಿಬಿಐ 4 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿತು. ಸೇನಾಪಡೆಯ ನಿವೃತ್ತ ಮುಖ್ಯಸ್ಥರೊಬ್ಬರನ್ನು ಬಂಧಿಸಿರುವ ಮೊದಲ ಪ್ರಕರಣ ಇದು.  3,600 ಕೋಟಿ ರೂಪಾಯಿ ಮೊತ್ತದ ಖರೀದಿ ಒಪ್ಪಂದ ಹಗರಣ ಸಂಬಂಧ ತ್ಯಾಗಿ ಮತ್ತು ಅವರ ಮೂವರು ಸೋದರ ಸಂಬಂಧಿಗಳು ಹಾಗೂ ಕೆಲವು ಖಾಸಗಿ ಕಂಪೆನಿಗಳ ವಿರುದ್ಧ ಸಿಬಿಐ ತನಿಖೆ ನಡೆಸಿತು. ಹಗರಣದ ಬಗ್ಗೆ ತ್ಯಾಗಿ ಅವರನ್ನು ಹೆಚ್ಚಿನ ವಿಚಾರಣೆಗೊಳಪಡಿಸುವುದಕ್ಕಾಗಿ ಅವರನ್ನು ನಮ್ಮ ವಶಕ್ಕೊಪ್ಪಿಸಬೇಕೆಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅಗಸ್ಟಾ ವೆಸ್ಟ್ಲ್ಯಾಂಡ್ಪ್ರಕರಣದಲ್ಲಿ ತ್ಯಾಗಿ ಅವರ ಸಂಬಂಧಿ ಸಂಜೀವ್ ತ್ಯಾಗಿ ಅಲಿಯಾಸ್ ಜೂಲಿ ಮತ್ತು ವಕೀಲ ಗೌತಮ್ ಖೇತಾನ್ ಆರೋಪಿಗಳು. ತ್ಯಾಗಿ ಮತ್ತು ಅವರ ಸೋದರ ಸಂಬಂಧಿ ಮಧ್ಯವರ್ತಿಗಳಿಂದ ಲಂಚ ಪಡೆದಿರುವುದು ಮತ್ತು ಕಂಪೆನಿಗೆ ಅನುಕೂಲ ಮಾಡಿಕೊಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಲಂಚ ಪಡೆದಿರುವುದನ್ನು ತ್ಯಾಗಿ ಮತ್ತು ಸಂಜೀವ್ ನಿರಾಕರಿಸುತ್ತಿದ್ದಾರೆ. ಆದರೆ ಖೇತಾನ್ಒಪ್ಪಿಕೊಂಡಿದ್ದಾರೆ ಎಂದು  ಸಿಬಿಐ ಹೇಳಿತ್ತು. ಖರೀದಿ ಪ್ರಕ್ರಿಯೆಯಲ್ಲಿ ಅಗಸ್ಟಾ ವೆಸ್ಟ್ಲ್ಯಾಂಡ್ಕಂಪೆನಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಖರೀದಿಸಲು ಉದ್ದೇಶಿಸಿದ್ದ ಹೆಲಿಕಾಪ್ಟರಿನ ಸಾಮರ್ಥ್ಯವನ್ನು ಕಡಿಮೆ ಮಾಡಿದ ಆರೋಪ ತ್ಯಾಗಿ ಅವರ ಮೇಲಿತ್ತು. ಮೊದಲು ಹೊರಡಿಸಿದ್ದ ಟೆಂಡರ್ಪ್ರಕಟಣೆಯಲ್ಲಿಹೆಲಿಕಾಪ್ಟರ್ಗಳು 6 ಸಾವಿರ ಮೀಟರ್ಎತ್ತರದವರೆಗೂ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿರಬೇಕುಎಂದು ಸೂಚಿಸಲಾಗಿತ್ತು. ಆದರೆ ನಂತರ ಪ್ರಕಟಣೆಯಲ್ಲಿ ಬದಲಾವಣೆ ಮಾಡಿ ಹಾರಾಟದ ಗರಿಷ್ಠ ಎತ್ತರವನ್ನು 4,500 ಮೀಟರ್ಗೆ ಇಳಿಸಲಾಗಿತ್ತು. ಆದರೆ, ‘ಸಂಬಂಧಿತ ಅಧಿಕಾರಿಗಳು ಮತ್ತು ಇಲಾಖೆಗಳ ಜತೆಗಿನ ಚರ್ಚೆಯ ನಂತರವೇ ಬದಲಾವಣೆ ಮಾಡಲಾಗಿತ್ತುಎಂದು ತ್ಯಾಗಿ ಹಿಂದೆ ಹೇಳಿದ್ದರು.
2016: ಹುಬ್ಬಳ್ಳಿ: ಚಿತ್ರದುರ್ಗ ಮತ್ತು ಹುಬ್ಬಳ್ಳಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಹವಾಲಾ ಡೀಲರ್ ಮನೆಯಿಂದ  5.7 ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ವಶ ಪಡಿಸಿಕೊಂಡರು. ಹವಾಲಾ ಡೀಲರ್ ಮನೆಯ ಶೌಚಾಲಯದೊಳಗಿನ ರಹಸ್ಯ ಕೋಣೆಯಲ್ಲಿ ಅಕ್ರಮ ಹಣ ಪತ್ತೆಯಾಯಿತು. 90 ಲಕ್ಷ ರೂಪಾಯಿ ಮೌಲ್ಯದ ಹಳೇ ನೋಟು ಮತ್ತು 32 ಕೆಜಿ ಚಿನ್ನದ ಗಟ್ಟಿಯನ್ನೂ ಐಟಿ ಅಧಿಕಾರಿಗಳು ವಶ ಪಡಿಸಿಕೊಂಡರು. ಕೆಲವು ದಿನಗಳ ಹಿಂದೆಯಷ್ಟೇ ಬೆಳಗಾವಿಯಲ್ಲಿ 11. 13 ಲಕ್ಷ ರೂ.ದಾಖಲೆ ರಹಿತ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದರು. ಇದರಲ್ಲಿ 8.5 ಲಕ್ಷ ರೂಪಾಯಿ ಲಕ್ಷ ಮೌಲ್ಯದ 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳಿದ್ದು,  1.5 ಲಕ್ಷ ರೂಪಾಉಒ ಮೌಲ್ಯದ  100 ರೂಪಾಯಿ. ನೋಟು ಮತ್ತು ಇನ್ನುಳಿದ 50,000 ರೂಪಾಯಿ ನಗದು 500 ರೂಪಾಯಿ ಮುಖಬೆಲೆಯ ನೋಟುಗಳಲ್ಲಿತ್ತು.
2016: ನವದೆಹಲಿ: ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.  ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌)ಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2:30ರವರೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.  ಸುಷ್ಮಾ ಅವರ ಸಂಬಂಧಿಗಳು, ಸ್ನೇಹಿತರು ಹಾಗೂ ಆಪ್ತ ವಲಯದಲ್ಲಿ ಸೂಕ್ತ ದಾನಿ ಸಿಗದ ಕಾರಣ ಸಂಬಂಧಿಯಲ್ಲದ ಒಬ್ಬರಿಂದ ಮೂತ್ರಪಿಂಡ ದಾನ ಪಡೆಯಲಾಯಿತು. ಏಮ್ಸ್ನಿರ್ದೇಶಕ ಎಂ.ಸಿ.ಮಿಶ್ರಾ ಸೇರಿದಂತೆ ತಜ್ಞ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಪ್ರಸ್ತುತ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. 64 ವರ್ಷದ ಸುಷ್ಮಾ ಸ್ವರಾಜ್ಅವರಿಗೆ ಡಯಾಬಿಟಿಸ್ಇದ್ದು, ಮೂತ್ರಪಿಂಡ ವೈಫಲ್ಯ ಪತ್ತೆಯಾದ ಬಳಿಕ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದರು. ಸಂಸತ್ ಚಳಿಗಾಲದ ಅಧಿವೇಶನ ಆರಂಭದ ದಿನವಾದ ಬುಧವಾರ(.16) ಬೆಳಿಗ್ಗೆ ಸುಷ್ಮಾ ಅವರು ಮಾಡಿದ ಟ್ವಿಟ್ನಲ್ಲಿಸ್ನೇಹಿತರೇ, ನನ್ನ ಆರೋಗ್ಯದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮೂತ್ರಪಿಂಡ ವೈಫಲ್ಯದ ಕಾರಣ ನಾನು ಏಮ್ಸ್ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಡಯಾಲಿಸಿಸ್ಗೆ ಒಳಗಾಗುತ್ತಿದ್ದೇನೆ. ಮೂತ್ರಪಿಂಡ ಕಸಿ ಕುರಿತ ಪರೀಕ್ಷೆಗಳು ನಡೆಯುತ್ತಿವೆ. ಶ್ರೀಕೃಷ್ಣ ಪರಮಾತ್ಮ ನನ್ನೊಂದಿಗೆ ಇದ್ದಾನೆಎಂದು  ಪ್ರಕಟಿಸಿದ್ದರು.
2016: ಬರ್ಲಿನ್: ವಲಸಿಗರಾಗಿ ಜರ್ಮನಿ ಪ್ರವೇಶಿಸಿದ ಹಲವು ಮುಸ್ಲಿಂ ನಿರಾಶ್ರಿತರು ಕ್ರೖೆಸ್ತಧರ್ಮಕ್ಕೆ ಮತಾಂತರಗೊಂಡರು.  ಹೆಚ್ಚಿನವರು ಮತಾಂತರಗೊಂಡ ನಂತರ ಜರ್ಮನಿಯಲ್ಲಿ ನೆಲೆ ಕಂಡುಕೊಂಡರು. ಕೆಲವು ಮತಾಂತರಗೊಂಡ ಮುಸ್ಲಿಮರು ಸ್ವದೇಶಕ್ಕೆ ಮರಳಿದ್ದಾರೆ. ಇತ್ತೀಚೆಗೆ ಬರ್ಲಿನ್ ಇವಾಂಜೆಲಿಕಲ್ ಪ್ರದೇಶದಲ್ಲಿ ಮೂವರು ಮುಸ್ಲಿಂ ನಿರಾಶ್ರಿತರನ್ನು ಕ್ರಿಸ್ತಮತಕ್ಕೆ ಮತಾಂತರಿಸಲಾಗಿದೆ. ಕುರಿತು ಮಾಹಿತಿ ನೀಡಿರುವ ಅಲ್ಲಿನ ಚರ್ಚ್ಗಳು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ನಿರಾಶ್ರಿತರು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಹೆಚ್ಚಿನ ಮುಸ್ಲಿಂ ವಲಸಿಗರು ಕ್ರೈಸ್ತಧರ್ಮಕ್ಕೆ ಸೇರಲೆಂದೇ ಜರ್ಮನಿಗೆ ಬರುತ್ತಾರೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಧಾರ್ವಿುಕ ಸ್ವಾತಂತ್ರ್ಯ ಹೊಂದುತ್ತಾರೆ. ಇರಾಕ್, ಇರಾನ್, ಅಫ್ಘಾನಿಸ್ತಾನ, ಸಿರಿಯಾ ರಾಷ್ಟ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂದು ಕ್ರೈಸ್ತ ಪಾದ್ರಿ ಮ್ಯಾಥಿಸ್ ಲಿಂಕ್ ತಿಳಿಸಿದರು.  ಐಸಿಸ್ ಪ್ರಾಬಲ್ಯ ಹೆಚ್ಚಾದಂತೆ ಆಶ್ರಯ ಹುಡುಕಿಕೊಂಡು ಜರ್ಮನಿ ಪ್ರವೇಶಿಸುವ ನಿರಾಶ್ರಿತ ಮುಸ್ಲಿಂ ಸಂಖ್ಯೆ ಹೆಚ್ಚಾಗಿದ್ದು, ಕಳೆದ ವರ್ಷ ಸಿರಿಯಾ, ಇರಾಕ್ ಅಫ್ಘಾನಿಸ್ತಾನದಿಂದ 9 ಲಕ್ಷ ನಿರಾಶ್ರಿತರು ಆಗಮಿಸಿದ್ದಾರೆ ಎನ್ನಲಾಯಿತು.
2016: ಗಾಂಧಿನಗರ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಗುಜರಾತ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ 20 ನಿಮಿಷ ಸಮಯಾವಕಾಶ ಮಾಡಿಕೊಂಡು ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಬಿಜೆಪಿ ಸಭೆಯಲ್ಲಿ ಭಾಗವಹಿಸಲು ಈದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೋದಿ ಗಾಂಧಿನಗರಕ್ಕೆ ಆಗಮಿಸಿದರು. ಹೆಲಿಕಾಪ್ಟರಿನಿಂದ  ಇಳಿದ ತತ್ ಕ್ಷಣ ಅವರು ತಮ್ಮ ಸಹೋದರ ಪಂಕಜ್ ಮೋದಿ ಅವರ ಮನೆಗೆ ದೌಡಾಯಿಸಿದರು. ಅಲ್ಲಿ ತಮ್ಮ ತಾಯಿಯೊಂದಿಗೆ ಸುಮಾರು 20 ನಿಮಿಷ ಕಳೆದ ಮೋದಿ ನಂತರ ಸಮೀಪದಲ್ಲೇ ಇದ್ದ ಪಕ್ಷದ  ಕಚೇರಿಗೆ ತೆರಳಿದರು.  ಕೋಬಾದಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಆಗಮಿಸುವ ಮುನ್ನ ಅವರು ತಮ್ಮ ತಾಯಿಯನ್ನು ಭೇಟಿ ಮಾಡಲು ತೆರಳಿದ್ದರು. ಸುಮಾರು 20 ನಿಮಿಷ ಅವರೊಂದಿಗೆ ಕಾಲ ಕಳೆದು ಅವರ ಆಶೀರ್ವಾದ ಪಡೆದು ನಂತರ ಪಕ್ಷದ ಕಚೇರಿಗೆ ಆಗಮಿಸಿ ಮುಖಂಡರೊಂದಿಗೆ ಸಭೆಯಲ್ಲಿ ಪಾಲ್ಗೊಂಡರು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.  ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17 ರಂದು ತಮ್ಮ ಹುಟ್ಟು ಹಬ್ಬದ ದಿನ ತಾಯಿಯನ್ನು ಭೇಟಿ ಮಾಡಿದ್ದರು. ನೋಟು ರದ್ಧತಿಯ ಐತಿಹಾಸಿಕ ನಿರ್ಣಯ ತೆಗೆದುಕೊಂಡ ನಂತರ ಇದೇ ಮೊದಲ ಬಾರಿಗೆ ಮೋದಿ ತಮ್ಮ ತಾಯಿಯನ್ನು ಭೇಟಿ ಮಾಡಿದರು.
 2016: ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ವಾಸಿಸುತ್ತಿದ್ದ ಹಿಂದುಗಳ ಬಹುದಿನದ ಬೇಡಿಕೆಯನ್ನು ಪುರಸ್ಕರಿಸಿದ ಪಾಕಿಸ್ತಾನ ಸರ್ಕಾರ ದೇವಾಲಯ, ಸಮುದಾಯ ಭವನ ನಿರ್ಮಿಸಲು ಮತ್ತು ಸ್ಮಶಾನಕ್ಕಾಗಿ ಜಾಗ ನೀಡಲು ಸಮ್ಮತಿಸಿತು. ಇಸ್ಲಾಮಾಬಾದಿನ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಹಿಂದಿನ ದಿನ ನಡೆಸಿದ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿತು.  ಸೆಕ್ಟರ್ ಎಚ್-9ರಲ್ಲಿ ಅರ್ಧ ಎಕೆರೆ ಜಾಗ ನೀಡಲು ಸಮ್ಮತಿಸಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. ಹಿಂದುಗಳು ಸಾಕಷ್ಟು ವರ್ಷದಿಂದಲೂ ತಮ್ಮ ಬೇಡಿಕೆ ಈಡೇರಿಸುವ ಒತ್ತಾಯಿಸುತ್ತಿದ್ದರು. ಇಸ್ಲಾಮಾಬಾದ್ನಲ್ಲಿ ಸುಮಾರು 800 ಹಿಂದುಗಳು ವಾಸಿಸುತ್ತಿದ್ದು, ಅವರು ದೇವಾಲಯವಿಲ್ಲದ ಕಾರಣ ಹಬ್ಬ ಮತ್ತು ಶುಭ ಸಮಾರಂಭಗಳನ್ನು ಮನೆಯಲ್ಲೇ ಆಚರಿಸುತ್ತಿದ್ದರು. ಜತೆಗೆ ಇಸ್ಲಾಮಾಬಾದಿನಲ್ಲಿ ಹಿಂದು ಸ್ಮಶಾನ ಇಲ್ಲದ ಕಾರಣ ಸತ್ತವರನ್ನು ಹೂಳಲು ರಾವಲ್ಪಿಂಡಿ ಅಥವಾ ಅವರ ಸ್ವಂತ ಊರಿಗೆ ತೆಗೆದುಕೊಂಡು ಹೋಗಬೇಕಾಗುತ್ತಿತ್ತು. ರಾವಲ್ಪಿಂಡಿಯಲ್ಲಿ ಕೃಷ್ಣ ಮಂದಿರವಿದ್ದು, ಇದೇ ಭಾಗದ ಅತಿ ದೊಡ್ಡ ದೇವಾಲಯ, ಉಳಿದಂತೆ ಹಿಂದುಗಳು ಸಣ್ಣ ದೇಗುಲಗಳನ್ನು ನಿರ್ಮಿಸಿಕೊಂಡು ಪೂಜೆ ಸಲ್ಲಿಸುತ್ತಿದ್ದಾರೆ. ಸಿಡಿಎ ಆಲ್ ಪಾಕಿಸ್ತಾನ ಬುದ್ಧಿಸ್ಟ್ ಸೊಸೈಟಿಗೆ ನೀಡಿರುವ ಜಾಗದ ಪಕ್ಕದಲ್ಲೇ ಹಿಂದುಗಳಿಗೂ ಜಾಗ ನೀಡಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿತು.

2016: ಚೆನ್ನೈ: ಮಾಜಿ ಸಿಎಂ ಜಯಲಲಿತಾ ನಂತರ ಎಐಎಡಿಎಂಕೆ ಪಕ್ಷ ಮುನ್ನಡೆಸಲು ಶಶಿಕಲಾ ಆಯ್ಕೆ ಬಹುತೇಕ ಖಚಿತಗೊಂಡಿತು.  ಶೀಘ್ರದಲ್ಲೇ ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಲಿದ್ದಾರೆ ಎನ್ನಲಾಯಿತು. ಕುರಿತು ಟ್ವೀಟ್ ಮಾಡಿದ ಎಐಎಡಿಎಂಕೆ, ಜಯಲಲಿತಾ ತೋರಿದ ಹಾದಿಯಲ್ಲಿ ಪಕ್ಷವನ್ನು ಮುನ್ನಡೆಸಲು ಶಶಿಕಲಾ ಆಯ್ಕೆಯನ್ನು ಪಕ್ಷ ಹಿರಿಯ ಮುಖಂಡರು ಬೆಂಬಲಿಸಿರುವುದಾಗಿ ತಿಳಿಸಿತು.  ಪಕ್ಷದ ಮುಖಂಡರು ಶಶಿಕಲಾ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಅವರು ಪಕ್ಷದ ಮುಖ್ಯ ಸದಸ್ಯರಲ್ಲವೇ? ಜಯಲಲಿತಾರ ಕೊನೆಯುಸಿರಿರುವ ವರೆಗೆ ಶಶಿಕಲಾ ಜತೆಗಿದ್ದರು ಎಂದು ಪಕ್ಷದ ಕಾರ್ಯದರ್ಶಿ ಸಿ ಪೊನ್ನಯ್ಯನ್ ತಿಳಿಸಿದರು.  ಜಯಲಲಿತಾ ಸಾವಿನ ನಂತರ ಪೋಸ್ ಗಾರ್ಡನ್ ನಿವಾಸದಲ್ಲಿ ವಾಸ್ತವ್ಯ ಹೂಡಿದ ಶಶಿಕಲಾ ಅವರನ್ನು ಪಕ್ಷದ ಅನೇಕ ಮುಖಂಡರು ನಡೆಸಿದ ಭೇಟಿ ವಿಚಾರವಾಗಿ ಗುಸುಗುಸು ಎದ್ದಿತ್ತು.
1901: ಸಾಹಿತ್ಯ, ಭೌತವಿಜ್ಞಾನ, ರಾಸಾಯನಿಕ ವಿಜ್ಞಾನ, ಶಾಂತಿ, ವೈದ್ಯಕೀಯ ಈ ಐದು ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರತಿವರ್ಷ ಈ ದಿನ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಸ್ಟಾಕ್ ಹೋಮಿನಲ್ಲಿ ನಡೆಯುವ ಸಮಾರಂಭದಲ್ಲಿ ಸ್ವೀಡನ್ ದೊರೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. ಶಾಂತಿಗಾಗಿ ನೀಡಲಾಗುವ ಪ್ರಶಸ್ತಿಯನ್ನು ಓಸ್ಲೋದಲ್ಲೂ, ಇತರರಿಗೆ ನೀಡಲಾಗುವ ಪ್ರಶಸ್ತಿಗಳನ್ನು ಸ್ಟಾಕ್ ಹೋಮಿನಲ್ಲೂವಿತರಿಸಲಾಗುತ್ತದೆ. 1901 ರಲ್ಲಿ ಪ್ರಶಸ್ತಿಯ ಸ್ಥಾಪಕ ಅಲ್ ಫ್ರೆಡ್ ನೊಬೆಲ್ ಅವರ ಮರಣದ ಐದನೇ ವಾರ್ಷಿಕೋತ್ಸವದ ದಿನ ಮೊದಲ ಪ್ರಶಸ್ತಿಗಳನ್ನು ವಿತರಿಸಲಾಯಿತು. 1969ರಲ್ಲಿ ನೊಬೆಲ್ ಪ್ರಶಸ್ತಿಗಳ ಪಟ್ಟಿಗೆ ಅರ್ಥವಿಜ್ಞಾನ ಆರನೆಯದಾಗಿ ಸೇರ್ಪಡೆಯಾಯಿತು. 2001ರಲ್ಲಿ ನೊಬೆಲ್ ಪ್ರಶಸ್ತಿಯ ಶತಮಾನೋತ್ಸವ ಆಚರಣೆಗೆ ಆವರೆಗೆ ಪ್ರಶಸ್ತಿ ಪಡೆದ ಜೀವಂತವಿದ್ದ ಎಲ್ಲರನ್ನೂ ಆಹ್ವಾನಿಸಲಾಗಿತ್ತು.

2008: 'ಮುಂಬೈ ಮುತ್ತಿಗೆ' ಸಂಚು ರೂಪಿಸಿದ ಲಷ್ಕರ್ -ಎ -ತೊಯ್ಬಾದ ಅಂಗಸಂಸ್ಥೆ ಜಮಾತ್-ಉದ್-ದವಾ (ಜೆಯುಡಿ) ಸಂಘಟನೆ ನಿಷೇಧಿಸಬೇಕೆಂಬ ಭಾರತದ ಬಲವಾದ ಒತ್ತಾಯಕ್ಕೆ ಪಾಕಿಸ್ಥಾನವು ಕೊನೆಗೂ ಮೆತ್ತಗಾಯಿತು. ವಿಶ್ವಸಂಸ್ಥೆ ಸೂಚನೆ ನೀಡಿದರೆ ಅದನ್ನು ಭಯೋತ್ಪಾದಕ ಸಂಘಟನೆಯಾಗಿ ಪರಿಗಣಿಸಿ ನಿಷೇಧಿಸುವುದಾಗಿ ಪಾಕಿಸ್ಥಾನ ಹೇಳಿತು. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಮುಂಬೈ ಮೇಲಿನ ವಿಧ್ವಂಸಕ ದಾಳಿಯ ಪ್ರಮುಖ ರೂವಾರಿಗಳಾದ ಝಕೀರ್ ರೆಹಮಾನ್ ಲಖ್ವಿ ಮತ್ತು ಎಲ್‌ಇಟಿಯ ಇನ್ನೊಬ್ಬ ಕಮಾಂಡರ್ ಜರಾರ್ ಶಾನನ್ನು ಬಂಧಿಸಿರುವುದಾಗಿ ಪಾಕಿಸ್ಥಾನದ ಪ್ರಧಾನಿ ಯೂಸುಫ್ ರಝಾ ಜಿಲಾನಿ ಅವರು ಇಸ್ಲಾಮಾಬಾದಿನಲ್ಲಿ ಔಪಚಾರಿಕವಾಗಿ ಪ್ರಕಟಿಸಿದರು. ಜೆಯುಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪಾಕಿಸ್ಥಾನವು ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ಜಿಲಾನಿ ಅವರು ಈ ಇಬ್ಬರ ಬಂಧನ ಸುದ್ದಿ ಖಚಿತಪಡಿಸಿದರು.

2008: ಇಂಗ್ಲೆಂಡ್ ಸಂಸತ್ತಿನ ಮೇಲ್ಮನೆಯಾದ ಹೌಸ್ ಆಫ್ ಲಾರ್ಡ್ಸ್‌ನ ಉಪ ಸಭಾಧಕ್ಷರಾಗಿ ಭಾರತ ಮೂಲದ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಆಯ್ಕೆಯಾದರು. ಇದರಿಂದಾಗಿ ಮೊದಲ ಬಾರಿಗೆ ಇಂತಹ ಉನ್ನತ ಸ್ಥಾನಕ್ಕೆ ಏರಿದ ಏಷ್ಯಾ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸ್ವರಾಜ್ ಪಾಲ್ ಪಾತ್ರರಾಗಿ, ಇತಿಹಾಸ ನಿರ್ಮಾಣಗೊಂಡಿತು. ಬ್ರಿಟನ್ನಿನ ಸಚಿವ ಸಂಪುಟದಲ್ಲಿ ಭಾರತ ಮೂಲದವರು ಸಚಿವರಾದ ನಿದರ್ಶನವಿತ್ತು, ಆದರೆ, ಉಪ ಸಭಾಧ್ಯಕ್ಷ ಸ್ಥಾನವನ್ನು ಇದುವರೆಗೆ ಯಾರೂ ಅಲಂಕರಿಸಿರಲಿಲ್ಲ.

2008: ಕಡು ಬಡತನದ ನಡುವೆಯೂ ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದಾಗಿ ಗ್ರಾಮೀಣ ಪ್ರದೇಶದ ಅಪ್ಪಟ ಪ್ರತಿಭೆಯಾದ ಪ್ರಸನ್ನ ವಿ.ಸಾಲಿಯಾನ್ 'ಭಾರತೀಯ ಆರ್ಥಿಕ ಸೇವೆ'ಯ ಪರೀಕ್ಷೆಯಲ್ಲಿ 16ನೇ ಸ್ಥಾನ ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದರು. ಪ್ರಸಕ್ತ ಸಾಲಿನ ಭಾರತೀಯ ಆರ್ಥಿಕ ಸೇವೆ (ಐಇಎಸ್) ಪರೀಕ್ಷೆಗೆ ದೇಶದ ವಿವಿಧೆಡೆಯಿಂದ ಸುಮಾರು 7 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದರು. ಆದರೆ ಹುದ್ದೆಗಳ ಸಂಖ್ಯೆ ಕೇವಲ 21 ಮಾತ್ರ. ರಾಜ್ಯದಿಂದ ಸುಮಾರು 50ಕ್ಕೂ ಹೆಚ್ಚು ಮಂದಿ ಪರೀಕ್ಷೆ ತೆಗೆದುಕೊಂಡಿದ್ದರೂ ಲಿಖಿತ ಪರೀಕ್ಷೆ, ಸಂದರ್ಶನ ಸೇರಿದಂತೆ ಎಲ್ಲ ಹಂತಗಳಲ್ಲಿ ಯಶಸ್ವಿಯಾದವರು ಪ್ರಸನ್ನ ಒಬ್ಬರೇ!

2008: ಖಗೋಳಶಾಸ್ತ್ರಜ್ಞ ಅಲೈಸ್ ಕ್ವಿಲ್ಲೆನ್, ದೂರದ ನಕ್ಷತ್ರವೊಂದರ ಸಮೀಪ ಒಂದು ಗ್ರಹ ಇದೆ ಎಂದು 2006ರಲ್ಲೇ ಮಾಡಿದ್ದ ಊಹೆ ಇದೀಗ ಇದೀಗ ನಿಜವಾಯಿತು. ಭೂಮಿಯಿಂದ ಶತಕೋಟಿ ಶತಕೋಟಿ ಮೈಲುಗಳಾಚೆ ದೂರ ಇರುವ ಈ ಗ್ರಹದ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಯಿತು. ಮಾತ್ರವಲ್ಲ; ಆ ಮೂಲಕ ನಮ್ಮ ಸೌರಮಂಡಲದ ಆಚೆಗಿನ ಗ್ರಹವೊಂದರ ಚಿತ್ರವನ್ನು ಮಾನವ ಕುಲದ ಇತಿಹಾಸದಲ್ಲಿ ಇದೇ ಮೊತ್ತಮೊದಲ ಬಾರಿಗೆ ಸೆರೆಹಿಡಿದ ಹೆಗ್ಗಳಿಕೆಗೆ ಕ್ಯಾಲಿಫೋರ್ನಿಯಾ ಬರ್ಕಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಯೂಜೀನ್ ಚಿಯಾಂಗ್ ಮತ್ತಿತರರ ತಂಡ ಪಾತ್ರವಾಯಿತು. ಹಬಲ್ ಅಂತರಿಕ್ಷ ದೂರದರ್ಶಕದ ಸಹಾಯದಿಂದ ಈ ಗ್ರಹ ಸೆರೆಹಿಡಿಯಲಾಯಿತು. ಗ್ರಹದ ಇರುವನ್ನು ಮೊದಲೇ ಊಹಿಸಿ ಆಮೇಲೆ ಅದು ಖಚಿತಗೊಂಡಿರುವ ಸಂಗತಿ ಜಗತ್ತಿನ ಖಗೋಳ ಇತಿಹಾಸದಲ್ಲಿ ಸಂಭವಿಸಿರುವುದು ಇದು ಕೇವಲ ಎರಡನೇ ಬಾರಿ. ಈ ಮುನ್ನ, 160 ವರ್ಷಗಳ ಹಿಂದೆ, ನೆಪ್ಚೂನ್ ಗ್ರಹದ ಇರುವಿಕೆಯನ್ನು ಮುಂಚೆಯೇ ಊಹಿಸಲಾಗಿತ್ತು. ನಂತರದ ವರ್ಷಗಳಲ್ಲಿ ಈ ಲೆಕ್ಕಾಚಾರ ನಿಜವಾಗಿತ್ತು. ಆದರೆ ಈಗಿನ ಸಾಧನೆ ಹಿಂದೆ ನುಡಿದಿದ್ದ ಭವಿಷ್ಯಕ್ಕಿಂತ ಹೆಚ್ಚಿನ ರೋಮಾಂಚನ ಮೂಡಿಸಿದೆ. ಕಾರಣ, ನೆಪ್ಚೂನ್ ನಮ್ಮ ಸೌರವ್ಯೆಹದೊಳಗೇ ಇರುವ ಗ್ರಹವಾದರೆ ಈಗ ಪತ್ತೆಯಾಗಿರುವ ಗ್ರಹ ಅದಕ್ಕಿಂತ ಕೋಟಿ ಕೋಟಿ ಪಟ್ಟು ಮೈಲುಗಳಾಚೆ ಇರುವ ಅನ್ಯ ನಕ್ಷತ್ರ ಲೋಕವೊಂದರ ಗ್ರಹ! ಭೂಮಿಯಿಂದ 212 'ಬೆಳಕಿನ ವರ್ಷ'ಗಳಷ್ಟು ಅಗಾಧ ದೂರದಲ್ಲಿ ಹೊಳಪಿನ ತಾರೆಯೊಂದರ ಸುತ್ತ ಈ ಗ್ರಹ ಇರುವ ಸಾಧ್ಯತೆಯನ್ನು ವಾಷಿಂಗ್ಟನ್ ವಿ.ವಿ.ಯ ಖಗೋಳ ವಿಜ್ಞಾನಿಗಳು ಮೊದಲಿಗೆ 2004ರಲ್ಲಿ ಊಹಿಸಿದ್ದರು. 'ರೇಡಿಯಲ್ ವೆಲಾಸಿಟಿ' ಎಂಬ ಪರಿಕಲ್ಪನೆ ಮೂಲಕ 2007ರಲ್ಲಿ ಈ ಊಹೆಗೆ ರೆಕ್ಕೆಪುಕ್ಕ ಬಂದಿತ್ತು. ಅದೀಗ ಪ್ರತ್ಯಕ್ಷವಾಗಿ ಕ್ಯಾಮರಾದಲ್ಲಿ ದಾಖಲಾಗುವ ಮೂಲಕ ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ನಿಜವಾಗಿ ಬಿಟ್ಟಿತು. ತಾರೆಯ ಸುತ್ತಲ ದೂಳಿನುಂಗುರದ ಸಂಗತಿಗಳ ಕೂಲಂಕಷ ಅಧ್ಯಯನದಿಂದ ಅಲೈಸ್ ಕ್ವಿಲ್ಲೆನ್ ಗ್ರಹದ ಇರುವಿಕೆ ಊಹೆ ಮಾಡಿದ್ದರು. ಬ್ರಹ್ಮಾಂಡದ ತಾರಾ ಸಾಮ್ರಾಜ್ಯದಲ್ಲಿ ಇರುವ ಗ್ರಹದ ಗಾತ್ರ ಹಾಗೂ ಸ್ಥಾನವನ್ನು ನಿಖರವಾಗಿ ಲೆಕ್ಕಾಚಾರ ಹಾಕುವ ವಿಶ್ವಪ್ರಸಿದ್ಧ ತಜ್ಞರಲ್ಲಿ ಅಲೈಸ್ ಒಬ್ಬರು.

2008: 'ಡಾರ್ವಿನ್ನನ ಜೀವವಿಕಾಸ ಸಿದ್ದಾಂತ ಇನ್ನು 10 ವರ್ಷಗಳಲ್ಲಿ ಕೇವಲ ಇತಿಹಾಸವಾಗಿಯಷ್ಟೇ ಪಠ್ಯಪುಸ್ತಕಗಳಲ್ಲಿ ಉಳಿಯಲಿದೆ' ಎಂದು ಟರ್ಕಿಯ ವಿದ್ವಾಂಸನೊಬ್ಬನ ವಿವಾದಾತ್ಮಕ ಪ್ರತಿಪಾದನೆ ವಿಜ್ಞಾನ ಜಗತ್ತಿನಲ್ಲಿ ತಲ್ಲಣಗಳನ್ನು ಎಬ್ಬಿಸಿತು.. ಜೀವವಿಕಾಸ ಸಿದ್ಧಾಂತ ಬರೀ ಬೊಗಳೆ. ಈ ಸಿದ್ಧಾಂತ ಪುಷ್ಟೀಕರಿಸಲು ಅಗತ್ಯವಾದ 'ಸ್ಥಿತ್ಯಂತರ ಪಳೆಯುಳಿಕೆ' ಅಸ್ತಿತ್ವದಲ್ಲೇ ಇಲ್ಲ. ಆದರೆ ದೈವ ಪ್ರೇರಣೆಯಿಂದ ಈ ಪ್ರಪಂಚ ಸೃಷ್ಟಿಯಾಗಿದೆ ಎಂಬುದನ್ನು ಪುಷ್ಟೀಕರಿಸಲು 100 ದಶಲಕ್ಷ ಪಳೆಯುಳಿಕೆಗಳು ಜಗತ್ತಿನಲ್ಲಿವೆ ಎಂದು ಅದ್ನಾನ್ ಒಕ್ತರ್ ಎಂಬ ವಿದ್ವಾಂಸ ತರ್ಕ ಮಂಡಿಸಿದರು. ಸುಮಾರು 800 ಪುಟಗಳ 'ಅಟ್ಲಾಸ್ ಆಫ್ ಕ್ರಿಯೇಷನ್' ಎಂಬ ಬೃಹತ್ ಕೃತಿಯನ್ನೇ ಹೊರತಂದ ಅವರು, ಆ ಪುಸ್ತಕದಲ್ಲಿ ಡಾರ್ವಿನ್ನನ ಜೀವವಿಕಾಸ ಸಿದ್ಧಾಂತ ಇನ್ನು 10 ವರ್ಷಗಳಲ್ಲಿ ಗತಕಾಲದ ಸಿದ್ಧಾಂತವಾಗಿ ಮೂಲೆಗುಂಪಾಗಲಿದೆ ಎಂದು ಪ್ರತಿಪಾದಿಸಿದರು. ತಮ್ಮ ಕೃತಿಯ ಸಾವಿರಾರು ಪ್ರತಿಗಳನ್ನು ಈಗಾಗಲೇ ಪ್ರಪಂಚದ ವಿವಿಧೆಡೆ ಇರುವ ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಿಗೆ ರವಾನಿಸಿರುವುದಾಗಿ ಅವರು ಪ್ರಕಟಿಸಿದರು. ಹಿಂದಿ, ಉರ್ದು ಸೇರಿ ಭಾರತದ ಹಲವು ಭಾಷೆಗಳಿಗೂ ಕೃತಿಯ ಭಾಷಾಂತರ ಕಾರ್ಯ ನಡೆದಿದ್ದು ಭಾರಿ ಸಂಖ್ಯೆಯಲ್ಲಿ ಅದನ್ನು ವಿತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು. 'ಜೀವಜಾಲದ ಪ್ರತಿಯೊಂದು ಜೀವಿಯೂ ಪರಸ್ಪರ ಸಂಬಂಧ ಹೊಂದಿದ್ದು, ಅವೆಲ್ಲವೂ ಒಂದೇ ಮೂಲದಿಂದ ಜೀವ ತಳೆದಿವೆ. ಪ್ರಪಂಚದಲ್ಲಿ ಮೊತ್ತಮೊದಲ ಜೀವಕೋಶ ಉದ್ಭವಿಸಿದ್ದು ಕಾಕತಾಳೀಯವಾಗಿ' ಎನ್ನುತ್ತದೆ ಡಾರ್ವಿನ್ನನ ಪರಿಕಲ್ಪನೆ. 'ಆದರೆ, ಜಗತ್ತಿನ ಅಸ್ತಿತ್ವಕ್ಕೆ ಕಾರಣ ವಿಕಾಸವಾದ ಅಲ್ಲ; ದೈವವೇ ಈ ಸೃಷ್ಟಿಗೆಲ್ಲಾ ಕಾರಣ' ಎನ್ನುವುದು ಒಕ್ತರ್ ಹಾಗೂ ಆತನ ತಂಡದಲ್ಲಿರುವ 30 ವಿದ್ವಾಂಸರ ವಾದ. ತನ್ನ ಪ್ರತಿಪಾದನೆಯಿಂದಾಗಿ ಎಲ್ಲರ ಗಮನ ಸೆಳೆದಿರುವ ಒಕ್ತರ್‌ನ ಸಂದರ್ಶನ ಜಗತ್ತಿನ ಪ್ರಮುಖ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು ಯೂರೋಪಿನ ದೈನಿಕಗಳಲ್ಲಿ ಕೂಡ ಲೇಖನಗಳ ಸರಮಾಲೆಯೇ ಪ್ರಕಟಗೊಳ್ಳುತ್ತಿವೆ. ಆದರೆ ಹಲವಾರು ವಿಜ್ಞಾನಿಗಳು ಒಕ್ತರ್‌ನ ವಾದ ತಿರಸ್ಕರಿಸಿದರು. ಅಮೆರಿಕ ಹಾಗೂ ಯೂರೋಪ್‌ನ ಹಲವಾರು ತಜ್ಞರು, ಒಕ್ತರ್ ವಿಕಾಸವಾದದ ಬುನಾದಿ ಏನೆಂಬುದನ್ನೇ ಸರಿಯಾಗಿ ಗ್ರಹಿಸಿಲ್ಲ ಎಂದು ಟೀಕಿಸಿದರು.

2008: ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಖಾಲಿಯಿದ್ದ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಮೈಸೂರು ವಿ.ವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿ.ಜಿ.ತಳವಾರ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಆದೇಶ ಹೊರಡಿಸಿದರು.

2008: 1998, 2003 ನಂತರ 2008ರಲ್ಲಿ ಮೂರನೇ ಬಾರಿ ಸತತವಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಲ್ಲಿ ಯಶಸ್ಸಿಯಾದ ಶೀಲಾ ದೀಕ್ಷಿತ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದರು. ಪಕ್ಷದ 42 ಶಾಸಕರು ಶೀಲಾ ದೀಕ್ಷಿತ್ ಅವರನ್ನು ಆಯ್ಕೆಮಾಡಿದರು. ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೊಹ್ಸಿನಾ ಕಿದ್ವಾಯಿ, ರಾಜ್ಯ ಹಣಕಾಸು ಸಚಿವ ಪಿ.ಕೆ. ಬನ್ಸಾಲ್ ಮತ್ತು ಡಿಪಿಸಿಸಿ ಮುಖ್ಯಸ್ಥ ಜೈಪ್ರಕಾಶ್ ಅಗರ್‌ವಾಲ್ ಭಾಗವಹಿಸಿದ್ದರು.

2008: ಮಿಜೋರಾಂ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ- ಮಾಜಿ ಮುಖ್ಯಮಂತ್ರಿ ಲಾಲ್ತನ್‌ ಹವ್ಲಾ ಅವಿರೋಧವಾಗಿ ಆಯ್ಕೆಯಾದರು.

2007: ಎಲ್. ಕೆ. ಅಡ್ವಾಣಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ನೇತೃತ್ವ ವಹಿಸಿ ಮುನ್ನಡೆಸಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಈದಿನ ಸಂಜೆ ನವದೆಹಲಿಯಲ್ಲಿ ಪ್ರಕಟಿಸಿದರು. ಗುಜರಾತ್ ವಿಧಾನಸಭೆಗೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿಯ ತುರ್ತು ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರನ್ನೇ ಮುಂದಿನ ಪ್ರಧಾನ ಮಂತ್ರಿ ಎಂದು ಬಿಂಬಿಸಲು ನಿರ್ಧರಿಸಲಾಯಿತು ಈ ತೀರ್ಮಾನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪೂರ್ಣ ಒಪ್ಪಿಗೆ ಇದೆ ಎಂದೂ ರಾಜನಾಥ್ ಸಿಂಗ್ ಹೇಳಿದರು.

2007: ಮಕ್ಕಳಿಲ್ಲದ ಕೊರಗಿದೆಯೇ? ಆಲೂಗಡ್ಡೆ ಬಿಡಿ, ಐಸ್ ಕ್ರೀಮ್ ತಿನ್ನಿ, ಅದರಿಂದ ಮಹಿಳೆಯರು ಗರ್ಭವತಿಯರಾಗುವ ಸಾಧ್ಯತೆ ಹೆಚ್ಚು ಎಂದು ಹಾರ್ವರ್ಡಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಶೋಧನೆ ತಿಳಿಸಿತು. ಕೆಲವೊಂದು ಆಹಾರ ಪದಾರ್ಥಗಳು ಹಾಗೂ ಜೀವನ ಪದ್ಧತಿ ಹಾರ್ಮೋನುಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಮೂಲಕ ಗರ್ಭಧಾರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ಬ್ರೆಡ್, ಸಿಹಿ ಲಘು ಪಾನೀಯ, ಆಲೂ ಪದಾರ್ಥಗಳ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ದಿಢೀರನೇ ಹೆಚ್ಚುವುದರಿಂದ ಹಾರ್ಮೋನುಗಳ ಮೇಲೆ ದುಷ್ಪರಿಣಾಮವಾಗುತ್ತದೆ. ಆದರೆ ಹಾಲು ಹಾಗೂ ಹೈನು ಉತ್ಪನ್ನಗಳ ಸೇವನೆ ಹಾಗೂ ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಕೆಲ ಬದಲಾವಣೆಗಳು ಅಂಡಾಣು ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ ಎಂದು ಸಂಶೋಧನೆ ಹೇಳಿತು.

2007: ಶ್ವಾಸಕೋಶ ಕ್ಯಾನ್ಸರಿಗೆ ಹಸಿರು ತರಕಾರಿ ಮಿಶ್ರಣ (ಪಚಡಿ ಅಥವಾ ಸಲಾಡ್) ಉತ್ತಮ ಮದ್ದು ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಕ್ಯಾನ್ಸರ್ ಸಂಶೋಧನಾ ಕೇಂದ್ರ ಪತ್ತೆ ಹಚ್ಚಿತು. ಹಸಿರು ತರಕಾರಿಗಳ ಸೇವನೆ ಜೊತೆಗೆ ಕೈತೋಟದಲ್ಲಿ ಕೆಲಸ ಮಾಡುವುದರಿಂದ ಶ್ವಾಸಕೋಶ ಕ್ಯಾನ್ಸರ್ ಬರುವ ಸಾಧ್ಯತೆ ತೀರಾ ಕಡಿಮೆ. ಧೂಮಪಾನಿಗಳಿಗೆ ಇದು ಉತ್ತಮ ಔಷಧ ಎಂದು ವರದಿ ಹೇಳಿತು.

2007: `ಬ್ಯಾಂಕಿನ ಸಾಲ ವಸೂಲಿ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತನ' ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಐಸಿಐಸಿಐ ಬ್ಯಾಂಕಿಗೆ ಮುತ್ತಿಗೆ ಹಾಕಿದ ರೈತರು ಹಾಗೂ ಪ್ರತಿಭಟನೆಕಾರರು ಜಿಲ್ಲಾಧಿಕಾರಿಯನ್ನು ಸ್ಥಳಕ್ಕೇ ಕರೆಸಿ, ಬ್ಯಾಂಕಿಗೆ ಬೀಗಮುದ್ರೆ ಹಾಕಿಸಿದ ನಾಟಕೀಯ ಪ್ರಕರಣ ಮೈಸೂರು ನಗರದಲ್ಲಿ ನಡೆಯಿತು. ರಮಾವಿಲಾಸ ರಸ್ತೆಯಲ್ಲಿನ ಐಸಿಐಸಿಐ ಬ್ಯಾಂಕಿನ ಮುಂದೆ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರತಿಭಟನೆ ರಾತ್ರಿಯೂ ಮುಂದುವರಿಯಿತು. ಹೊಸಹಳ್ಳಿ ಕಸಬಾದ ರೈತ ಎಚ್.ಎಂ. ಮಂಜುನಾಥ್ ಬ್ಯಾಂಕಿನಿಂದ ಟ್ರಾಕ್ಟರ್ ಕೊಳ್ಳಲು ಒಟ್ಟು 4.79 ಲಕ್ಷ ರೂಪಾಯಿಯ ಮೂರು ಸಾಲಗಳನ್ನು ಪಡೆದಿದ್ದರು. ಆರು ತಿಂಗಳಿಗೊಮ್ಮೆ ಕಂತು ಕಟ್ಟಬೇಕಿದ್ದ ಅವರು ಮೊದಲ ಕಂತು 48 ಸಾವಿರ ರೂಪಾಯಿಗಳನ್ನು ಕಟ್ಟಿದ್ದರು. ಎರಡನೆಯ ಕಂತು ಕಟ್ಟಲು ಒತ್ತಡ ಹೇರಿದ್ದ ಬ್ಯಾಂಕಿನವರು ನವೆಂಬರ್ 5ರ ದಿನಾಂಕ ನಮೂದಿಸಿ ಏಳು ದಿನಗಳ ಒಳಗೆ ಹಣ ಕಟ್ಟಬೇಕೆಂದು ಒಟ್ಟು ಮೂರು ನೋಟಿಸ್ ಕಳಿಸಿದ್ದರು. ಮೊದಲ ನೋಟಿಸಿನಲ್ಲಿ 42,194 ರೂಪಾಯಿ, ಎರಡನೆ ನೋಟಿಸಿನಲ್ಲಿ 3,866 ರೂಪಾಯಿ ಹಾಗೂ ಮೂರನೆ ನೋಟಿಸಿನಲ್ಲಿ 7,839 ರೂಪಾಯಿ ಕಟ್ಟಬೇಕೆಂದು ಸೂಚಿಸಲಾಗಿತ್ತು. ಆದರೆ ಮಂಜುನಾಥ್ ಗೆ ಈ ನೋಟಿಸುಗಳು ಡಿಸೆಂಬರ್ 3ರಂದು ತಲುಪಿದವು. ಡಿಸೆಂಬರ್ 4ರಂದೇ ಗ್ರಾಮಕ್ಕೆ ಬಂದ ಬ್ಯಾಂಕಿನ ಖಾಸಗಿ ವಸೂಲಿ ಸಿಬ್ಬಂದಿ ಹೊಲದಿಂದ ಟ್ರಾಕ್ಟರಿನಲ್ಲಿ ಬರುತ್ತಿದ್ದ ಮಂಜುನಾಥ ಅವರನ್ನು ತಡೆದು ಬಲವಂತವಾಗಿ ಟ್ರಾಕ್ಟರನ್ನು ವಶಕ್ಕೆ ತೆಗೆದುಕೊಂಡರು. ವಾರದೊಳಗೆ ಕಂತು ಕಟ್ಟುವುದಾಗಿ ಹೇಳಿದರೂ ಕಿವಿಗೊಡಲಿಲ್ಲ. ಗ್ರಾಮಸ್ಥರ ಎದುರೇ ಆದ ಈ ಅವಮಾನದಿಂದ ತೀವ್ರ ಮನನೊಂದ ಮಂಜುನಾಥ, ಅಂದೇ ಸಂಜೆ ವಿಷ ಸೇವಿಸಿ, ಹೊಲದ ಬದಿಯಲ್ಲಿದ್ದ ನೀರಿನ ಬಂಡ್ ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡರು.

2007: ಕೈಗಾರಿಕಾಭಿವೃದ್ಧಿಯ ನೆಪದಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕ್ರಮದ ವಿರುದ್ಧ ರೈತರು ಮೈಸೂರಿನಲ್ಲಿ ಹಗಲು ರಾತ್ರಿ ಧರಣಿ ಆರಂಭಿಸಿದರು.

2006: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸೇರಿದಂತೆ 7ಮಂದಿ ಬಾಹ್ಯಾಕಾಶಯಾನಿಗಳನ್ನು ಹೊತ್ತ `ಡಿಸ್ಕವರಿ' ಬಾಹ್ಯಾಕಾಶ ನೌಕೆಯನ್ನು ಅಮೆರಿಕದ ಫ್ಲೋರಿಡಾದಲ್ಲಿ ಇರುವ ಕೇಪ್ ಕೆನವರಾಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 7.17ಕ್ಕೆ ಯಶಸ್ವಿಯಾಗಿ ಹಾರಿಬಿಡಲಾಯಿತು. ನೌಕೆ ಕೇವಲ 9 ನಿಮಿಷಗಳಲ್ಲಿ ಬಾಹ್ಯಾಕಾಶದಲ್ಲಿ ತನ್ನ ಸೂಚಿತ ಕಕ್ಷೆಯನ್ನು ತಲುಪಿತು. `ಡಿಸ್ಕವರಿ' ನೌಕೆಯು 2003ರಲ್ಲಿ ಭಾರತದ ಕಲ್ಪನಾ ಚಾವ್ಲಾ ಸೇರಿದಂತೆ 7 ಮಂದಿ ಗಗನ ಯಾತ್ರಿಗಳು ಇದ್ದ ಕೊಲಂಬಿಯಾ ನೌಕೆ ಸ್ಫೋಟಗೊಂಡ ಘಟನೆ ನಂತರ ಉಡಾವಣೆಗೊಂಡ 4ನೇ ನೌಕೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ ರಾತ್ರಿ ಹೊತ್ತಿನಲ್ಲಿ ನಡೆದ ಮೊದಲ ಉಡಾವಣಾ ಕಾರ್ಯಕ್ರಮ ಇದು. ಬಾಹ್ಯಾಕಾಶದಂಚಿನಲ್ಲಿ `ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ'ದ ಮರುನಿರ್ಮಾಣ ಹಾಗೂ ದುರಸ್ತಿ ಉದ್ದೇಶಕ್ಕಾಗಿ `ಡಿಸ್ಕವರಿ' ನೌಕೆಯನ್ನು ಹಾರಿಬಿಡಲಾಯಿತು. 12ದಿನಗಳ ಕಾಲ ನಡೆಯಲಿರುವ ಈ ಮರುನಿರ್ಮಾಣ ಕಾರ್ಯ ಅಥವಾ ದುರಸ್ತಿ ಕಾರ್ಯ ಅತಿ ಸಂಕೀರ್ಣಮಯವಾಗಿದ್ದು, ಇದಕ್ಕಾಗಿ 11ದಶಕೋಟಿ ಡಾಲರ್ ವೆಚ ್ಚಮಾಡಲಾಗುತ್ತಿದೆ. ಇದು ಸಂಪೂರ್ಣಗೊಳ್ಳಲು ಸುಮಾರು 3ಬಾಹ್ಯಾಕಾಶ ನಡಿಗೆಗಳು ಬೇಕಾಗಬಹುದು ಎಂಬುದು ಅಮೆರಿಕದ ಬಾಹ್ಯಾಕಾಶ ಏಜೆನ್ಸಿಗಳ ಲೆಕ್ಕಾಚಾರ. ಡಿಸ್ಕವರಿ ನೌಕೆಯಲ್ಲಿ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಅವರಲ್ಲದೆ ಪೈಲಟ್ ವಿಲಿಯಮ್ ಓಫೆಲಿನ್, ಜಾನ್ ಹಿಗ್ಗಿನ್ ಬಾಥಮ್, ನಿಕೋಲಾಸ್ ಪ್ಯಾಟ್ರಿಕ್, ಬಾಬ್ ಕರ್ಬೀಮ್ ಹಾಗೂ ಸ್ಟಾಕ್ ಹೋಂ ಭೌತಶಾಸ್ತ್ರಜ್ಞ ಕ್ರಿಸ್ಟೆರ್ ಫ್ಯುಗ್ಲೆಸಾಂಗ್ ಇದ್ದಾರೆ. ಈ 7 ಮಂದಿಯ ತಂಡದ ಕಮಾಂಡರ್ 50 ವರ್ಷ ವಯಸ್ಸಿನ ಜೆಟ್ ಪೈಲಟ್ ಮಾರ್ಕ್ ಪೊಲಾನ್ಸ್ಕಿ. ಸುನೀತಾ ವಿಲಿಯಮ್ಸ್ ಅವರು ತಮ್ಮ ಜೊತೆಗೆ ಪುಟ್ಟ ಗಣಪತಿ ವಿಗ್ರಹ, ಭಗವದ್ಗೀತೆ ಮತ್ತು ಸಮೋಸಾವನ್ನೂ ಬಾಹ್ಯಾಕಾಶಕ್ಕೆ ಒಯ್ದು ತಮ್ಮ ಭಾರತೀಯತೆ ಮೆರೆದರು.

2006: ಶ್ರೀಲಂಕಾ ಪೂರ್ವಭಾಗದಲ್ಲಿ ಸರ್ಕಾರಿ ಪಡೆಗಳು ಮತ್ತು ತಮಿಳು ಉಗ್ರಗಾಮಿಗಳ ನಡುವೆ ಎರಡು ದಿನಗಳಿಂದ ನಡೆದ ಸಮರದಲ್ಲಿ ಸತ್ತವರ ಸಂಖ್ಯೆ 100 ದಾಟಿತು. ಗುಂಡಿನ ಘರ್ಷಣೆಯಿಂದ ಭಯಭೀತರಾದ 3000ಕ್ಕೂ ಹೆಚ್ಚು ನಾಗರಿಕರು ಮನೆ ಮಠ ಬಿಟ್ಟು ಓಡಿ ದೇವಾಲಯ, ಬೌದ್ಧ ಮಂದಿರಗಳಲ್ಲಿ ಆಶ್ರಯ ಪಡೆದರು. ಮೃತರಲ್ಲಿ ಸುಮಾರು 25 ಮಂದಿ ನಾಗರಿಕರು. 30 ಮಂದಿ ಸೈನಿಕರು ಮತ್ತು 40 ಮಂದಿ ತಮಿಳು ಉಗ್ರಗಾಮಿಗಳು.

2006: ಹಿಂದಿನ ವಾರವಷ್ಟೇ `ಡ್ಯೂರಿಯನ್' ಚಂಡಮಾರುತದಿಂದ ತತ್ತರಿಸಿದ್ದ ಫಿಲಿಪ್ಪೀನ್ಸಿನ ಸಹಸ್ರಾರು ಮಂದಿ ಇನ್ನೊಂದು ಚಂಡಮಾರುತ `ಉತೂರ್' ಭಯದಿಂದ ಮನೆಮಠಗಳನ್ನು ಬಿಟ್ಟು ತಾತ್ಕಾಲಿಕ ಆಶ್ರಯಗಳಲ್ಲಿ ಇಡೀ ರಾತ್ರಿಯನ್ನು ಕಳೆದರು. ಕೇಂದ್ರ ಫಿಲಿಪ್ಪೀನ್ಸಿಗೆ ಅಪ್ಪಳಿಸಿದ ಈ `ಉತೂರ್' ಚಂಡಮಾರುತ ಮೂವರನ್ನು ಬಲಿ ತೆಗೆದುಕೊಂಡು ಹಲವಾರು ಪ್ರದೇಶಗಳ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಹಿಂದಿನ ವಾರ ಅಪ್ಪಳಿಸಿದ್ದ `ಡ್ಯೂರಿಯನ್' ಚಂಡಮಾರುತ 1000 ಜನರನ್ನು ಬಲಿ ತೆಗೆದುಕೊಂಡು, ಸಕ್ರಿಯವಾಗಿರುವ `ಮೌಂಟ್ ಮಯೋನ್' ಜ್ವಾಲಾಮುಖಿಯಿಂದ ಹೊರಟ ಲಾವಾರಸದ ಜೊತೆಗೆ ಭಾರಿ ಮಳೆ, ಕೆಸರು ನೀರನ್ನು ಹೊತ್ತು ತಂದು ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು.

2006: ಹದಿನೇಳು ವರ್ಷಗಳ ಕಾಲ ಚಿಲಿಯಲ್ಲಿ ಸರ್ವಾಧಿಕಾರ ನಡೆಸಿದ್ದ ಆಗಸ್ಟೋ ಪಿನೋಷೆ (91) ಈದಿನ ನಡುರಾತ್ರಿ ನಿಧನರಾದರು. ಆಡಳಿತಾವಧಿಯಲ್ಲಿ ನೂರಾರು ಜನರ ಹತ್ಯೆಗೆ ಪಿನೋಷೆ ಕಾರಣರಾಗಿದ್ದ ಹಿನ್ನೆಲೆಯಲ್ಲಿ ಚಿಲಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿತು. ಕೆಲವರು ಖುಷಿಯಿಂದ ಕುಣಿದು ಕುಪ್ಪಳಿಸಿದರೆ, ಇನ್ನು ಕೆಲವರು ಪಿನೋಷೆ ಚಿಲಿಯನ್ನು ಕಮ್ಯೂನಿಸ್ಟರ ಕಪಿ ಮುಷ್ಟಿಯಿಂದ ಪಾರು ಮಾಡಿದರು ಎಂದು ಹೇಳಿ ಕಣ್ಣೀರಿಟ್ಟರು. ಕೆಲವೆಡೆ ವ್ಯಾಪಕ ಹಿಂಸಾಚಾರವೂ ನಡೆಯಿತು.

2006: ಬಾಂಗ್ಲಾದೇಶದ ಸಹಸ್ರಾರು ಜನರ ಉತ್ತಮ ಬದುಕಿನ ಕನಸನ್ನು ನನಸಾಗಿಸಿದ `ಗ್ರಾಮೀಣ ಬ್ಯಾಂಕ್' ರೂವಾರಿ ಮಹಮ್ಮದ್ ಯೂನಸ್ ಅವರಿಗೆ ಪ್ರಸಕ್ತ ವರ್ಷದ ನೊಬೆಲ್ ಪ್ರಶಸ್ತಿಯನ್ನು ಓಸ್ಲೋದಲ್ಲಿ ಪ್ರದಾನ ಮಾಡಲಾಯಿತು.

2005: ದಕ್ಷಿಣ ಚೀನಾದ ಸಾನ್ಯಾದಲ್ಲಿ ನಡೆದ ವಿಶ್ವ ಸುಂದರಿ (ಮಿಸ್ ವರ್ಲ್ಡ್- 2005) ಸ್ಪರ್ಧೆಯಲ್ಲಿ ಐಸ್ ಲ್ಯಾಂಡಿನ ಬೆಡಗಿ ಉನ್ನೂರ್ ಬಿರ್ನಾ ವಿಲ್ಜಾ ಮ್ಯಾಡಾಟಿರ್ ವಿಶ್ವ ಸುಂದರಿ ಕಿರೀಟ ಧರಿಸಿದರು. ಮಿಸ್ ಮೆಕ್ಸಿಕೊ ಡಾಫ್ಲೆ ಮೊಲಿನಾ ಲೋನಾ ಅವರು ದ್ವಿತೀಯ ಸ್ಥಾನವನ್ನೂ, ಮಿಸ್ ಪೋರ್ಟರಿಕೊ ಇಂಗ್ರಿಡ್ ಮೇರಿ ರಿವೇರಾ ಸ್ಯಾಂಟೊ ಮೂರನೇ ಸ್ಥಾನವನ್ನೂ ಗಳಿಸಿದರು. ಭಾರತದ ಸಿಂಧೂರ ಗದ್ದೆ ಸೇರಿದಂತೆ 102 ಸ್ಪರ್ಧಿಗಳು ಕಣದಲ್ಲಿ ಇದ್ದರು.

2005: ನೈಜೀರಿಯಾದ ಪ್ರಯಾಣಿಕ ವಿಮಾನವೊಂದು ಪೋರ್ಟ್ ಹಾರ್ ಕೋರ್ಟ್ ನಗರದಲ್ಲಿ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ ಕನಿಷ್ಠ 103 ಜನ ಮೃತರಾದರು. ಸೊಸೊಲಿಸೊ ಏರ್ ಲೈನ್ಸಿಗೆ ಸೇರಿದ ಈ ವಿಮಾನ ಅಬುಜಾದಿಂದ ಪ್ರಯಾಣ ಹೊರಟಿತ್ತು.

2005: ಶ್ರೀಲಂಕಾ ವಿರುದ್ಧ ದೆಹಲಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಜೀವನದ 35ನೇ ಶತಕ ಗಳಿಸುವ ಮೂಲಕ ಸಚಿನ್ ರಮೇಶ ತೆಂಡೂಲ್ಕರ್ ಅವರು ವಿಶ್ವದಾಖಲೆ ಸ್ಥಾಪಿಸಿ ಹೊಸ ಎತ್ತರಕ್ಕೆ ಏರಿದರು.

2005: ಈಕ್ವೆಡಾರಿನ 116 ವರ್ಷ ವಯಸ್ಸಿನ ಅಜ್ಜಿ ಮರಿಯಾ ಎಸ್ತರ್ ಕ್ಯಾಪೊವಿಲ್ಲಾ ಅವರು ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಗಿನ್ನೆಸ್ ದಾಖಲೆಗಳ ಸಂಸ್ಥೆ ಮಾನ್ಯ ಮಾಡಿತು. ಈವರೆಗೆ ಅಮೆರಿಕದ ಟೆನ್ನಿಸೀ ಪ್ರಾಂತ್ಯದ ಮೆಂಫಿಸ್ನ ಎಲಿಜಬೆತ್ ಬೋಲ್ಡನ್ ಅವರಿಗೆ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿ ಇತ್ತು. ಮರಿಯಾ ಹುಟ್ಟಿದ್ದು 1889ರ ಸೆಪ್ಟೆಂಬರ್ 14ರಂದು. ಈಕ್ವಡಾರಿನ ಗುಯಾಕಲ್ ಎಂಬಲ್ಲಿ. ಐವರು ಮಕ್ಕಳು, ನಾಲ್ವರು ಮೊಮ್ಮಕ್ಕಳು, ಒಂಭತ್ತು ಮರಿಮಕ್ಕಳು ಮತ್ತು ಮರಿಮಕ್ಕಳ ನಾಲ್ಕು ಮಕ್ಕಳು ಈ ಅಜ್ಜಿಯ ಸಂಸಾರದ ಸದಸ್ಯರು. ಪತಿ 1949ರಲ್ಲಿ ಮೃತರಾಗಿದ್ದಾರೆ.

2005: ಜುಲೈ 7ರ ಲಂಡನ್ ಬಾಂಬ್ ದಾಳಿಯಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾದ ಹುಡುಗಿ ಗಿಲ್ ಹಿಕ್ಸ್ (37) ಜೊ ಕೆರ್ (47) ಅವರನ್ನು ಮದುವೆಯಾದರು. ಲಂಡನ್ನಿನ ರಸೆಲ್ ಚೌಕ ಟ್ಯೂಬ್ ಸ್ಟೇಷನ್ನಿನಿಂದ ಜೀವಂತವಾಗಿ ಕರೆತರಲಾದ ಕೊನೆಯ ವ್ಯಕ್ತಿಯ ಈಕೆಯಾಗಿದ್ದರು. ಆಕೆಯ ಕಾಲುಗಳನ್ನು ಕತ್ತರಿಸಿ ಕೃತಕ ಕಾಲುಗಳನ್ನು ಜೋಡಿಸಲಾಗಿತ್ತು. ಆ ಕೃತಕ ಕಾಲುಗಳಲ್ಲೇ ನಡೆದಾಡಲು ಆಕೆ ಅಭ್ಯಾಸ ಮಾಡಿಕೊಂಡರು.

2005: ವೆಲಿಂಗ್ಟನ್ನಿನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಎರಡು ವಿಕೆಟುಗಳ ಅಂತರದ ವಿಜಯ ಸಾಧಿಸುವ ಮೂಲಕ ನ್ಯೂಜಿಲೆಂಡ್ ತಂಡವು ವಿಶ್ವದಾಖಲೆಯ ಗೌರವ ಪಡೆಯಿತು. ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ ಐವತ್ತು ಓವರುಗಳಲ್ಲಿ 331 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ನ್ಯೂಜಿಲೆಂಡ್ 49 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 332 ರನ್ ಪೇರಿಸಿ, ಅತಿ ಹೆಚ್ಚು ಮೊತ್ತದ ಗುರಿಯನ್ನು ಬೆನ್ನಟ್ಟಿ ವಿಜಯಸಾಧಿಸಿದ ವಿಶ್ವ ದಾಖಲೆಯ ಶ್ರೇಯಸ್ಸು ಸಾಧಿಸಿತು. 2002ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ ಕಳೆದುಕೊಂಡು 330 ರನ್ ಪೇರಿಸಿದದ ಆಸ್ಟ್ರೇಲಿಯಾ ಈ ವಿಶ್ವದಾಖಲೆಯ ಶ್ರೇಯಸ್ಸು ಗಳಿಸಿತ್ತು.

1988: ವಿಶಾಖಪಟ್ಟಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ಪಟು ಕೃಷ್ಣಮಾಚಾರಿ ಶ್ರೀಕಾಂತ್ ಅವರು 27 ರನ್ನುಗಳಿಗೆ 5 ವಿಕೆಟುಗಳನ್ನು ಉರುಳಿಸಿದ ಹಾಗೂ ಅರ್ಧ ಶತಕಕ್ಕೂ ಹೆಚ್ಚು (70) ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1961: ಸಾಹಿತಿ ವಾಸಂತಿ ಆದಿಕೇಷ್ ಜನನ.

1952: ಜಗತ್ತಿನಲ್ಲೇ ಮೊದಲ ಬಾರಿಗೆ ಭಾರತದಲ್ಲಿ ಕುಟುಂಬ ನಿಯಂತ್ರಣ ಯೋಜನೆ ಜಾರಿಗೊಂಡಿತು.

1948: ಸಾಹಿತಿ ಮಾರ್ಕಂಡಪುರಂ ಜನನ.

1948: ಸಾಹಿತಿ ಶ್ರೀನಿವಾಸ್ ಜನನ.

1942: ಬಾಂಬೆಯ (ಈಗಿನ ಮುಂಬೈ) ವೈದ್ಯ ದ್ವಾರಕಾನಾಥ್ ಶಾಂತಾರಾಮ್ ಕೊಟ್ನಿಸ್ (1910-1942) ತಮ್ಮ 32ನೇ ವಯಸ್ಸಿನಲ್ಲಿ ಮೃತರಾದರು. ಇವರು 1938ರಲ್ಲಿ ಚೀನಾಕ್ಕೆ ತೆರಳಿ ಚೀನೀ-ಜಪಾನ್ ಯುದ್ಧದಲ್ಲಿ ಕಮ್ಯೂನಿಸ್ಟ್ ಸೇನೆಗೆ ನೆರವಾಗಿದ್ದರು. ಭಾರತದ ಖ್ಯಾತ ಚಿತ್ರ ನಿರ್ದೇಶಕ ವಿ. ಶಾಂತಾರಾಮ್ ಅವರು `ಡಾ. ಕೊಟ್ನಿಸ್ ಕಿ ಅಮರ್ ಕಹಾನಿ' ಚಿತ್ರದ ಮೂಲಕ ಕೊಟ್ನಿಸ್ ಅವರನ್ನು ಅಮರರನ್ನಾಗಿ ಮಾಡಿದ್ದಾರೆ.

1939: ಸಾಹಿತಿ ಎಂ.ಕೆ. ರವೀಂದ್ರನಾಥ್ ಜನನ.

1922: ಸಾಹಿತಿ ಶಾಂತಾದೇವಿ ಮಾಳವಾಡ ಜನನ.

1902: ಭಾರತದ ಸ್ವಾತಂತ್ರ್ಯ ಹೋರಾಟಗಾರ ಮೈಸೂರಿನ (ಈಗಿನ ಕರ್ನಾಟಕ) ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪ (1902-2000) ಹುಟ್ಟಿದ ದಿನ.

1896: ಕನ್ನಡದ ಖ್ಯಾತ ವಿದ್ವಾಂಸ, ವಾಗ್ಮಿ ಸಿ.ಕೆ. ವೆಂಕಟರಾಮಯ್ಯ (10-12-1896ರಿಂದ 3-4-1973) ಅವರು ಕೃಷ್ಣಪ್ಪ- ನಂಜಮ್ಮ ದಂಪತಿಯ ಮಗನಾಗಿ ಚನ್ನಪಟ್ಟಣ ತಾಲ್ಲೂಕಿನ ಪೊಟ್ಟು ಗ್ರಾಮದಲ್ಲಿ ಜನಿಸಿದರು.

1878: ಚಕ್ರವರ್ತಿ ರಾಜಗೋಪಾಲಾಚಾರಿ ಅವರು ತಮಿಳುನಾಡಿನ ಹೊಸೂರಿನಲ್ಲಿ ಜನಿಸಿದರು.

1870: ಸರ್ ಜದುನಾಥ ಸರ್ಕಾರ್ (1870-1958) ಹುಟ್ಟಿದ ದಿನ. ಭಾರತೀಯ ಇತಿಹಾಸಕಾರರಾದ ಇವರು ಮೊಘಲ್ ವಂಶಕ್ಕೆ ಸಂಬಂಧಿಸಿದಂತೆ ಇತಿಹಾಸ ಬರೆದವರು.

1768: ಲಂಡನ್ನಿನಲ್ಲಿ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್ ಸ್ಥಾಪನೆಗೊಂಡಿತು. ಸರ್ ಜೊಶುವಾ ರೇನಾಲ್ಡ್ಸ್ ಅದರ ಮೊದಲ ಅಧ್ಯಕ್ಷರಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment