Wednesday, October 17, 2018

ಇಂದಿನ ಇತಿಹಾಸ History Today ಅಕ್ಟೋಬರ್ 17

ಇಂದಿನ ಇತಿಹಾಸ History Today ಅಕ್ಟೋಬರ್ 17
2018: ತಿರುವನಂತಪುರಂ: ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯದ ದ್ವಾರಗಳನ್ನು ತೆರೆದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನಪೀಠದ ಐತಿಹಾಸಿಕ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲುಗಳನ್ನು ತೆರೆಯಲಾಯಿತು. ಆದರೆ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಲು ಕೇರಳ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರವನ್ನು ಪ್ರತಿಭಟಿಸಿ ಅಯ್ಯಪ್ಪ ಭಕ್ತರು ನಡೆಸುತ್ತಿರುವ ತೀವ್ರ ಪ್ರತಿಭಟನೆ, ಕನಿಷ್ಠ ಇಬ್ಬರು ಮಹಿಳೆಯರ ಪ್ರವೇಶಕ್ಕೆ ತಡೆ, ಇಬ್ಬರು ಪತ್ರಕರ್ತೆಯರ ಮೇಲೆ ಹಲ್ಲೆ ಹಾಗೂ ಪೊಲೀಸರತ್ತ ಕಲ್ಲು ತೂರಾಟ, ಪ್ರತಿಭಟನಕಾರರ ಮೇಲೆ ಲಾಠಿಪ್ರಹಾರದ ಘಟನೆಗಳಿಗೆ ಶಬರಿಮಲೈ ಸಾಕ್ಷಿಯಾಯಿತು. ಪ್ರತಿಭಟನೆ, ಹಿಂಸಾಚಾರಗಳ ಹಿನ್ನೆಲೆಯಲ್ಲಿ ರಾತ್ರಿಯ ವೇಳೆಗೆ ಪಂಬಾ, ನೀಲಕ್ಕಲ್ ಮತ್ತಿತರ ಪ್ರದೇಶಗಳಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಯಿತು. ಮಹಿಳಾ ಪೊಲೀಸರೂ ಸೇರಿದಂತೆ ಭಾರೀ ಪ್ರಮಾಣದಲ್ಲಿ ಪೊಲೀಸ್ ನಿಯೋಜನೆಯ ಹಿನ್ನೆಲೆಯಲ್ಲಿ ಕೇರಳದ ಪಟ್ಟಣಂತಿಟ್ಟ ಜಿಲ್ಲೆ ಪ್ರಕ್ಷುಬ್ಧಗೊಂಡಿದ್ದು, ಪೊಲೀಸರು ಪ್ರತಿಭಟನಕಾರರನ್ನು ಚದುರಿಸಿದರೂ ಮತ್ತೆ ಮತ್ತೆ ಜಮಾವಣೆಗೊಂಡ ಪ್ರತಿಭಟನಕಾರರು ಆಂಧ್ರಪ್ರದೇಶದ ೪೦ರ ಹರೆಯದ ಒಬ್ಬ ಮಹಿಳೆ ಮತ್ತು ಪತ್ರಕರ್ತೆಯೊಬ್ಬರನ್ನು ತಡೆದು ಹಿಂದಕ್ಕೆ ಕಳುಹಿಸಿದರುಮಾಧವಿ ಎಂಬ ಆಂಧ್ರಪ್ರದೇಶದ ಮಹಿಳೆ ತನ್ನ ಪಾಲಕರು ಮತ್ತು ಮಕ್ಕಳ ಜೊತೆಗೆ ದೇವಾಲಯದಿಂದ ಕಿಮೀ ದೂರದಲ್ಲಿರುವ ಪಂಬಾ ಮೂಲ ಶಿಬಿರದಿಂದ ಭಾರೀ ಪೊಲೀಸ್ ಬೆಂಗಾವಲಿನೊಂದಿಗೆ ಬೆಟ್ಟ ಏರಲು ಆರಂಭಿಸಿದರು. ಆದರೆ ಪ್ರತಿಭಟನೆಕಾರರು ತೀವ್ರ ವಿರೋಧ ವ್ಯಕ್ತ ಪಡಿಸಿ, ಅವರನ್ನು ಅಡ್ಡಗಟ್ಟಿ ಹಿಂದಕ್ಕೆ ಕಳುಹಿಸಿದರು. ಲಿಬಿ ಎಂಬ ಕೇರಳದ ಪತ್ರಕರ್ತೆಯನ್ನು ಮಹಿಳಾ ಪ್ರತಿಭಟನಕಾರರೇ ತಡೆದು ಹಿಂದಕ್ಕೆ ಕಳುಹಿಸಿದರುನೀಲಕ್ಕಲ್ ಮತ್ತು ಪಂಬಾದಲ್ಲಿ ಪ್ರತಿಭಟನಕಾರರು ಒಡ್ಡಿದ್ದ ಅಡೆತಡೆಗಳನ್ನು ನಿವಾರಿಸಿಕೊಂಡು ಮಾಧವಿ ಅವರು ನಡೆಯುತ್ತಾ ಬೆಟ್ಟ ಏರಲು ಆರಂಭಿಸಿದ್ದರು, ಅವರ ಜೊತೆಗೇ ಬೆಟ್ಟ ಏರತೊಡಗಿದ ಪೊಲೀಸ್ ಅಧಿಕಾರಿಗಳು ಬೆಟ್ಟ ಏರುವುದೇ ಆಗಿದ್ದರೆ ಬೆಂಬಲ ನೀಡುವ ಭರವಸೆಯನ್ನೂ ನೀಡಿದ್ದರು. ಆದರೆ ಪ್ರತಿಭಟನೆ ತೀವ್ರಗೊಂಡಾಗ ಮಾಧವಿ ಬೆಟ್ಟ ಏರುವ ಬದಲು ಹಿಂದಕ್ಕೆ ತಿರುಗಿದರುಬ್ರಹ್ಮಚಾರಿ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಋತುಮತಿಯರಾದ ಮಹಿಳೆಯರ ಪ್ರವೇಶದ ಮೇಲಿರುವ ೮೦೦ ವರ್ಷಗಳಷ್ಟು ಹಳೆಯದಾದ ನಿಷೇಧವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ್ದರೂ, ಋತುಮತಿ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸಿದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಪ್ರತಿಭಟನಕಾರರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ, ನಿಯಂತ್ರಣದಲ್ಲಿದೆ ಎಂದು ವರದಿಗಳು ಹೇಳಿದವು. ದೇವಾಲಯದತ್ತ ಚಲನವಲನ ತಡೆಹಿಡಿಯಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂಬುದಾಗಿ ಪೊಲೀಸರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಶಬರಿಮಲೈಗೆ ಹೋಗುವ ದಾರಿಯಲ್ಲಿರುವ  ಪಟ್ಟಣಂತಿಟ್ಟ ಜಿಲ್ಲೆಯ ಎರುಮೆಲಿ, ವಡಸ್ಸ್ರಿಕಾರ ಇತ್ಯಾದಿ ಗ್ರಾಮಗಳು ಪ್ರಕ್ಷುಬ್ಧಗೊಂಡವು. ರಾಜಕೀಯ ಬಣ್ಣ: ಮಧ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿಭಟನಕಾರರಿಗೆ ಬೆಂಬಲ ವ್ಯಕ್ತ ಪಡಿಸಿದ್ದರೆ, ಎಡರಂಗ ಸರ್ಕಾರವು ಚಳವಳಿಯನ್ನುರಾಜಕೀಯ ಉದ್ದೇಶದ್ದು ಎಂಬುದಾಗಿ ಬಣ್ಣಿಸಿ, ಇದನ್ನು ರಾಜಕೀಯವಾಗಿಯೇ ಎದುರಿಸಲಾಗುವುದು ಎಂದು ಹೇಳುವುದರೊಂದಿಗೆ ಪ್ರತಿಭಟನೆಗಳಿಗೆ ರಾಜಕೀಯ ಬಣ್ಣ ಮೆತ್ತಿಕೊಂಡಿತು. ನೀಲಕ್ಕಲ್ನಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಬೆತ್ತ ಪ್ರಹಾರ ಮಾಡಿದಾಗ, ಪ್ರತಿಭಟನಕಾರರ ಗುಂಪು ಸೇಡು ತೀರಿಸಲು ಪೊಲೀಸರತ್ತ ಕಲ್ಲು ತೂರಾಟ ನಡೆಸಿತು. ಸರ್ಕಾರ ಮತ್ತು ಪೊಲೀಸರು ಶಬರಿಮಲೈಯನ್ನುಕದನ ವಲಯವನ್ನಾಗಿ ಮಾಡಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ಎಚ್ ಟಿ ರಮೇಶ್ ಆಪಾದಿಸಿದರುಶಬರಿಮಲೈ ತೀರ್ಪಿನ ವಿರುದ್ಧ ನಡೆದಿರುವ ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಕಾರ್ಯಕರ್ತ ರಾಹುಲ್ ಈಶ್ವರ್ ಅವರನ್ನು ಪೊಲೀಸರು ಬಂಧಿಸಿದರು.  ಈಶ್ವರ್ ಅವರು ಶಬರಿಮಲೈ ದೇವಾಲಯದ ಹಿಂದಿನ ಮುಖ್ಯ ಅರ್ಚಕರ ಮೊಮ್ಮಗ.  ತೀವ್ರ ಪ್ರತಿಭಟನೆಗಳ ಬಳಿಕ ಪಂಬಾ ನಿಧಾನವಾಗಿ ಸಹಜ ಸ್ಥಿತಿಗೆ ತಿರುಗುತ್ತಿದ್ದರೂ, ನೀಲಕ್ಕಲ್ ನಲ್ಲಿ ಭಕ್ತರು ಅಯಪ್ಪ ಸ್ವಾಮಿ ಮಂತ್ರ ಪಠಿಸುತ್ತಾ ಹಲವಾರು ವಾಹನಗಳ ಮೇಲೆ ದಾಳಿ ನಡೆಸುವುದರೊಂದಿಗೆ ಚಳವಳಿಗೆ ಇನ್ನಷ್ಟು ಬಿಸಿಯೇರಿತು. ಬುಡಕಟ್ಟು ಜನರ ವಿರೋಧ: ಶಬರಿಮಲೈ ಸುತ್ತ ಮುತ್ತಣ ಕಾಡು ಪ್ರದೇಶಗಳಲ್ಲಿ ವಾಸವಾಗಿರುವ ಬುಡಕಟ್ಟು ಜನರುಕೆಲವು ಸ್ಥಾಪಿತ ಹಿತಾಸಕ್ತಿಗಳು ವಿಷಯದ ಬಗ್ಗೆ ರಾಜಕೀಯ ನಡೆಸಲು ಸುಪ್ರೀಂಕೋರ್ಟ್ ತೀರ್ಪನ್ನು ಬಳಸುತ್ತಿವೆ ಎಂದು ದೂರಿದರು.   ‘ನಾವು ದೇವಾಲಯದಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿ ವಾಸವಾಗಿದ್ದೇವೆ. ವಯಸ್ಸಿನ ನಮ್ಮ ಮಹಿಳೆಯರು ಎಂದೂ ದೇವಾಲಯಕ್ಕೆ ಹೋಗುವ ಪ್ರಯತ್ನ ಮಾಡಿಲ್ಲ ಎಂದು ಸಮುದಾಯದ ಸದಸ್ಯರೊಬ್ಬರು ಹೇಳಿದರು.  ‘ಇದು ಅಯ್ಯಪ್ಪ ಸ್ವಾಮಿಯ ಪವಿತ್ರ ಭೂಮಿ. ಅಯ್ಯಪ್ಪ ಸ್ವಾಮಿ ನಮ್ಮ ರಾಜಕುಮಾರ. ಎಲ್ಲ ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತಿರುವ ನಮ್ಮ ಸ್ವಾಮಿಗೆ ತೊಂದರೆ ಕೊಡಲು ಯಾರಿಗೂ ಅವಕಾಶ ನೀಡಬಾರದು ಎಂದು ಕುರುವ ಸಮುದಾಯದ ಕಾರ್ತ್ಯಾಯನಿ (೫೪) ಹೇಳಿದರು.  ಋತುಮತಿ ವಯಸ್ಸಿನ ಮಹಿಳೆಯರು ಸೇರಿದಂತೆ ಎಲ್ಲ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶದ ಮೇಲಿದ್ದ ನಿಷೇಧವನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಹಕ್ಕುಗಳ ಕಾರ್ಯಕರ್ತರು ಶ್ಲಾಘಿಸಿದ್ದರೆ, ಸಂಪ್ರದಾಯಸ್ಥರು ವಿರೋಧಿಸಿದ್ದರು. ಶಬರಿಮಲೈ ಪ್ರತಿಭಟನೆಗಳಿಗೆ ಪ್ರತಿಕ್ರಿಯಿಸಿದ ಸಿಪಿಐ ನಾಯಕ ಡಿ. ರಾಜಾ ಅವರುಮಾಧ್ಯಮ ವ್ಯಕ್ತಿಗಳ ಮೇಲೆ ಮತ್ತು ಅಲ್ಲಗೆ ತೆರಳಲು ನಿರ್ಧರಿಸಿದ್ದ ಮಹಿಳೆಯರ ಮೇಲೆ ನಡೆದ ಹಲ್ಲೆಯನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ಇವುಗಳನ್ನು ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟಿಸಿವೆ. ಅವರು ಕೋಮು ಸೌಹಾರ್ದವನ್ನು ಹಾಳುಗಡೆವಲು ಬಯಸಿದ್ದಾರೆ. ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ವ ಯತ್ನ ಮಾಡುತ್ತಿದೆ ಎಂದು ಹೇಳಿದರು.  ಈಮಧ್ಯೆ ಪಂಬಾ ಮತ್ತು ನೀಲಕ್ಕಲ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತ್ಯೇಕವಾಗಿ ಧರಣಿ, ಉಪವಾಸ ಮುಷ್ಕರ ನಡೆಸಿದೆವು. ಶಬರಿಮಲೈ ಆಚಾರ ಸಂರಕ್ಷಣಾ ಸಮಿತಿ ಹೆಸರಿನ ಗುಂಪೊಂದು ನಿರ್ಮಿಸಿದ್ದ ತಾತ್ಕಾಲಿಕ ಶಿಬಿರವನ್ನು ಪೊಲೀಸರು ಕಿತ್ತು ಹಾಕಿದರು. ಆದರೆ ಕೆಲವೇ ಗಂಟೆಗಳಲ್ಲಿ ಪ್ರತಿಭಟನಕಾರರ ಗುಂಪು ಅಯ್ಯಪ್ಪ ಸ್ವಾಮಿ ಮಂತ್ರಿ ಪಠಿಸುತ್ತಾ ಪುನಃ ಜಮಾಯಿಸಿತು. ರಾಹುಲ್ ಈಶ್ವರ ಬಂಧನದ ಬಳಿಕ ಬಿಜೆಪಿ ನಾಯಕರಾದ ಕೆ. ಸುರೇಂದ್ರನ್, ಶೋಭಾ ಸುರೇಂದ್ರನ್ ಮತ್ತಿತರು ನೇತೃತ್ವ ವಹಿಸಿಕೊಂಡು ಪ್ರತಿಭಟನೆ ಮುಂದುವರೆಸಿದರು. ಪೊಲೀಸರು ರಾಹುಲ್ ಈಶ್ವರ್ ಅವರ ಅಜ್ಜಿಯನ್ನೂ ಬಂಧಿಸಿದರು. ಮಾಸಿಕ ಪ್ರಾರ್ಥನೆಗಾಗಿ ದೇವಾಲಯದ ಬಾಗಿಲು ತೆರೆಯವುದಕ್ಕೆ ಕೆಲವೇ ಗಂಟೆಗಳ ಮುನ್ನ ಪೊಲೀಸರು ಯಾರೇ ಭಕ್ತರ ಚಲನವಲನಕ್ಕೆ ಯಾರಿಂದಲೂ ಅಡ್ಡಿಯಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದರು. ನೀಲಕ್ಕಲ್ ನಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಪೊಲೀಸರು ಭಕ್ತರ ಮಾರ್ಗಕ್ಕೆ ಅಡ್ಡಿ ಪಡಿಸಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಆದರೆ ವಾಸ್ತವದಲ್ಲಿ ಪೊಲೀಸರ ಹೇಳಿಕೆ ಸುಳ್ಳಾಗಿತ್ತು. ಉದ್ರಿಕ್ತ ಪ್ರದರ್ಶನಕಾರರು ಪೊಲೀಸರು ತಮಗೆ ಶೋಧಿಸಲು ಅವಕಾಶ ನಿರಾಕರಿಸಿದ ಬಳಿಕ ಪೊಲೀಸ್ ವಾಹನಗಳತ್ತ ಕಲ್ಲೆಸೆದರು. ಮತ್ತು ಮಹಿಳೆಯರು ದೇಗುಲ ಪ್ರವೇಶಿಸದಂತೆ ತಡೆಯುವಲ್ಲಿ ಯಶಸ್ವಿಯಾದರು ಎಂದು ವರದಿಗಳು ಹೇಳಿದವು. ಪಂಬಾದಲ್ಲಿ ಈಶ್ವರ್ ಅವರ ನೇತೃತ್ವದ ಪ್ರತಿಭಟನಾಕಾರರ ಗುಂಪು ಮೂವರು ಮಹಿಳಾ ಪೊಲೀಸರನ್ನೂ ತಡೆಯುವಲ್ಲಿ ಯಶಸ್ವಿಯಾಯಿತು. ಮಹಿಳಾ ಪೊಲೀಸರ ನಿಯೋಜನೆಯನ್ನೇ ಪ್ರಶ್ನಿಸಿದ ಪ್ರತಿಭಟನಕಾರರು ಪೊಲೀಸ್ ಸಿಬ್ಬಂದಿಯನ್ನು ಒಯ್ಯುತ್ತಿದ್ದ ಬಸ್ಸನ್ನೇ ತಡೆದು ನಿಲ್ಲಿಸಿದರು.  ಪ್ರತಿಭಟನಕಾರರು ಹಿಂಸೆಗಿಳಿದಾಗ ಪೊಲೀಸರು ಬೆತ್ತ ಪ್ರಹಾರ ಮಾಡಿದರು. ಸಿಟ್ಟಿಗೆದ್ದ ಪ್ರತಿಭಟನಕಾರರು ಪೊಲೀಸರತ್ತ ಕಲ್ಲೆಸೆದರು ಎಂದು ವರದಿಗಳು ಹೇಳಿದವು. ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷೆ ಕಂಡಾರು ಮಹೇಶ್ವರಾರು ತಂತ್ರಿಯ ಪತ್ನಿಯನ್ನು ಪಂಬಾದಲ್ಲಿ ೫೦ ಮಂದಿ ಪ್ರತಿಭಟನಕಾರರೊಂದಿಗೆ ಬಂಧಿಸಿದ ಪೊಲೀಸರು ಅವರ ವಿರುದ್ಧ ಪತ್ರಕರ್ತೆಯ ವಿರುದ್ಧ ದಾಳಿ ನಡೆಸಿದ್ದಕ್ಕಾಗಿ ಪ್ರಕರಣ ದಾಖಲಿಸಿದರುಮಲಯಾಳಿ ತುಲಾ ತಿಂಗಳಲ್ಲಿನ ಐದು ದಿನಗಳ ಮಾಸಿಕ ಪೂಜಾ ವಿಧಿಗಳ ಬಳಿಕ ಅಕ್ಟೋಬರ್ ೨೨ರಂದು ದೇವಾಲಯವನ್ನು ಮುಚ್ಚಲಾಗುತ್ತದೆ. ದೇವಾಲಯದತ್ತ ತೆರಳುವ ಭಕ್ತರನ್ನು ತಡೆಯಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ, ಸುಪ್ರೀಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನೂ ಸಲ್ಲಿಸಲಾಗುವುದಿಲ್ಲ ಎಂದೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಪುನರುಚ್ಚರಿಸಿದ್ದರು.  ಏನೇನು ಆಯಿತು?  * ಸಿಎನ್ ಎನ್ -ನ್ಯೂಸ್ ೧೮ ಸಿಬ್ಬಂದಿ ಸೇರಿದಂತೆ ದೇವಾಲಯದತ್ತ ಹೊರಟಿದ್ದ ಮಹಿಳಾ ಪತ್ರಕರ್ತರ ಮೇಲೆ ಹಲ್ಲೆ. * ಶಬರಿಮಲೈ ದೇಗುಲದತ್ತ ಹೊರಟಿದ್ದ ಇಬ್ಬರು ಮಹಿಳಾ ಭಕ್ತರು ಪ್ರತಿಭಟನೆಗಳ ಮಧ್ಯೆ ವಾಪಸ್. *ಪಂಬಾ, ನೀಲಕ್ಕಲ್ನಲ್ಲಿ ಕಾಂಗ್ರೆಸ್, ಬಿಜೆಪಿಯಿಂದ ಧರಣಿ, ನಿರಶನ.  *ತಂತ್ರಿ, ಪಂದಳ ರಾಜಕುಟುಂಬ ಮತ್ತು ಸರ್ಕಾರದ ಮಧ್ಯೆ ಸರ್ವಾನುಮತ ಮೂಡಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಡೆಸಿದ ಇನ್ನೊಂದು ಯತ್ನವೂ ವಿಫಲ.  *ಭಕ್ತರನ್ನು ತಡೆಯಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿಕೆಶಬರಿಮಲೈಯಲ್ಲಿ ಮಾಧ್ಯಮಗಳ ಮೇಲಿನ ದಾಳಿಗೆ ಮಾಧ್ಯಮಗಳನ್ನೇ ದೂಷಿಸಿದ ಪಕ್ಷೇತರ ಶಾಸಕ ಪಿ.ಸಿ. ಜಾರ್ಜ್. ’ಯಾವ ದಾಳಿಯೂ ನಡೆದಿಲ್ಲ.. ನಿಮಗೆ ಏನಾಗಿದೆಯೋ ಅದು ನೀವೇ ಮಾಡಿಕೊಂಡದ್ದು ಎಂದು ಜಾರ್ಜ್ ಹೇಳಿಕೆ. * ಜಾರ್ಜ್ ಹೇಳಿಕೆಗಾಗಿ ಅವರ ವಿರುದ್ಧ ಕ್ರಮಕ್ಕೆ ಸುಬ್ರಮಣಿಯಂ ಸ್ವಾಮಿ ಆಗ್ರಹ.
  
2018: ನವದೆಹಲಿ: ಲೈಂಗಿಕ ಕಿರುಕುಳದ ವಿರುದ್ಧದ ಮಹಿಳೆಯರ #ಮಿ ಟೂ ಅಭಿಯಾನಕ್ಕೆ ಸರ್ಕಾರದ ಮಟ್ಟದಲ್ಲಿ ಮೊದಲ ಜಯ ಲಭಿಸಿದ್ದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ತಾವು ವೃತ್ತಪತ್ರಿಕಾ ಸಂಪಾದಕರಾಗಿದ್ದಾಗ ಲೈಂಗಿಕ ದುರ್ವರ್ತನೆ ತೋರಿದರೆಂಬ ಆಪಾದನೆಗಳಿಗೆ ಈಡಾಗಿದ್ದ ಅಕ್ಬರ್ ಅವರು ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನ್ಯಾಯಕ್ಕಾಗಿ ವೈಯಕ್ತಿಕ ನೆಲೆಯಲ್ಲೇ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಪ್ರಕಟಿಸಿದರು. ಕನಿಷ್ಠ ಒಂದು ಡಜನ್ ಮಹಿಳಾ ಪತ್ರಕರ್ತರು #ಮಿ ಟೂ ಅಭಿಯಾನದ ಅಂಗವಾಗಿ, ೬೭ರ ಹರೆಯದ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ದುರ್ವರ್ತನೆಯ ಆಪಾದನೆ ಮಾಡಿದ್ದರು.  ‘ವೈಯಕ್ತಿಕ ನೆಲೆಯಲ್ಲಿ ನ್ಯಾಯಾಲಯದಲ್ಲಿ ನ್ಯಾಯ ಕೋರಲು ನಾನು ನಿರ್ಧರಿಸಿರುವುದರಿಂದ ಹುದ್ದೆಯಿಂದ ಕೆಳಗಿಳಿಯುವುದು ಸೂಕ್ತ ಮತ್ತು ನನ್ನ ವಿರುದ್ಧದ ಸುಳ್ಳು ಆರೋಪಗಳನ್ನು ಕೂಡಾ ವೈಯಕ್ತಿಕ ಸಾಮರ್ಥ್ಯದಿಂದಲೇ ಪ್ರಶ್ನಿಸಬೇಕು ಎಂದು ನಾನು ನಿರ್ಧರಿಸಿದ್ದೇನೆ. ಆದ್ದರಿಂದ ನಾನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನಾನು ಅತ್ಯಂತ ಆಭಾರಿಯಾಗಿದ್ದೇನೆ ಎಂದು ಅಕ್ಬರ್ ಹೇಳಿಕೆಯಲ್ಲಿ ತಿಳಿಸಿದರು. ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಸಮುಚ್ಚಯದಲ್ಲಿನ  ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆರಾವತ್ ಅವರ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಆಪಾದನೆಗಳನ್ನು ಮಾಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆಯನ್ನು  ಸಚಿವರು ಅಕ್ಟೋಬರ್ ೧೫ರಂದು ದಾಖಲಿಸಿದ್ದರು.  ಮೊತ್ತ ಮೊದಲು ಆಪಾದನೆಗಳು ಬಂದಾಗ ಅಧಿಕೃತ ವಿದೇಶ ಪ್ರವಾಸದಲ್ಲಿದ್ದ ಅಕ್ಬರ್ ಅವರನ್ನು ಹುದ್ದೆಯಿಂದ ಕಿತ್ತುಹಾಕಬೇಕು ಎಂಬ ತೀವ್ರ ಒತ್ತಡದಲ್ಲಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಸರ್ಕಾರ ಸಿಲುಕಿತ್ತುಅಕ್ಬರ್ ಅವರು ತಮ್ಮ ಮೇಲಿನ ಆರೋಪಗಳನ್ನು ತಮ್ಮ ವರ್ಚಸ್ಸಿಗೆ ಮಸಿ ಬಳಿಯುವ ಗುರಿ ಇಟ್ಟಿಕೊಂಡು ಮಾಡಲಾಗಿರುವ ದುರುದ್ದೇಶಪೂರಿತವಾದ ಆಪಾದನೆಗಳು ಎಂದು ತಳ್ಳಿ ಹಾಕಿದ್ದರು. ೨೦೧೯ರ ಲೋಕಸಭಾ ಚುನಾವಣೆಗಳಿಗೆ ಮುನ್ನ ರೂಪಿಸಲಾದ ರಾಜಕೀಯ ಸಂಚು ಇದು ಎಂದೂ ಅವರು ದೂರಿದ್ದರು. ವಿಷಯಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಅನುದ್ವೇಗದ ಮೌನ ತಳೆದಿದ್ದ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಬಳಿಕ ಅಕ್ಬರ್ ಅವರಿಂದ ಅಂತರ ಕಾಯ್ದುಕೊಂಡಿತು. ಘಟನೆಗಳು ಅಕ್ಬರ್ ಅವರು ಪಕ್ಷದ ಸದಸ್ಯರಾಗಿ ಇಲ್ಲದೇ ಇದ್ದಂತಹ ಕಾಲದ್ದು ಎಂದು ಪಕ್ಷ ಪ್ರತಿಪಾದಿಸಿತು. ತಮ್ಮ ವರ್ಚಸ್ಸನ್ನು ರಕ್ಷಿಸಿಕೊಳ್ಳಲು ಕಾನೂನಿನ ನೆರವು ಕೋರುವುದು ಅಕ್ಬರ್ ಅವರ ಹಕ್ಕಾಗಿದ್ದು, ಅದನ್ನು ಅವರಿಗೆ ನಿರಾಕರಿಸಲಾಗದು ಎಂದೂ ಪಕ್ಷವು ಪ್ರತಿಪಾದಿಸಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಏನಿದ್ದರೂ ಆಪಾದನೆಗಳ ಸತ್ಯಾಂಶ ಪತ್ತೆಗಾಗಿ ಪಕ್ಷವು ಆಪಾದನೆಗಳನ್ನು ಪರಿಶೀಲಿಸುವುದು ಎಂದು ಹೇಳಿದರು.  ಲೈಂಗಿಕ ದುರ್ವರ್ತನೆಗಳಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲು ಒತ್ತಡಗಳು ಹೆಚ್ಚಿದ್ದನ್ನು ಅನುಸರಿಸಿ, #ಮಿ ಟೂ ಚಳವಳಿಯಿಂದ ಉದ್ಭವವಾಗುತ್ತಿರುವ ವಿಷಯಗಳ ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸುವುದಾಗಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಪ್ರಕಟಿಸಿದೆ. ಮಹಿಳೆಯರು ಅನುಭವಿಸಿದ್ದ ಲೈಂಗಿಕ ಕಿರುಕುಳದ ಕಥೆಗಳು #ಮಿ ಟೂ ಶೀರ್ಷಿಕೆಯ ಅಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡವು.  ‘ಪ್ರತಿಯೊಂದು ದೂರಿನ ಹಿಂದಿನ ನೋವು ಮತ್ತು ಆಘಾತವನ್ನು ನಾನು ನಂಬುತ್ತೇನೆ. ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳದ ಪ್ರಕರಣಗಳ ಬಗ್ಗೆ ಶೂನ್ಯ ಸಹನೆಯೊಂದಿಗೆ ವ್ಯವಹರಿಸಬೇಕು ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಸಚಿವೆ ಮೇನಕಾ ಗಾಂಧಿ ಕಳೆದ ವಾರನಿವೃತ್ತ ನ್ಯಾಯಾಧೀಶರ ಸಮಿತಿ ರಚನೆಯ ಪ್ರಸ್ತಾಪ ಮುಂದಿಡುತ್ತಾ ಹೇಳಿದ್ದರು. ಸಮಿತಿ ರಚನೆ ನಿಟ್ಟಿನಲ್ಲಿ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬಹುತೇಕ ಬಿಜೆಪಿ ಸಂಸತ್ ಸದಸ್ಯರು ಮತ್ತು ಸಚಿವರು ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವುದರಿಂದ ದೂರ ಉಳಿದಿದ್ದರು. ಅನಾಮಧೇಯರಾಗಿ ಉಳಿಯ ಬಯಸಿದ ಪಕ್ಷದ ಪ್ರಮುಖ ಪದಾಧಿಕಾರಿಗಳುಸಚಿವರ ವಿರುದ್ಧದ ಆಪಾದನೆಗಳು ಪಕ್ಷದಲ್ಲಿಅಸಹನೀಯ  ಪರಿಸ್ಥಿತಿ ಉಂಟು ಮಾಡಿದೆ ಎಂದು ಹೇಳಿದ್ದರು. ಅವರ ಪೈಕಿ ಹಲವರು ಸಚಿವರು ಕೆಳಗಿಳಿಯಬೇಕು ಎಂದು ಬಯಸಿದ್ದರು.  ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಅಕ್ಬರ್ ಅವರು ರಮಣಿ ಅವರು ವೋಗ್ ಮ್ಯಾಗಜಿನ್ ನಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಬರೆದ ಬಹಿರಂಗ ಪತ್ರ ಮತ್ತು ತಮ್ಮ ಹೆಸರನ್ನು ಉಲ್ಲೇಖಿಸಿ ಅವರು ಪ್ರಕಟಿಸಿದ ಟ್ವೀಟ್ ಗಳನ್ನು ಉಲ್ಲೇಖಿಸಿದ್ದರು. ಆಪಾದನೆಗಳು ಬಂದಂದಿನಿಂದಲೂ ಅಕ್ಬರ್ ಅವರು ರಾಜೀನಾಮೆ ಸಲ್ಲಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದ್ದವುಕಾಂಗ್ರೆಸ್ ವಕ್ತಾರ ಎಸ್.ಜೈಪಾಲ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿಅಕ್ಬರ್ ಅವರು ಸಮಾಧಾನಕರ ವಿವರಣೆ ನೀಡಬೇಕು ಅಥವಾ ತತ್ ಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ‘ಜೊತೆಗೇ ಕೆಲಸ ಮಾಡಿದ್ದ ಜವಾಬ್ದಾರಿಯುತ ಪತ್ರಕರ್ತರು ಮಾಡಿದ ಇಂತಹ ಗಂಭೀರ ಆರೋಪಗಳ ಬಳಿಕ ಅವರು ಹೇಗೆ ಸಚಿವಾಲಯದಲ್ಲಿ ಮುಂದುವರೆಯುತ್ತಾರೆ? ಬಗ್ಗೆ  ತನಿಖೆ ನಡೆಯಬೇಕು. ಅಕ್ಬರ್ ಅವರ ವರ್ತನೆಗಳ ಬಗ್ಗೆ ತನಿಖೆ ನಡೆಯಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ರೆಡ್ಡಿ ಹೇಳಿದ್ದರು. ಕನಿಷ್ಠ ೧೦ ಮಂದಿ ಪತ್ರಕರ್ತೆಯರು ಅಕ್ಬರ್ ಕೈಯಲ್ಲಿ ತಮಗಾದ ಲೈಂಗಿಕ ಕಿರುಕುಳದ ಅನುಭವಗಳ ವಿವರಗಳನ್ನು ನೀಡಿದ್ದಾರೆ. ದಿ ವೈರ್ ವೆಬ್ ಸೈಟಿನಲ್ಲಿ ನೀಡಿದ ಕಥೆಯಲ್ಲಿ ಘಜಾಲಾ ವಹಾಬ್ ಅವರು ಅಕ್ಬರ್ ಅವರು ಕಾಮುಕ ಸಂದೇಶಗಳನ್ನು ತಮ್ಮ ಕಚೇರಿಯ -ಮೇಲ್ ಗೆ ಕಳುಹಿಸುತ್ತಿದ್ದರು. ೧೯೯೭ರಲ್ಲಿ ತನ್ನನ್ನು ಅವರ ಕಚೇರಿಗೆ ಪದ ಒಂದರ ಅರ್ಥ ಪರಿಶೀಲಿಸುವ ನೆಪದಲ್ಲಿ ಕರೆಸಿಕೊಂಡು ಮೈದಡವಿದ್ದರು ಎಂದು ಬರೆದಿದ್ದರುಪತ್ರಕರ್ತೆ ಶುತಾಪ ಪೌಲ್ ಅವರು ಇಂಡಿಯಾ ಟುಡೆಯಲ್ಲಿ ಅಕ್ಬರ್ ಜೊತೆಗೆ ಕೆಲಸ ಮಾಡುತ್ತಿದ್ದಾಗ ತಮಗಾದ ಅನುಭವವನ್ನು ವಿವರಿಸಿದ್ದರು. ಸರಣಿ ಟ್ವೀಟ್ಗಳಲ್ಲಿ ಪೌಲ್ ಅವರು ಅಕ್ಬರ್ ಅವರ ಲೈಂಗಿಕ ಚೇಷ್ಟೆಗಳನ್ನು ತಿರಸ್ಕರಿಸಿದ್ದಕಾಗಿ ತಾವು ಹೇಗೆ ಬಲವಂತವಾಗಿ ಕೆಲಸ ಬಿಡಬೇಕಾಗಿ ಬಂತು ಎಂದು ವಿವರಿಸಿದ್ದರು. ಸಭಾ ನಕ್ವಿ ಅವರು ಕೋಲ್ಕತ ಮೂಲದ ದಿ ಟೆಲಿಗ್ರಾಫ್ ದೈನಿಕ ಮತ್ತು ಡೈಲಿ ವೆಬ್ ಸೈಟಿನಲ್ಲಿ ಕೆಲಸ ಮಾಡುತ್ತಿದ್ದಾಗ ಅಕ್ಬರ್ ಜೊತೆಗೆ ತಮಗಾದ ಅನುಭವ ಹಂಚಿಕೊಂಡಿದ್ದರು. ರಾಷ್ಟ್ರೀಯ ಮಹಿಳಾ ಆಯೋಗವು ಸಂತ್ರಸ್ಥ  ಮಹಿಳೆಯರನ್ನು ತಮ್ಮ ದೂರುಗಳನ್ನು ಸಂಬಂಧ ಪಟ್ಟವರಲ್ಲಿ ದಾಖಲಿಸುವಂತೆ ಆಗ್ರಹಿಸಿತ್ತು.


2016: ಹರಿದ್ವಾರ: ಕುಖ್ಯಾತಿಯ ಸ್ವಯಂ ಘೋಷಿತ ದೇವ ಮಾತೆ ರಾಧೇ ಮಾ ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿಕೊಂಡರು. ಗಂಗಾ ನದಿಯ ತೀರಹರ್ ಕೀ ಪೋಡಿಗೆ ಶೂ ಧರಿಸಿಯೇ ಭೇಟಿ ನೀಡಿದ ರಾಧೆ ಮಾ, ಶೂ ಧರಿಸಿಯೇ ಗಂಗಾ ಮಾತೆಗೆ ಹಾಲೆರೆದು ವಿವಾದ ಸೃಷ್ಟಿಸಿಕೊಂಡರು.ಅ.16ರ ಶನಿವಾರ ರಾತ್ರಿ ಈ ಘಟನೆ ಘಟಿಸಿತು. ಹಿಂದುಗಳು ಪುಣ್ಯ ಕ್ಷೇತ್ರವೆಂದು ನಂಬಿರುವಹರ್ ಕೀ ಪೋಡಿಪ್ರವೇಶಿಸುವವರು ಶೂ, ಚಪ್ಪಲಿ ಧರಿಸುವಂತಿಲ್ಲ. ಆದಾಗ್ಯೂ ರಾಧೇ ಮಾ ಶೂ ಧರಿಸಿಯೇ ಪ್ರವೇಶಿಸಿ, ಪೂಜೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಯಿತು. ಅನೇಕ ಭಕ್ತಾದಿಗಳು ಬಗ್ಗೆ ಆಕ್ಷೆಪ ವ್ಯಕ್ತಪಡಿಸಿ, ಇದರಿಂದ ಧಾರ್ವಿುಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹರಿದ್ವಾರದ ಯುವ ತೀರ್ಥ ಪುರೋಹಿತ್ ಮಹಾಸಭಾ, ಭವಿಷ್ಯದಲ್ಲಿ ಅವರಿಗೆ ಯಾವುದೇ ಕಾರಣಕ್ಕೂಹರ್ ಕೀ ಪೋಡಿಗೆ ಭೇಟಿ ನೀಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿತು.

2016: ನವದೆಹಲಿ: ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗುವ ಅಂಚಿಗೆ ಬಂದು ನಿಂತಿದೆ. ಭಯೋತ್ಪಾದನೆ ವಿರುದ್ಧದ ಅದರ ನಿಷ್ಕ್ರಿಯತೆಗೆ ಧನ್ಯವಾದಗಳುಎಂದು ಪಾಕಿಸ್ತಾನದದಿ ನೇಷನ್ಪತ್ರಿಕೆ ಪಾಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.  ಸರ್ಕಾರ ಮತ್ತು ಪಾಕಿಸ್ತಾನದ ಭದ್ರತಾ ಸಂಸ್ಥೆಗಳ ವಿರುದ್ಧ ಪತ್ರಿಕೆ ಎರಡು ವಾರಗಳ ಅವಧಿಯಲ್ಲಿ ಬರೆದ ಎರಡನೆಯ ಕಠಿಣ ಸಂಪಾದಕೀಯ ಇದು. ದಿ ನೇಷನ್ಪತ್ರಿಕೆ ಪಾಕ್ ಸರ್ಕಾರ ಮತ್ತು ಸೇನಾ ವ್ಯವಸ್ಥೆಗೆ ಅತ್ಯಂತ ಆಪ್ತವಾದ ಪತ್ರಿಕೆ ಎಂಬುದಾಗಿ ಪರಿಗಣನೆಯಾಗಿರುವ ಹಿನ್ನೆಲೆಯಲ್ಲಿ ಪತ್ರಿಕೆಯ ಕಠಿಣ ಸಂಪಾದಕೀಯ ಹೆಚ್ಚಿನ ಮಹತ್ವ ಪಡೆಯಿತು. ಗಡಿಯಾಚೆಯ ಭಯೋತ್ಪಾದಕ ದಾಳಿಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಚೆಲ್ಲಲು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಅವಕಾಶವನ್ನೂ ಬಿಡದೆ ಮಾಡುತ್ತಿರುವ ಯತ್ನಗಳು ಮತ್ತು ಭಾನುವಾರ ಪಾಕಿಸ್ತಾನವನ್ನು ಪರೋಕ್ಷವಾಗಿಭಯೋತ್ಪಾದನೆಯ ಮಾತೃನೌಕೆಎಂಬುದಾಗಿ ಬಣ್ಣಿಸಿರುವುದನ್ನು ಪತ್ರಿಕೆ ಉಲ್ಲೇಖಿಸಿತು. ಭಾರತದ ಉರಿಯಲ್ಲಿನ ಸೇನಾ ನೆಲೆ ಮೇಲೆ ನಡೆದ ದಾಳಿಗೆ ಜಾಗತಿಕ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿರುವುದರಿಂದ ಪಾಕ್ ನಾಗರಿಕ ಸಮಾಜಕ್ಕೆ ಇರುಸು ಮುರುಸು ಆಗಿರುವುದಕ್ಕೆ ಪಾಕ್ ಮಾಧ್ಯಮವೇ ತನ್ನ ಸರ್ಕಾರದ ವಿರುದ್ಧ ಮಾಡಿರುವ ಕಟು ಟೀಕೆಯು ಸಂಕೇತವಾಗಿದೆ. ಪಾಕಿಸ್ತಾನದ ಗಾಢ ಮಿತ್ರ ರಾಷ್ಟ್ರವಾಗಿರುವ ಚೀನಾ ಕೂಡಾ ಭಯೋತ್ಪಾದನೆ ವಿರುದ್ಧದ ನಿಷ್ಕ್ರಿಯತೆಗೆ ಕಳವಳ ವ್ಯಕ್ತ ಪಡಿಸಿದ್ದನ್ನು ಉಲ್ಲೇಖಿಸಿರುವ ಪತ್ರಿಕೆಸರ್ಕಾರವು ಯಾವುದೇ ತಾರತಮ್ಯ ರಹಿತವಾಗಿ ಭಯೋತ್ಪಾದಕರನ್ನು ಮಟ್ಟ ಹಾಕಬೇಕಾದ ಅಗತ್ಯವಿದೆ. ತನ್ಮೂಲಕ ತನ್ನ ಮಾತುಗಳಿಗೆ ಕೃತಿಯ ಬೆಂಬಲ ನೀಡಬೇಕಾಗಿದೆಎಂದು ಹೇಳಿತು.
ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿಸುವ ವಿಷಯಕ್ಕೆ ಭಾರತವು ಎಷ್ಟು ಬದ್ಧವಾಗಿದೆ ಎಂಬುದನ್ನು ಮೋದಿ ಹೇಳಿಕೆ ತೋರಿಸುತ್ತದೆ. ಸಾರ್ಕ್ ಶೃಂಗಸಭೆಯನ್ನು ರದ್ದುಪಡಿಸಿದ್ದರಿಂದ ಹಿಡಿದು ಪಾಕಿಸ್ತಾನಿ ಕಲಾವಿದರನ್ನು ಬಹಿಷ್ಕರಿಸುವಲ್ಲಿವರೆಗಿನ ಕ್ರಮಗಳು ಪ್ರತಿಯೊಂದು ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಪಾಕಿಸ್ತಾನವನ್ನು ದುರ್ಬಲಗೊಳಿಸುವ ದೃಢ ನಿಲುವನ್ನು ಮೋದಿ ಆಡಳಿತ ತೋರಿಸಿದೆ. ಪ್ರತ್ಯೇಕಿಸಲ್ಪಟ್ಟಾಗ ಅದರ ಪರಿಣಾಮ ಗಂಭಿರವಾಗಿರುತ್ತದೆ. ಪಾಕಿಸ್ತಾನ ಎಂದಿಗೂ ಅದನ್ನು ಬಯಸುವುದಿಲ್ಲಎಂದು ಪತ್ರಿಕೆಯ ಸಂಪಾದಕೀಯ ಹೇಳಿತು.
 2016: ಸಾಷ್ಟಿ (ಗೋವಾ): ಭಯೋತ್ಪಾದನೆ ನಿಗ್ರಹ, ಮಾದಕ ದ್ರವ್ಯ ಹಾವಳಿ ನಿರ್ಮೂಲನೆ, ಕೃಷಿ ಸಂಶೋಧನೆ ಮತ್ತು ಸೈಬರ್ ಭದ್ರತೆಯ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಗೆ ಭಾರತ ಮತ್ತು ಬ್ರೆಜಿಲ್ ಒಪ್ಪಿಕೊಂಡವು.. ದ್ವಿಪಕ್ಷೀಯ ಮಾತುಕತೆಗಳ ಉಭಯ ರಾಷ್ಟ್ರಗಳು  ಇಲ್ಲಿ ಇದಕ್ಕೆ ಸಂಬಂಧಿಸಿದ ಒಪ್ಪಂದ, ತಿಳಿವಳಿಕೆ ಪತ್ರಗಳಿಗೆ ಸಹಿ ಮಾಡಿದವು. ಮಾತುಕತೆಗಳ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಚಾರವನ್ನು ತಿಳಿಸಿ, ‘ಭಯೋತ್ಪಾದನೆ ನಿಗ್ರಹಕ್ಕಾಗಿ ಭಾರತ ಕೈಗೊಳ್ಳುತ್ತಿರುವ ಕ್ರಮಗಳಿಗೆ ಬ್ರೆಜಿಲ್ ಬೆಂಬಲ ನೀಡಿರುವುದನ್ನು ನಾವು ಮೆಚ್ಚುತ್ತೇವೆ. ಹಾವಳಿಯ ವಿರುದ್ಧದ ತಾರತಮ್ಯ ರಹಿತ ಹೋರಾಟದಲ್ಲಿ ವಿಶ್ವವು ಒಟ್ಟಾಗಬೇಕು ಎಂಬುದನ್ನು ನಾವಿಬ್ಬರೂ ಒಪ್ಪಿದ್ದೇವೆಎಂದು ಹೇಳಿದರು. ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಅಂತಿಮಗೊಳಿಸುವ ಹಂತಕ್ಕೆ ಬ್ರೆಜಿಲ್ ಬಂದಿದೆ ಎಂದು ಹರ್ಷ ವ್ಯಕ್ತ ಪಡಿಸಿದ ಪ್ರಧಾನಿ ಬ್ರೆಜಿಲ್ ಕಂಪೆನಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡಲು ಸ್ವಾಗತಿಸುವುದಾಗಿ ಹೇಳಿದರು. ಲ್ಯಾಟಿನ್ ಅಮೆರಿಕದ ಅತ್ಯಂತ ಮಹತ್ವದ ಆರ್ಥಿಕ ಪಾಲುದಾರರಲ್ಲಿ ಬ್ರೆಜಿಲ್ ಒಂದು. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯ ಎಲ್ಲ ಮಟ್ಟಗಳಲ್ಲೂ ವಿಸ್ತರಿಸಿದೆ ಎಂದು ಅವರು ನುಡಿದರು.

2016: ಮುಂಬೈ: ಅಪರಿಚಿತ ದುಷ್ಕರ್ವಿುಗಳ ಗುಂಡಿನ ದಾಳಿಗೆ 72 ವರ್ಷದ ಆರ್ಟಿಐ ಕಾರ್ಯಕರ್ತರೊಬ್ಬರು ಬಲಿಯಾದ ಘಟನೆ ಮುಂಬೈನ ಸಾಂತಾಕ್ರೂಜ್ ಉಪನಗರದಲ್ಲಿ ಹಿಂದಿನ ರಾತ್ರಿ ಘಟಿಸಿತು.  ಭುಪೇಂದ್ರ ವಿರಾ ದುಷ್ಕರ್ವಿುಗಳ ಗುಂಡಿಗೆ ಬಲಿಯಾದ ದುರ್ದೈವಿ. ಭುಪೇಂದ್ರ ವಿರಾ ಕಳೆದ ಕೆಲ ವರ್ಷಗಳಿಂದ ಕಲಿನಾ ಪ್ರದೇಶಗಳಲ್ಲಿನ ಭೂ ಮಾಫಿಯಾ ವಿರುದ್ಧ ಹೋರಾಡುತ್ತಿದ್ದರು. ಇದೇ ಹಿನ್ನೆಲೆಯಲ್ಲಿ ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದರು.  ಕಳೆದ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಮನೆಯೊಳಕ್ಕೆ ನುಗ್ಗಿದ ದುಷ್ಕರ್ವಿುಗಳು, ಏಕಾಏಕಿ ಗುಂಡು ಹಾರಿಸಿ ಪರಾರಿಯಾದರು ಎಂದು ದೂರು ದಾಖಲಿಸಿಕೊಂಡಿರುವ ವಕೋಲಾ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದರು..
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ವಿರಾ ಅವರೊಂದಿಗೆ ಬೆಂಬಲಕ್ಕೆ ನಿಂತಿದ್ದ ಹೋರಾಟಗಾರ್ತಿ, ಎಎಪಿ ನಾಯಕಿ ಅಂಜಲಿ ದಾಮನಿಯ, ಇದು ಭೂಮಾಫಿಯಾದಲ್ಲಿ ತೊಡಗಿಕೊಂಡಿರುವವರ ಕೃತ್ಯವೇ ಆಗಿದ್ದು, ಕೂಡಲೇ ಹಂತಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
 2016: ಶ್ರೀನಗರ: ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ನಲ್ಲಿ ಹಿಂದಿನ ದಿನ ನಡೆದ ಪಾಕಿಸ್ತಾನಿ ಪಡೆ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಯೋಧ 6 ರಜಪೂತ್ ತುಕಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುದೇಶ್ ಕುಮಾರ್ ಎಂದು ಪೊಲೀಸರು ಮಾಹಿತಿ ನೀಡಿದರು. ತರ್ಕಂಡಿ ಪ್ರದೇಶದಲ್ಲಿ ಸೇವೆಯಲ್ಲಿರುವಾಗ  ಸುದೇಶ್ ಪಾಕಿಸ್ತಾನ ಪಡೆ ದಾಳಿಗೆ ಹುತಾತ್ಮರಾಗಿರುವುದಾಗಿ ತಿಳಿಸಿದರು. ಪಾಕಿಸ್ತಾನಿ ಪಡೆ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತದ ಸೈನಿಕರು ದಿಟ್ಟ ಉತ್ತರ ನೀಡಿದ್ದರು24 ವರ್ಷದ ಯೋಧ ಸುದೇಶ್ ಕುಮಾರ್ ಉತ್ತರ ಪ್ರದೇಶದ ಸಾಂಭಾಲ್ನವರಾಗಿದ್ದಾರೆ. ಯೋಧ ಸುದೇಶ್ ಪತ್ನಿ ಮತ್ತು ಹೆತ್ತವರನ್ನು ಅಗಲಿದರು..

2016: ನವದೆಹಲಿ: ರಾಷ್ಟ್ರರಾಜಧಾನಿ ಹಂತ ಹಂತವಾಗಿ ಡಿಜಿಟಲೀಕರಣದತ್ತ ಸಾಗುತ್ತಿದೆ. ಇದಕ್ಕೆ ಮುನ್ನುಡಿ ಎನ್ನುವಂತೆ ಸರ್ಕಾರಿ ಶಾಲೆಗಳಿಗೆ ಟ್ಯಾಬ್ಲೆಟ್ಗಳನ್ನು ವಿತರಿಸಲು ದೆಹಲಿ ಸರ್ಕಾರ ಮುಂದಾಯಿತು.  ಇನ್ನು ಮುಂದೆ ಹಾಜರಾತಿ, ಪಾಠ, ನೋಟ್ಸ್ ಮತ್ತು ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವನ್ನು ಶಿಕ್ಷಕರು ಟ್ಯಾಬ್ಗಳಲ್ಲಿಯೇ ದಾಖಲಿಸುತ್ತಾರೆ. ಕುರಿತು ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಪ್ರತಿಕ್ರಿಯಿಸಿ, ಶಿಕ್ಷಕರಿಗೆ ಟ್ಯಾಬ್ಲೆಟ್ಸ್ ವಿತರಿಸುವುದರಿಂದ ಅವರ ಕೆಲಸ ಸುಲಭವಾಗಲಿದೆ. ಎಲ್ಲಾ ಮಾಹಿತಿಗಳನ್ನು ಸುಕ್ಷಿತವಾಗಿ ಸಂಗ್ರಹಿಸಿಡಲು ಸಾಧ್ಯ. ವಿಚಾರವಾಗಿ ಶಿಕ್ಷಣ ಇಲಾಖೆ ಮತ್ತು ಐಟಿ ಇಲಾಖೆ ಜತೆಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು. ಪ್ರಸ್ತುತ ದೆಹಲಿ ಸರ್ಕಾರದ ಅಡಿಯಲ್ಲಿ 1024 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

2016: ಬ್ಯಾಂಕಾಕ್: ನೀರಿನಲ್ಲಿಮುಳುಗುತ್ತಿದ್ದತನ್ನ ಮಾನವ ಗೆಳೆಯನನ್ನು ರಕ್ಷಿಸಲು ಮರಿಯಾನೆಯೊಂದು ನೀರಿನೊಳಕ್ಕೆ ಧಾವಿಸಿ ಬಂದ ಹೃದಯಸ್ಪರ್ಶಿ ಸನ್ನಿವೇಶವೊಂದು ಕ್ಯಾಮರಾದಲ್ಲಿ ದಾಖಲಾಗಿದ್ದು, ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಯಿತು.  ಅಂದಾಜು 22 ಲಕ್ಷ ಮಂದಿ ವಿಡಿಯೋವನ್ನುಲವ್ಮಾಡಿದ್ದಾರೆ ಎನ್ನಲಾಯಿತು.  ಅಕ್ಟೋಬರ್ 12ರಂದು ಯು ಟ್ಯೂಬ್ಗೆ ಅಪ್ಲೋಡ್ ಆಗಿರುವ ವಿಡಿಯೋ ಖಾಮ್ ಲ್ಹಾ ಎಂಬ ಮರಿಯಾನೆ ಮತ್ತು ಡರ್ರಿಕ್ ಎಂಬ ಆನೆಯ ತರಬೇತುದಾರನ ನಡುವಣ ಅದ್ಭುತ ಆತ್ಮೀಯತೆಯನ್ನು ತೋರಿಸಿತು.  ಉತ್ತರ ಥಾಯ್ಲೆಂಡಿನ ಎಲಿಫೆಂಟ್ ನೇಚರ್ ಪಾರ್ಕ್ನಲ್ಲಿ ವಿಡಿಯೋವನ್ನು ಸೆರೆ ಹಿಡಿಯಲಾಗಿತ್ತು.  ಆನೆಯ ತರಬೇತುದಾರ ಡರಿಕ್ನೀರಿನಲ್ಲಿ ಈಜಾಡುತ್ತಿದ್ದುದನ್ನು ಆನೆಗಳ ಹಿಂಡಿನಲ್ಲಿ ಇದ್ದ ಮರಿಯಾನೆ ಖಾಮ ಲ್ಹಾ ಗಮನಿಸುತ್ತದೆ. ತನ್ನ ಅತ್ಯುತ್ತಮ ಗೆಳೆಯನಾದ ಡರ್ರಿಕ್ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಎಣಿಸಿದ ಮರಿಯಾನೆ ಆತನಿಗೆ ನೆರವಾಗಲೆಂದು ದಡ ದಡನೆ ನೀರಿಗೆ ಇಳಿದು ಆತನ ಬಳಿಗೆ ಸಾಗುತ್ತದೆ.
ಮರಿಯಾನೆ ಬರುತ್ತಿರುವುದನ್ನು ಗಮನಿಸಿದ ತರಬೇತುದಾರ ದಂಡೆಯ ಬಳಿಗೆ ಈಜುತ್ತಾ ಸಾಗಿದಾಗ ಆನೆಯೂ ಅಲ್ಲಿಗೆ ಧಾವಿಸಿ ಬರುತ್ತದೆ. ಸಮೀಪ ಬಂದೊಡನೆಯೇ ತರಬೇತುದಾರ ಆನೆಯ ಸೊಂಡಿಲನ್ನು ಅಪ್ಪಿಕೊಳ್ಳುವುದು ವಿಡಿಯೋದಲ್ಲಿ ದಾಖಲಾಗಿದೆ. ಪ್ರಾಣಿಗಳನ್ನು ನಾವು ಪ್ರೀತಿಯಿಂದ ನೋಡಿಕೊಂಡರೆ ಅವು ಯಾವಾಗಲೂ ತಮ್ಮ ಪ್ರೀತಿಯನ್ನು ನಮಗೆ ಧಾರೆ ಎರೆಯುತ್ತವೆ ಎಂಬುದನ್ನು ವಿಡಿಯೋ ಸಾಬೀತು ಪಡಿಸಿತು.

2016: ಮುಂಬೈ: ಸಾಮಾಜಿಕ ಹೋರಾಟಗಾರರ ಅಣ್ಣಾ ಹಜಾರೆ ಅವರನ್ನು ಬಹುಭಾಷಾ ಗಾಯಕ ಅಭಿಜಿತ್ ಭಟ್ಟಾಚಾರ್ಯ ಡೋಂಗಿಬಾಬಾ ಎಂದು ಕರೆಯುವ ಮೂಲಕ ಹೊಸ ವಿವಾದ ಸೃಷ್ಟಿಸಿದರು. 130 ನಿಮಿಷದಅಣ್ಣಾ: ಕಿಷನ್ ಬಾಬುರಾವ್ ಹಜಾರೆಜೀವನಾಧಾರಿತ ಚಿತ್ರ ವೀಕ್ಷಿಸಿದ ಅಭಿಜಿತ್ ಟ್ವೀಟ್ ಮಾಡಿದರು.. ‘ಡೋಂಗಿ ಬಾಬಾ ಅಣ್ಣಾ ಬಿಡುಗಡೆ ಆಯಿತು. ಈವಾರ ತೆರೆಕಂಡ ಏಕಮೇವ ಚಿತ್ರ ಇದಾಗಿದ್ದು, ಕೇಜ್ರಿವಾಲ್ ಸಹ ವೀಕ್ಷಿಸಲು ಹೋಗಿಲ್ಲಎಂದು ವ್ಯಂಗ್ಯ ಮಾಡಿದರು. ಅಭಿಜಿತ್ ಅವರ ಟ್ವೀಟ್ಗೆ  ವ್ಯಾಪಕ ಟೀಕೆ ವ್ಯಕ್ತವಾಯಿತು. ಕಳೆದ ಒಂದು ವರ್ಷದಿಂದ ಚಿತ್ರವನ್ನು ಚಿತ್ರೀಕರಣ ಮಾಡಲಾಗಿತ್ತು. ಅಣ್ಣಾ ಅವರ ಹುಟ್ಟೂರಾದ ರಾಳೇಗಣ ಸಿದ್ಧಿ, ಅಹಮ್ಮದ್ ನಗರ, ಮುಂಬೈ, ಮಹಾರಾಷ್ಟ್ರ, ಕಾಶ್ಮೀರ, ರಾಜಸ್ಥಾನ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆದಿತ್ತು.

2016: ಪಟನಾ: ಸೀಮಿತ ದಾಳಿಗೆ ಸಂಬಂಧಿಸಿದಂತೆ ಇತರ ವಿರೋಧ ಪಕ್ಷಗಳ ನಾಯಕರಿಗಿಂತ ಭಿನ್ನ ಹಾದಿ ಹಿಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರುಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ಪ್ರತಿಯೊಂದು ಕ್ರಮಕ್ಕೂ ಪೂರ್ಣ ಬೆಂಬಲನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದರು.  ಆದರೆ ಕಳೆದ ತಿಂಗಳು ನಡೆಸಲಾದ ಸೀಮಿತ ದಾಳಿಗಳಿಗೆ ರಾಜಕೀಯ ಅವಕಾಶ ವಾದದಿಂದ ಮುಕ್ತಗೊಳಿಸಿ ಎಂದು ಸಲಹೆ ಮಾಡಿದರು. ‘ಪಾಕಿಸ್ತಾನದ ವಿರುದ್ಧ ಏನು ಕ್ರಮದ ಅಗತ್ಯವಿದೆಯೋ ಅದನ್ನು ತೆಗೆದುಕೊಳ್ಳಿ. (ಇಸ್ಲಾಮಾಬಾದ್ಗೆ) ಪ್ರೇಮಪತ್ರಗಳನ್ನು ಬರೆಯುವುದನ್ನು ನಿಲ್ಲಿಸಿ. ಇಡೀ ರಾಷ್ಟ್ರ ನಿಮ್ಮ ಹಿಂದಿದೆ.’ ಎಂದು ಬಿಹಾರ ಮುಖ್ಯಮಂತ್ರಿ ಪಟನಾದಿಂದ 120 ಕಿಮೀ ದೂರದಲ್ಲಿರುವ ರಾಜ್ಗೀರ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರುಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯನ್ನಾಗಿ ಮಾಡಲು ಯತ್ನಿಸುತ್ತಿರುವ ಮೋದಿಯವರು ಪಾಕಿಸ್ತಾನದ ವಿಚಾರದಲ್ಲಿ ಇನ್ನಷ್ಟು ಕಠಿಣರಾಗಬೇಕು ಎಂದು ಹೇಳಿದ ನಿತೀಶ್, ‘ದಯವಿಟ್ಟು ನೀವು ಪ್ರಧಾನಿಯಾಗಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ ಮತ್ತು ರಾಷ್ಟ್ರದ ನಾಯಕನಂತೆ ವರ್ತಿಸಿ, ಕೇವಲ ಬಿಜೆಪಿ ನಾಯಕನಂತೆ ಅಲ್ಲಎಂದೂ ಪ್ರಧಾನಿಗೆ ಸಲಹೆ ಮಾಡಿದರು. ಪಾಕಿಸ್ತಾನದ ವಿರುದ್ಧದ ಇತ್ತೀಚಿನ ಕ್ರಮವನ್ನು ಸೇನೆಗಿಂತ ಹೆಚ್ಚಾಗಿ ಪ್ರಧಾನಿ ಮೋದಿಯವರ ಧೈರ್ಯ ಎಂಬುದಾಗಿ ಶ್ಲಾಘಿಸಿ ಪೋಸ್ಟರ್ಗಳು ಪ್ರತ್ಯಕ್ಷವಾಗಿದ್ದ ಹಿನ್ನೆಲೆಯಲ್ಲಿ ನಿತೀಶ್ ಸಲಹೆ ನೀಡಿದರು.

2016: ಪಣಜಿ: ಪಾಕಿಸ್ತಾನ ತನ್ನ ನೀತಿಗಳಿಂದಾಗಿ ಏಕಾಂಗಿಯಾಗುವ ಭೀತಿ ಎದುರಿಸುತ್ತಿದೆ, ಇದರಲ್ಲಿ ಭಾರತದ ಪಾತ್ರವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದರು. ಸಾರ್ಕ್ ಶೃಂಗ ಸಭೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಸಾರ್ಕ್ ರಾಷ್ಟ್ರಗಳು ತೆಗೆದುಕೊಂಡಿವೆ. ಭಾರತ ರಾಷ್ಟ್ರಗಳ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಭಯೋತ್ಪಾದನೆ ತೀವ್ರವಾಗಿರುವ ವಾತಾವರಣದಲ್ಲಿ ಕುಳಿತು, ಸಾರ್ಕ್ ಶೃಂಗ ಸಭೆಯಲ್ಲಿ ರಚನಾತ್ಮಕ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಭಾರತ ತನ್ನ ನಿಲುವನ್ನು ಪ್ರಕಟಿಸಿತ್ತು. ಸಾರ್ಕ್ ಶೃಂಗಸಭೆ ಬಹಿಷ್ಕರಿಸುವ ಸಂಬಂಧ ಮೊದಲ ಪತ್ರವನ್ನು ಆಫ್ಘಾನಿಸ್ತಾನ ಬರೆದಿತ್ತು, ನಂತರ ನೇಪಾಳ ತಿಳಿಸಿತ್ತು. ಭಾರತ, ಭೂತಾನ್ ಮತ್ತು ಶ್ರೀಲಂಕಾ ನಂತರ ಶೃಂಗ ಸಭೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದವು. ಸಾರ್ಕ್ ಎಲ್ಲಾ ದೇಶಗಳೂ ಒಕ್ಕೊರಲಿನಿಂದ ಭಯೋತ್ಪಾದನೆಗೆ ವಿರೋಧ ವ್ಯಕ್ತಪಡಿಸಿವೆ ಎಂದು ವಿಕಾಸ್ ಸ್ವರೂಪ್ ತಿಳಿಸಿದರು. ಸೆಪ್ಟೆಂಬರ್ 18 ರಂದು ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿದ್ದರು. ನಂತರ ಭಾರತ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿತ್ತು ಮತ್ತು ವಿಶ್ವಮಟ್ಟದಲ್ಲಿ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಲು ಒತ್ತಡ ಹೇರುತ್ತಿದೆ.

2016: ನವದೆಹಲಿ: ಅಕ್ರಮವಾಗಿ ಕಚೇರಿ ನಿರ್ವಿುಸಿದ ಆರೋಪ ಎದುರಿಸುತ್ತಿರುವ ಹಾಸ್ಯ ನಟ ಕಪಿಲ್ ಶರ್ಮಾ ಮುಂಬೈ ಮಹಾನಗರ ಪಾಲಿಕೆಯ ನೋಟಿಸ್ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದರು. ವಸೋವಾದಲ್ಲಿರುವ ಕಪಿಲ್ ಕಟ್ಟಡ ಅಕ್ರಮವಾಗಿದೆ. ಆದ್ದರಿಂದ ಕೆಲವು ಭಾಗಗಳನ್ನು ಏಕೆ ಕೆಡವಿಹಾಕಬಾರದು ಎಂದು ಮುಂಬೈ ಮಹಾನಗರ ಪಾಲಿಕೆ ನೋಟಿಸ್ ಕಳುಹಿಸಿತ್ತು. ನೋಟಿಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಟ ಬಾಂಬೆ ಹೈಕೋರ್ಟ್ ಮೊರೆಹೋದರು. ಕಳೆದ ಸೆಪ್ಟೆಂಬರ್ನಲ್ಲಿ ವಿಚಾರವಾಗಿ ಕಪಿಲ್ ಪ್ರಧಾನಿ ನರೆಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿದ್ದರುನಾನು ಕಳೆದ ಐದು ವರ್ಷಗಳಿಂದ 15 ಕೋಟಿ ರೂ. ತೆರಿಗೆ ಪಾವತಿಸಿದ್ದೇನೆ. ಆದರೂ ಅಧಿಕಾರಿಗಳಿಗೆ ಐದು ಲಕ್ಷ ರೂ. ಲಂಚ ನೀಡಬೇಕಾಗಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಅಧಿಕಾರಿಗಳ ಹೆಸರನ್ನು ಭಹಿರಂಗಪಡಿಸುವಂತೆ ತಿಳಿಸಿದ್ದರು.

2016: ಡೆಹ್ರಾಡೂನ್: 2013 ಜೂನ್ನಲ್ಲಿ ಮೇಘಸ್ಪೋಟದಿಂದಾಗಿ ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಳಿ 31 ಅಸ್ಥಿಪಂಜರಗಳು ಪತ್ತೆಯಾದವು. ಅಸ್ಥಿಪಂಜರಗಳು ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರದ್ದು ಎಂದು ಶಂಕಿಸಲಾಯಿತು. ಕೇದಾರನಾಥದ ತಿರುಯೋಗಿನಾರಾಯಣದ ಬಳಿ 31 ಅಸ್ಥಿ ಪಂಜರಗಳು ಸಿಕ್ಕಿರುವುದನ್ನು ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಧೃಡಪಡಿಸಿದರು.  ಜತೆಗೆ ಈಗಾಗಲೇ 23 ಅಸ್ಥಿಪಂಜರಗಳಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ. ಅಸ್ಥಿಪಂಜರಗಳ ಡಿಎನ್ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಮೃತರಾದವರ ಕುಟುಂಬಸ್ಥರ ಡಿಎನ್ ಜತೆಗೆ ತಾಳೆ ನೋಡಿ ಅಸ್ಥಿಪಂಜರಗಳ ಗುರುತು ಪತ್ತೆ ಮಾಡಲಾಗುವುದು ಎಂದು ತಿಳಿಸಿದರು. ಪ್ರವಾಹದಲ್ಲಿ ಕೊಚ್ಚಿ ಹೋದ ಯಾತ್ರಾರ್ಥಿಗಳ ಶವ ಮಣ್ಣಿನಡಿ ಹೂತು ಹೋಗಿರುವ ಸಾಧ್ಯತೆ ಇದೆ. ಉಳಿದ 8 ಅಸ್ಥಿಪಂಜರಗಳನ್ನು ಮಂಗಳವಾರ ಅಂತ್ಯಸಂಸ್ಕಾರ ನೆರೆವೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಈ ಪ್ರದೇಶದಲ್ಲಿ ಮತ್ತಷ್ಟು ಜನರ ಅಸ್ಥಿ ಪಂಜರಗಳು ದೊರೆಯಬಹುದಾದ ಸಾಧ್ಯತೆಗಳಿರುವುದರಿಂದ ಶೋಧ ಕಾರ್ಯ ಮುಂದುವರೆಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದರು. 2013ರಲ್ಲಿ ಉತ್ತರಾಖಂಡದಲ್ಲಿ ಮೇಘ ಸ್ಪೋಟದಿಂದಾಗಿ ಭೀಕರ ಪ್ರವಾಹ ಉಂಟಾಗಿತ್ತು. ಪ್ರವಾಹಕ್ಕೆ ಸಿಲುಕಿ ಸುಮಾರು 5000 ಕ್ಕೂ ಹೆಚ್ಚು ಜನರು ಮೃತರಾಗಿದ್ದರು ಮತ್ತು ನೂರಾರು ಜನರು ಕಾಣೆಯಾಗಿದ್ದರು.

2016: ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನವನ್ನುಭಯೋತ್ಪಾದನೆಯ ಮಾತೃನೌಕೆಎಂಬುದಾಗಿ ಕರೆದ ಒಂದು ದಿನ ಬಳಿಕ ಚೀನಾವು ತನ್ನ ಸರ್ವ ಋತು ಮಿತ್ರ ಪಾಕಿಸ್ತಾನವನ್ನು ಪ್ರಬಲವಾಗಿ ಪ್ರತಿಪಾದಿಸಿ, ಯಾವುದೇ ರಾಷ್ಟ್ರ ಅಥವಾ ಧರ್ಮದ ಜೊತೆಗೆ ಭಯೋತ್ಪಾದನೆಯನ್ನು ತಳಕು ಹಾಕುವುದಕ್ಕೆ ತನ್ನ ವಿರೋಧವಿದೆ ಎಂದು ಹೇಳಿತು. ಪಾಕಿಸ್ತಾನದಮಹಾನ್ ಬಲಿದಾನಗಳನ್ನು ಗುರುತಿಸಿ ಎಂದು ಅದು ವಿಶ್ವ ಸಮುದಾಯವನ್ನು ಆಗ್ರಹಿಸಿತುಗೋವಾ ಬ್ರಿಕ್ಸ್ ಶೃಂಗ ಸಮ್ಮೇಳನದಲ್ಲಿ ಪಾಕಿಸ್ತಾನವನ್ನು ಮೋದಿಯವರು ಚಿತ್ರಿಸಿದ ರೀತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್ಯಿಂಗ್ ಅವರುಯಾವುದೇ ರಾಷ್ಟ್ರವನ್ನು ಅಥವಾ ಧರ್ಮವನ್ನು ಭಯೋತ್ಪಾದನೆ ಜೊತೆಗೆ ತಳಕು ಹಾಕುವುದಕ್ಕೆ ಚೀನಾದ ವಿರೋಧವಿದೆಎಂದು ಹೇಳಿದರು. ಭಾರತಕ್ಕೆ ವಿರುದ್ಧವಾದ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನವು ನೆರವು ಹಾಗೂ ಕುಮ್ಮಕ್ಕು ನೀಡುತ್ತಿರುವುದಾಗಿ ಮೋದಿ ಅವರು ಟೀಕಿಸಿರುವ ಬಗೆಗಿನ ಪ್ರಶ್ನೆಗೆಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಚೀನಾ ನಿರಂತರವಾಗಿ ಒಂದೇ ಧೋರಣೆಯನ್ನು ತಾಳಿದೆ. ಎಲ್ಲಾ ವಿಧದ ಭಯೋತ್ಪಾದನೆಯನ್ನೂ ನಾವು ವಿರೋಧಿಸುತ್ತೇವೆ. ಎಲ್ಲ ರಾಷ್ಟ್ರಗಳಿಗೂ ಸ್ಥಿರತೆ ಮತ್ತು ಭದ್ರತೆಯ ಖಾತರಿ ನೀಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯತ್ನಗಳು ನಡೆಯಬೇಕು ಎಂದು ನುಡಿದರು. ‘ಇದೇ ವೇಳೆಗೆ ಯಾವುದೇ ನಿರ್ದಿಷ್ಟ ರಾಷ್ಟ್ರ ಅಥವಾ ಧರ್ಮವನ್ನು ಭಯೋತ್ಪಾದನೆ ಜೊತೆಗೆ ತಳಕು ಹಾಕುವುದನ್ನು ನಾವು ವಿರೋಧಿಸುತ್ತೇವೆಎಂದು ಅವರು ಅದೇ ಉಸಿರಿನಲ್ಲಿ ಹೇಳಿದರು.

2016: ಪಟನಾ: ದೇಶದ ರೈಲ್ವೇ ನಿಲ್ದಾಣಗಳಲ್ಲಿ ಒದಗಿಸಲಾಗಿರುವ ಉಚಿತ ವೈ ಫೈ ಸವಲತ್ತನ್ನು ಬಳಸಿ ಅಂತರ್ಜಾಲವನ್ನು ಜಾಲಾಡುವುದರಲ್ಲಿ ಪಟನಾ ರೈಲು ನಿಲ್ದಾಣ ಮೊದಲ ಸ್ಥಾನವನ್ನು ಗಳಿಸಿತು.  ಅಂತರ್ಜಾಲದಲ್ಲಿ ಜಾಲಾಡುವುದು ಏನನ್ನು ಎಂದು ಮಾತ್ರ ಕೇಳಬೇಡಿ. ಏಕೆಂದರೆ ಬಹುತೇಕ ಮಂದಿ ಪಟನಾದಲ್ಲಿ ವೈಫೈ ಬಳಸಿ ಜಾಲಾಡುವುದು ಅಶ್ಲೀಲ ಜಾಲತಾಣಗಳಿಗಾಗಿ!   ರೈಲ್ವೇ ಅಧಿಕಾರಿಯೊಬ್ಬರು ವಿಚಾರವನ್ನುಈದಿನ  ಬಹಿರಂಗ ಪಡಿಸಿದರು.ಉಚಿತ ವೈಫೈ ಸವಲತ್ತು ಕಲ್ಪಿಸಲಾಗಿರುವ ರಾಷ್ಟ್ರದ ಬೇರೆ ಯಾವುದೇ ರೈಲ್ವೆ ನಿಲ್ದಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಟನಾದಲ್ಲಿ ವೈ ಫೈ ಸವಲತ್ತು ಬಳಸಿ ಜನ ಅಂತರ್ಜಾಲವನ್ನು ಜಾಲಾಡುತ್ತಾರೆ. ಪಟನಾ ವಿಷಯದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಆದರೆ ಇಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾಲ ಜಾಲಾಟ ನಡೆಯುವುದು ಅಶ್ಲೀಲ ಜಾಲತಾಣಗಳಿಗಾಗಿಎಂದು ರೈಲ್ ಟೆಲ್ ಅಧಿಕಾರಿ ತಿಳಿಸಿದರು. ರೈಲ್ವೇ ನಿಲ್ದಾಣಗಳಲ್ಲಿ ಒದಗಿಸಲಾಗಿರುವ ಉಚಿತ ವೈಫೈ ಬಳಸಿ ಅಂತರ್ಜಾಲ ಜಾಲಾಡುವಿಕೆಯಲ್ಲಿ ಎರಡನೇ ಸ್ಥಾನದಲ್ಲಿ ಜಬಲ್ಪುರ ರೈಲ್ವೇ ನಿಲ್ದಾಣವಿದ್ದು, ಬೆಂಗಳೂರು ಮತ್ತು ನವದೆಹಲಿ ರೈಲು ನಿಲ್ದಾಣ ಮೂರನೇ ಸ್ಥಾನದಲ್ಲಿವೆ. ಪಟನಾ ರೈಲು ನಿಲ್ದಾಣ ವೈಫೈ ಸವಲತ್ತು ಪಡೆದ ದೇಶದ ಮೊತ್ತ ಮೊದಲ ರೈಲು ನಿಲ್ದಾಣ. ರೈಲು ನಿಲ್ದಾಣಗಳಲ್ಲಿ ಆಪ್ಗಳು ಮತ್ತು ಬಾಲಿವುಡ್ ಚಿತ್ರಗಳನ್ನು ಡೌನ್ಲೋಡ್ ಮಾಡಲೂ ಜನ ಉಚಿತ ವೈಫೈಯನ್ನು ಬಳಸುತ್ತಾರೆ ಎಂದು ಅಧಿಕಾರಿ ಹೇಳುತ್ತಾರೆ. ಬಳಕೆದಾರರು ಬಳಸುವ ಮಾಹಿತಿಯ ದಾಖಲೆಗಳಿಂದ ಅಂತರ್ಜಾಲ ಜಾಲಿಗರ ಮಾಹಿತಿ ಗೊತ್ತಾಗಿದೆ ಎನ್ನುತ್ತಾರೆ ಅಧಿಕಾರಿ.


2016: ಬೆಂಗಳೂರು: ಸಚಿವ ಸ್ಥಾನ ಕಳೆದುಕೊಂಡು ತೀವ್ರ ಅಸಮಾಧಾನದಿಂದ ಕಾಂಗ್ರೆಸ್ ರೆಬೆಲ್ ನಾಯಕರಾಗಿ ಗುಡುಗಿದ್ದ ನಂಜನಗೂಡು ಶಾಸಕ ವಿ.ಶ್ರೀನಿವಾಸ್ ಪ್ರಸಾದ್ ಬೆಳಗ್ಗೆ ಸ್ಪೀಕರ್ ಕೆ.ಬಿ.ಕೋಳಿವಾಡ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಇದೇ ವೇಳೆ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವುದಾಗಿ ತಿಳಿಸಿದರು. ಸಂಪುಟ ಪುನಾರಚನೆ ವೇಳೆ ಸಿಎಂ ಸಿದ್ದರಾಮಯ್ಯನವರು ಶ್ರೀನಿವಾಸ್ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದ್ದರು. ಪರಿಣಾಮ ಶ್ರೀನಿವಾಸ್ ಪ್ರಸಾದ್ ಕೆಂಡಾಮಂಡಲರಾಗಿದ್ದರು. ಇಷ್ಟುದಿನ ಸಿದ್ದರಾಮಯ್ಯ ಅವರ ಮೇಲೆ ಗರಂ ಆಗಿದ್ದ ಅವರು ಕಡೆಗು ಕಾಂಗ್ರೆಸ್ ವಿದಾಯ ಹೇಳಿದರು.

2014: ಜಮ್ಮು : ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲೆಗಳ ಮೇಲೆ ಪಾಕಿಸ್ತಾನಿ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸ್ವಯಂಚಾಲಿತ ಆಯುಧಗಳಿಂದ ಗುಂಡು ಹಾರಿಸುವ ಮೂಲಕ ಈದಿನ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಿದವು. ಬೆಳಗ್ಗೆ 9.55ರಿಂದ ಪೂಂಚ್ ಜಿಲ್ಲೆಯ ಹಮೀರಪುರದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲೆಗಳ ಮೇಲೆ ಪಾಕಿಸ್ತಾನಿ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಸ್ವಯಂಚಾಲಿತ ಆಯುಧಗಳಿಂದ ದಾಳಿ ನಡೆಸುವ ಮೂಲಕ ಎರಡು ಬಾರಿ ಕದನವಿರಾಮ ಉಲ್ಲಂಘಿಸಿದವು ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದರು. ಗಡಿ ಕಾಯುತ್ತಿದ್ದ ಭಾರತೀಯ ಪಡೆಗಳು ಪಾಕಿಸ್ತಾನಿ ಪಡೆಗಳಿಗೆ ಸೂಕ್ತ ಉತ್ತರ ನೀಡಿದವು. ಘರ್ಷಣೆಯಲ್ಲಿ ಸಾವು ನೋವು ಸಂಭವಿಸಿದ ಬಗ್ಗೆ ವರದಿ ಬಂದಿಲ್ಲ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಹಿಂದಿನ ರಾತ್ರಿ 9ರಿಂದ 10.45ರ ನಡುವಣ ಅವಧಿಯಲ್ಲಿ ಪೂಂಚ್ ಜಿಲ್ಲೆಯ ಹಮೀರಪುರ ವಿಭಾಗದಲ್ಲಿ ಭಾರತದ ನೆಲೆಗಳ ಮೇಲೆ ಪಾಕ್ ಪಡೆಗಳು ಗುಂಡು ಹಾರಿಸಿದ್ದವು. ಇದಕ್ಕೂ ಭಾರತೀಯ ಪಡೆಗಳು ಸೂಕ್ತ ಉತ್ತರ ನೀಡಿದ್ದವು. ಅಕ್ಟೋಬರ್ 15ರಂದು ಪೂಂಚ್ ಜಿಲ್ಲೆಯ ಸೌಜಿಯಾನ್-ರ್ಕಿನಿ-ಶಾಹಪುರದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕುಯಿಯಾನ್ ಗೋಟ್ರಿಯನ್ ಗ್ರಾಮದ 7 ವರ್ಷದ ಬಾಲಕ ರಿಯಾಜ್ ಗಾಯಗೊಂಡಿದ್ದ. ಇದಕ್ಕೂ ಮೊದಲು ಅಕ್ಟೋಬರ್ ತಿಂಗಳಿನಿಂದೀಚೆಗೆ ನಡೆದ ಪಾಕಿಸ್ತಾನಿ ಗುಂಡಿನ ದಾಳಿಯಲ್ಲಿ 8 ಮಂದಿ ಮೃತರಾಗಿ, ಭದ್ರತಾ ಸಿಬ್ಬಂದಿ ಸೇರಿ 95 ಮಂದಿ ಗಾಯಗೊಂಡಿದ್ದರು. ಸಹಸ್ರಾರು ಗ್ರಾಮಸ್ಥರು ಮನೆಮಾರು ತೊರೆದು ಗುಳೇ ಹೋಗಿದ್ದರು.

2014: ವಾಷಿಂಗ್ಟನ್: ಆಪಲ್ ಸಂಸ್ಥೆಯು ವಿಶ್ವದಲ್ಲೇ ಅತ್ಯಂತ 'ತಳುವಾದ' ಟ್ಯಾಬ್ಲೆಟ್ ಎನ್ನಲಾದ ನೂತನ 'ಐಪಾಡ್ ಏರ್ 2' ಬಿಡುಗಡೆ ಮಾಡಿತು. ಇದರ ಜೊತೆಗೆ ಹೊಸ ಐಪಾಡ್ ಮಿನಿ 3 ಟ್ಯಾಬ್ಲೆಟ್ ಹಾಗೂ ನೂತನ ಮ್ಯಾಕ್ ಆಪರೇಟಿಂಗ್ ಸಿಸ್ಟಂನ್ನೂ ಅನಾವರಣ ಮಾಡಿತು. ಹೊಸ ಗ್ಯಾಡ್ಜೆಟ್​ಗಳನ್ನು (ಉಪಕರಣ) ಬಿಡುಗಡೆ ಮಾಡಿದ ಆಪಲ್ ಸಿಇಒ ಟಿಮ್​ಕುಕ್ ಅವರು 'ಹೊಸ ಐಫೋನ್​ಗಳು ಕಂಪೆನಿಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ವೇಗವಾಗಿ ಮಾರಾಟವಾಗುತ್ತಿರುವ ಉತ್ಪನ್ನಗಳು' ಎಂದು ಹೇಳಿದರು. ಟ್ಯಾಬ್ಲೆಟ್​ನಲ್ಲಿ ಇದೇ ಮೊದಲ ಬಾರಿಗೆ ಪ್ರತಿಫಲನ ನಿರೋಧಿ ಲೇಪ ಇರುವುದರ ಜೊತೆಗೆ 8 ಮೆಗಾಪಿಕ್ಸೆಲ್ ಐಸೈಟ್ ಕ್ಯಾಮರಾ ಮತ್ತು 3 ಶತಕೋಟಿ ಟ್ರಾನ್ಸಿಸ್ಟರ್​ಗಳನ್ನು ಹೊಂದಿರುವ ಹೊಸ ತಲೆಮಾರಿನ ಎ8ಎಕ್ಸ್ ಚಿಪ್​ನ್ನು ಐಪಾಡ್ ಏರ್2 ಹೊಂದಿದೆ. ಸ್ವಲ್ಪ ಪರಿಷ್ಕರಣೆಯೊಂದಿಗೆ ಬಂದಿರುವ ಐಪಾಡ್ ಮಿನಿ 3 ಟ್ಯಾಬ್ಲೆಟ್ ಬಿಳಿ, ಕಂದು ಮತ್ತು ಚಿನ್ನದ ಬಣ್ಣಗಳಲ್ಲಿ ಲಭಿಸುತ್ತದೆ. ಮಿನಿ ಮತ್ತು ಏರ್ ಎರಡೂ ಟ್ಯಾಬ್ಲೆಟ್​ಗಳು ಭದ್ರತೆ ಸಲುವಾಗಿ ಟಚ್ ಐಡಿ ಫಿಂಗರ್​ಪ್ರಿಂಟ್ ಸೆನ್ಸರ್ ಹೊಂದಿರುತ್ತವೆ. ಹೊಸ ಐಪಾಡ್ ಏರ್2ರ ಬೆಲೆ 499 ಡಾಲರ್​ಗಳಾಗಿದ್ದರೆ ಐಪಾಡ್ ಮಿನಿ 3 ಟ್ಯಾಬ್ಲೆಟ್ 399 ಡಾಲರ್​ಗಳ ದರದೊಂದಿಗೆ ಆರಂಭವಾಗುತ್ತವೆ ಎಂದು ಆಪಲ್ ತಿಳಿಸಿತು.

2014: ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸೆರೆವಾಸದ ಶಿಕ್ಷೆಗೆ ಒಳಗಾಗಿದ್ದ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಅವರ ನಿಕಟವರ್ತಿ ಶಶಿಕಲಾ, ಬಂಧುಗಳಾದ ವಿ.ಎನ್. ಸುಧಾಕರನ್ ಹಾಗೂ ಇಳವರಸಿ ಅವರಿಗೆ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಶರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಎರಡು ತಿಂಗಳುಗಳ ಒಳಗಾಗಿ ಹೈಕೋರ್ಟಿಗೆ ಮೇಲ್ಮನವಿ (ಅಪೀಲ್ ಪೇಪರ್ ಬುಕ್) ಸಲ್ಲಿಸಬೇಕು ಎಂದು ಖಡಕ್ ನಿರ್ದೇಶನವನ್ನೂ ನೀಡಿತು. ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವಲ್ಲಿ ಒಂದು ದಿನ ವಿಳಂಬವಾದರೂ ಸಹಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ದತ್ತು ಎಚ್ಚರಿಸಿದರು. ಜಯಲಲಿತಾ ಅವರ ಸೂಚನೆ ಮೇರೆಗೆ ಪಕ್ಷ ಕಾರ್ಯಕರ್ತರು ಕಾನೂನು ಸುವ್ಯವಸ್ಥೆ ಉಂಟು ಮಾಡುವುದಕ್ಕೆ ಗಂಭೀರ ಆಕ್ಷೇಪ ವ್ಯಕ್ತ ಪಡಿಸಿದ ನ್ಯಾಯಾಲಯ, ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸದಂತೆ ಕಾರ್ಯಕರ್ತರಿಗೆ ನಿದೇಶನ ನೀಡುವಂತೆ ಜಯಲಲಿತಾ ಅವರಿಗೆ ಆಜ್ಞಾಪಿಸಿತು. 2-3 ತಿಂಗಳ ಕಾಲ ಗೃಹಬಂಧನದಲ್ಲಿ ಇರಲು ಕೂಡಾ ತಾವು ಸಿದ್ಧ ಎಂದು ಜಾಮೀನು ಕೋರಿಕೆ ಸಮಯದಲ್ಲಿ ಜಯಲಲಿತಾ ಸುಪ್ರೀಂಕೋರ್ಟಿಗೆ ತಿಳಿಸಿದರು. ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬ ಮಾಡುವುದಿಲ್ಲ. ಈ ವಿಚಾರಕ್ಕಾಗಿ ನ್ಯಾಯಾಲಯದ ಕಲಾಪ ಮುಂದೂಡಿಕೆ ಕೇಳುವುದಿಲ್ಲ ಎಂಬುದಾಗಿ ಸ್ಪಷ್ಟವಾಗಿ ವಚನ ನೀಡುವಂತೆ ಸೂಚಿಸಿದ ನ್ಯಾಯಾಲಯ, ಜಯಲಿತಾ ಪರ ವಕೀಲ ನಾರಿಮನ್ ಅವರು ಈ ಬಗ್ಗೆ ಸ್ಪಷ್ಟವಾಗಿ ಬರೆದುಕೊಡುವುದಾಗಿ ತಿಳಿಸಿದ ಬಳಿಕ ಜಾಮೀನು ಮಂಜೂರು ಮಾಡಿತು. ಮೇಲ್ಮನವಿಯನ್ನು ಮೂರು ತಿಂಗಳುಗಳ ಒಳಗಾಗಿ ಇತ್ಯರ್ಥ ಪಡಿಸುವಂತೆ ಹೈಕೋರ್ಟ್​ಗೆ ಸೂಚಿಸುವುದಾಗಿಯೂ ಈ ಸಂದರ್ಭದಲ್ಲಿ ಪೀಠವು ತಿಳಿಸಿತು. 1991-96ರಲ್ಲಿ ಜಯಲಲಿತಾ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 66.65 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 27ರಂದು ಜಯಲಲಿತಾ ಮತ್ತು ಇತರ ಮೂವರು ಅಪರಾಧಿಗಳು ಎಂದು ಘೋಷಿಸಿ ಜಯಲಲಿತಾ ಅವರಿಗೆ 4 ವರ್ಷಗಳ ಸೆರೆವಾಸ ಮತ್ತು 100 ಕೋಟಿ ರೂಪಾಯಿಗಳ ದಂಡ ವಿಧಿಸಿತ್ತು. ಶಿಕ್ಷೆಯ ಅಮಾನತು ಹಾಗೂ ಜಾಮೀನು ಕೋರಿ ಜಯಲಲಿತಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬಳಿಕ ಜಯಲಲಿತಾ ಮತ್ತು ಇತರರು ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.

2014: ಬಾಲಸೋರ್: ಅಂದಾಜು 700 ಕಿ.ಮೀ.ಗೂ ಹೆಚ್ಚು ದೂರದ ಗುರಿಯತ್ತ ಅಣ್ವಸ್ತ್ರ ಸಾಗಣೆ ಸಾಮರ್ಥ್ಯ ಉಳ್ಳ ದೇಶೀ ನಿರ್ಮಿತ 'ನಿರ್ಭಯ' ದೂರಗಾಮೀ ನಿರ್ದೇಶಿತ ಕ್ಷಿಪಣಿಯ ಪರೀಕ್ಷಾ ಹಾರಾಟವನ್ನು ಭಾರತವು ಒಡಿಶಾದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿತು. ಬೆಳಗ್ಗೆ 10.04 ಗಂಟೆಗೆ ಕ್ಷಿಪಣಿಯನ್ನು ಉಡಾಯಿಸಲಾಯತು. 800 ಮೀಟರ್ ಎತ್ತರಕ್ಕೆ ತಲುಪಿದ ಬಳಿಕ ಅದು ಬಂಗಾಳಕೊಲ್ಲಿಯ ಕಡೆಗೆ ತಿರುಗಿ ಸಾಗಿ ತನ್ನ ಗುರಿ ತಲುಪಿತು. ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್​ಡಿಓ) ಮೂಲಗಳು ತಿಳಿಸಿದವು. ಅಣ್ವಸ್ತ್ರ ಸಾಗಣೆ ಸಾಮರ್ಥ್ಯದ ನಿರ್ಭಯ ಕ್ಷಿಪಣಿಯ ಅಭಿವೃದ್ಧಿ ಪರೀಕ್ಷೆ ನಡೆಸಿದ್ದು ಇದು ಎರಡನೇ ಬಾರಿ. 2013ರ ಮಾರ್ಚ್ 12ರಂದು ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ಇದೇ ಸ್ಥಳದಲ್ಲಿ ನಡೆಸಲಾಗಿತ್ತು. ಆದರೆ ಉದ್ದೇಶಿತ ಗುರಿಯತ್ತ ಸಾಗದ ಕಾರಣ ಹಾರಾಟವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಲಾಗಿತ್ತು.

2014:  ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು, ಬೆಳಗಾವಿ ಸೇರಿದಂತೆ 12 ನಗರಗಳ ಮರು ನಾಮಕರಣಕ್ಕೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ಸೂಚಿಸಿ ಅಧಿಕೃತ ಆದೇಶ ಹೊರಡಿಸಿತು. ರಾಜ್ಯದ 12 ನಗರಗಳ ಆಂಗ್ಲ ಹೆಸರನ್ನು ತೆಗೆದು ಹೊಸದಾಗಿ ಮರು ನಾಮಕರಣ ಮಾಡುವಂತೆ ಕೋರಿ 2009ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2013ರಲ್ಲಿ ಈ ಸಂಬಂಧ ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಮರು ನಾಮಕರಣಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿರಲಿಲ್ಲ. ಮತ್ತೊಮ್ಮೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಗೃಹ ಇಲಾಖೆ ಪರಿಗಣಿಸಿ ಮರು ನಾಮಕರಣಕ್ಕೆ ಒಪ್ಪಿಗೆ ಸೂಚಿಸಿ ಈದಿನ ಅಧಿಕೃತ ಆದೇಶ ಹೊರಡಿಸಿತು. ಹೆಸರು ಬದಲಾವಣೆ... ಬ್ಯಾಂಗ್ಳೂರ್ - ಬೆಂಗಳೂರು ಮ್ಯಾಂಗ್ಳೂರ್ - ಮಂಗಳೂರು ಬೆಳ್ಳಾರಿ -ಬಳ್ಳಾರಿ ಬಿಜಾಪುರ್ - ವಿಜಯಪುರ ಅಥವಾ ವಿಜಾಪುರ ಬೆಳಗಾಂ -ಬೆಳಗಾವಿ ಚಿಕ್​ವುಗ್ಳೂರ್- ಚಿಕ್ಕಮಗಳೂರು ಗುಲ್ಬರ್ಗ-ಕಲ್ಬುರ್ಗಿ ಮೈಸೂರ್ -ಮೈಸೂರು ಹೊಸ್ಪೇಟ್-ಹೊಸಪೇಟೆ ಶಿಮೊಗ್ಗ - ಶಿವಮೊಗ್ಗ ಹುಬ್ಳಿ -ಹುಬ್ಬಳ್ಳಿ ತುಮ್ಕೂರ್ - ತುಮಕೂರು  ರಾಜ್ಯದ ವಿವಿಧ ನಗರಗಳ ಆಂಗ್ಲಭಾಷೆಯಲ್ಲಿದ್ದ ಲೋಪದ ತಿದ್ದುಪಡಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡುವುದರೊಂದಿಗೆ ಹತ್ತಕ್ಕೂ ಹೆಚ್ಚು ವರ್ಷಗಳ ಬೇಡಿಕೆಯೊಂದು ಈಡೇರಿದಂತಾಯಿತು. ಬೆಂಗಳೂರು ನಗರವನ್ನು ಬ್ಯಾಂಗ್ಳೂರು ಎಂದು ಆಂಗ್ಲಭಾಷೆಯಲ್ಲಿ ಬರೆಯವುದರ ವಿರುದ್ಧ ಮೊದಲು ದನಿ ಎತ್ತಿದ್ದು ಸಾಹಿತಿ ಯು.ಆರ್. ಅನಂತಮೂರ್ತಿ. ಇಂಗ್ಲಿಷ್​ನಲ್ಲಿಯೂ ಬೆಂಗಳೂರು ಎಂದೇ ಕರೆಯಬೇಕು ಹಾಗೂ ದಾಖಲೆಗಳಲ್ಲಿಯೂ ಅದೇ ರೀತಿಯಲ್ಲಿಯೇ ಇರಬೇಕೆಂದು ಒತ್ತಾಯ ಮಾಡಿದ್ದರು. ಅನಂತಮೂರ್ತಿ ಅವರ ಒತ್ತಾಯಕ್ಕೆ ಮಣಿದ ಆಗಿನ ಎಸ್.ಎಂ. ಕೃಷ್ಣ ಸರ್ಕಾರ ರಾಜ್ಯದ 12 ನಗರಗಳ ಆಂಗ್ಲಭಾಷೆಯಲ್ಲಿದ್ದ ದೋಷ ಸರಿಪಡಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತು. ಆ ನಂತರ ರಾಜ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಮತ್ತೊಮ್ಮೆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಬಿಜೆಪಿ ಸರ್ಕಾರ ಸಹ ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಒತ್ತಾಯ ಮಾಡುತ್ತಲೇ ಬಂತು. ರಾಜ್ಯದಿಂದ ಪ್ರಸ್ತಾವನೆ ಹೋದಾಗಲೇ ಕೇಂದ್ರ ಗೃಹ ಸಚಿವಾಲಯ ಭೂಸರ್ವೆಕ್ಷಣಾ ಇಲಾಖೆಯಿಂದ ಪ್ರಸ್ತಾವನೆ ಪಡೆದಿತ್ತು. ಆದರೆ ಒಪ್ಪಿಗೆ ಮಾತ್ರ ಸಿಕ್ಕಿರಲಿಲ್ಲ. ಇತ್ತೀಚೆಗೆ ಬೆಳಗಾಂನ್ನು ಬೆಳಗಾವಿ ಎಂದು ಬದಲಾವಣೆ ಮಾಡಬೇಕೆಂದು ಅಲ್ಲಿನ ಕನ್ನಡಿಗರು ಒತ್ತಾಯ ಮಾಡಿದ್ದರು. ಈ ವಿಚಾರದಲ್ಲಿ ಅಲ್ಲಿನ ಮರಾಠಿಗರಲ್ಲಿ ಕೆಲವರು ತಕರಾರು ತೆಗೆದಿದ್ದರು. ಆದರೆ ರಾಜ್ಯ ಸರ್ಕಾರ ಇದಾವುದಕ್ಕೂ ಮಣಿಯದೇ ಮತ್ತೆ ಕೇಂದ್ರದ ಮೇಲೆ ಒತ್ತಡ ತಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ ಜತೆಯಲ್ಲಿ ಮಾತುಕತೆ ನಡೆಸಿದ ಪರಿಣಾಮ ಆಂಗ್ಲಭಾಷೆಯಲ್ಲಿ ನಗರಗಳ ಹೆಸರು ಬದಲಾವಣೆಗೆ ಒಪ್ಪಿಗೆ ಸಿಕ್ಕಿತು. ಇದೀಗ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಬೇಕಾಗಿದೆ.

2014: ನವದೆಹಲಿ: ನಾರ್ವೆ ಮತ್ತು ಫಿನ್ಲೆಂಡ್​ನ ತಮ್ಮ ಐದು ದಿನಗಳ ಪ್ರವಾಸವನ್ನು ಮುಗಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಾಯ್ನಾಡಿಗೆ ವಾಪಸಾದರು. ಐದು ದಿನಗಳ ಪ್ರವಾಸ ಕಾಲದಲ್ಲಿ ರಾಷ್ಟ್ರಪತಿಯವರು ಶಾಂತಿಯುತ ಬಳಕೆಗಾಗಿ ಪರಮಾಣು ಶಕ್ತಿ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದರು. ಈದಿನ ಬೆಳಗ್ಗೆ ರಾಷ್ಟ್ರಪತಿಯವರು ಸ್ವದೇಶಕ್ಕೆ ವಾಪಸಾದರು. ರಾಷ್ಟ್ರಪತಿಯವರ ಓಸ್ಲೋ ಭೇಟಿ ಕಾಲದಲ್ಲಿ ಭಾರತ ಮತ್ತು ನಾರ್ವೆ ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ಇತರ ರಂಗಗಳಲ್ಲಿ ಸಹಕಾರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ಡಜನ್​ಗೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಿದವು.

2014: ನವದೆಹಲಿ: ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಪ್ರಕ್ಷುಬ್ಧತೆ ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರೂ ಪಡೆಗಳ ಉನ್ನತ ಮಿಲಿಟರಿ ಅಧಿಕಾರಿಗಳ ಜೊತೆಗೆ ರಕ್ಷಣಾ ಸಚಿವಾಲಯದ 'ಸಮರ ಕೊಠಡಿ'ಯಲ್ಲಿ ಸಮಾಲೋಚನೆ ನಡೆಸಿದರು. ಮೂರೂ ಪಡೆಗಳ ಮುಖ್ಯಸ್ಥರು ಒಟ್ಟಾಗಿ ಎಲ್ಲಾ ಉನ್ನತ ಕಮಾಂಡರ್​ಗಳ ಜೊತೆಗೆ ಪ್ರಧಾನಿಯವರೊಂದಿಗೆ ಸಮಾಲೋಚನಾ ಸಭೆ ಸೇರಿದ್ದು ಇದೇ ಮೊದಲು. ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆ ಈ ಮೂರೂ ಪಡೆಗಳ ಮುಖ್ಯಸ್ಥರು ಪ್ರಧಾನಿಗೆ ಭದ್ರತಾ ಪರಿಸ್ಥಿತಿ ಬಗ್ಗೆ ವಿವರವಾದ ಮಾಹಿತಿ ಒದಗಿಸಿದರು. ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅರುಪ್ ರಾಹ ಅವರು ಸಿಬ್ಬಂದಿ ಸಮಿತಿಯ ಮುಖ್ಯಸ್ಥರ ಅಧ್ಯಕ್ಷರಾಗಿ ಮೊದಲಿಗೆ ವಿವರಣೆ ನೀಡಿದರೆ, ಬಳಿಕ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಕೆ. ಧೋವನ್ ಮತ್ತು ಭಾರತೀಯ ಸೇನಾ ಪಡೆ ಮುಖ್ಯಸ್ಥ ಜನರಲ್ ದಲ್​ಬೀರ್ ಸಿಂಗ್ ಪ್ರಧಾನಿಗೆ ವಿವರ ಒಪ್ಪಿಸಿದರು. ಪ್ರಧಾನಿ ಮತ್ತು ರಕ್ಷಣಾ ಸಚಿವ ಅರುಣ್ ಜೇಟ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಕ್ಷಣಾ ಕಾರ್ಯದರ್ಶಿ ಆರ್.ಕೆ. ಮಾಥುರ್ ಮತ್ತಿತರರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

2009: ವಿಶ್ವದ ಮೊತ್ತ ಮೊದಲ ನೀರೊಳಗಿನ ಸಂಪುಟ ಸಭೆ ಶನಿವಾರ (17/10/2009) ಮಾಲ್ದೀವ್ಸಿನಲ್ಲಿ ನಡೆಯಿತು. ಸಾಗರ ತಳದಲ್ಲಿ ಸಭೆ ನಡೆಸಿದ ಸಚಿವರು ಜಾಗತಿಕ ತಾಪಮಾನದಿಂದ ತಮ್ಮ ಪುಟ್ಟ ದ್ವೀಪದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿ ಜಗತ್ತಿನ ಗಮನ ಸೆಳೆದರು.ರಾಜಧಾನಿ ಮಾಲೆಯಿಂದ 35 ನಾಟಿಕಲ್ ಮೈಲು ದೂರದಲ್ಲಿನ ಗಿರಿಫಿಶಿ ದ್ವೀಪ ಸಮೀಪ ನೀಲ ಸಮುದ್ರದ ಆಳದಲ್ಲಿ ಸಂಪುಟ ಸಭೆಗಾಗಿ ಕುದುರೆ ಪಾದಾಕಾರದ ಮೇಜನ್ನು ಅಳವಡಿಸಲಾಗಿತ್ತು. ಅಧ್ಯಕ್ಷ ಮೊಹಮ್ಮದ್ ನಶೀದ್ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಕ್ಯೂಬಾ ದುಸ್ತು ಧರಿಸಿದ್ದ ಸಚಿವರು ಸ್ಪೀಡ್ ಬೋಟುಗಳಲ್ಲಿ ದ್ವೀಪಕ್ಕೆ ಆಗಮಿಸಿ, ನಂತರ ಸಂಪುಟ ಸಭೆ ನಡೆಯುವ ತಾಣಕ್ಕೆ ಈಜಿದರು.ಸಮುದ್ರದೊಳಗಿನ ತಮ್ಮ ಸಭೆಯ ನಿರ್ಣಯಗಳನ್ನು ಜಗತ್ತಿಗೆ ಸಾರಲು ಸಚಿವರು ಬಿಳಿಯ ಫಲಕಗಳು ಮತ್ತು ಕೈ ಸಂಕೇತಗಳನ್ನು ಬಳಸಿದರು.

2008: ಮೊಹಾಲಿ ಅಂಗಳದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ನಿರ್ಮಿಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದು ಅವರು ಇತಿಹಾಸದ ಪುಟದಲ್ಲಿ ದಾಖಲಾದರು. `ಕೆರಿಬಿಯನ್ ಕ್ರಿಕೆಟ್ ದೊರೆ' ಬ್ರಯನ್ ಲಾರಾ ಅವರ ಹೆಸರನ್ನು ಅಳಿಸಿ ಹಾಕಿ, ಆ ಜಾಗದಲ್ಲಿ ತಮ್ಮ ಹೆಸರು ಬರೆದರು. ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ 15 ರನ್ ತಲುಪುತ್ತಿದ್ದಂತೆ ಲಾರಾ ಅವರ 11953 ರನ್ಗಳ ಮಹಾನ್ ಸಾಧನೆ ಪತನಗೊಂಡಿತು. ಈಗ ತೆಂಡೂಲ್ಕರ್ ಖಜಾನೆಯಲ್ಲಿರುವ ರನ್ 12027. ಲಾರಾ ದಾಖಲೆ ಮುರಿಯಲು ಸಚಿನ್ಗೆ 152 ಟೆಸ್ಟ್ ಬೇಕಾಯಿತು. ವಿಂಡೀಸ್ ಆಟಗಾರ ಟೆಸ್ಟ್ನಲ್ಲಿ ಗರಿಷ್ಠ ರನ್ ಗಳಿಸಲು ತೆಗೆದುಕೊಂಡಿದ್ದು ಕೇವಲ 131 ಟೆಸ್ಟ್.

2008: ಮಂಡ್ಯ ತಾಲ್ಲೂಕಿನ ಹೊಳಲು ಸಮೀಪ ಸಂಭವಿಸಿದ ಬಸ್ ಅಪಘಾತದಲ್ಲಿ ಒಟ್ಟು ಆರು ಜನರು ಮೃತರಾಗಿ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮೇಲುಕೋಟೆ ಕಡೆಯಿಂದ ಮಂಡ್ಯಕ್ಕೆ ಆಗಮಿಸುತ್ತಿದ್ದ ಖಾಸಗಿ ನವದುರ್ಗ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಕಬ್ಬಿನ ಗದ್ದೆಗೆ ಉರುಳಿ ಈ ಅಪಘಾತ ಸಂಭವಿಸಿತು.

2008: ಮೊಬೈಲ್ ಬಳಕೆದಾರರಿಗೆ ಇದೊಂದು ಎಚ್ಚರಿಕೆಯ ಮಾಹಿತಿ. ಅತಿಯಾದ ಮೊಬೈಲ್ ಬಳಕೆ ಚರ್ಮ ರೋಗವನ್ನೂ ತರಬಲ್ಲದು. ಮೊಬೈಲ್ ಬಳಕೆಯಿಂದ ಮುಖದ ಮೇಲೆ ಗುಳ್ಳೆಗಳು ಮತ್ತು ಬಿಳಿ ಲೋಹ (ಉಕ್ಕು ಬೆರೆಸಿದ ನಿಕಲ್) ಬಳಸಿದ ಹ್ಯಾಂಡ್ ಸೆಟ್ ಕಿವಿಯ ಅಲರ್ಜಿಗೆ ಕಾರಣವಾಗುತ್ತದೆ ಎಂದು ಬ್ರಿಟಿಷ್ ಚರ್ಮರೋಗ ತಜ್ಞರ ಸಂಘದ ಸದಸ್ಯರು ಬಹಿರಂಗ ಪಡಿಸಿದರು. ಬಿಳಿ ಲೋಹವು ಸಾಮಾನ್ಯವಾಗಿ ಎಲ್ಲರಿಗೂ ಹಿಡಿಸುವುದಿಲ್ಲ. ಇದನ್ನು ಹ್ಯಾಂಡ್ ಸೆಟ್ಗಳ ಬಟನ್ ಮತ್ತು ಸ್ಕ್ರೀನ್ಗಳಲ್ಲಿ ಬಳಸಲಾಗುತ್ತದೆ. ಮೊಬೈಲ್ ಪೋನ್ ಚರ್ಮರೋಗದಲ್ಲಿ ಚರ್ಮವು ಕೆಂಪಗಾಗುತ್ತದೆ. ಅಲ್ಲದೆ ಬೊಕ್ಕೆಗಳೆದ್ದು ಒಣಗುತ್ತದೆ ಹಾಗೂ ಒಡೆಯುತ್ತದೆ. ಸ್ತ್ರೀಯರ ಚರ್ಮ ಹೆಚ್ಚು ಸೂಕ್ಷ್ಮವಾದುದುರಿಂದ ಈ ಚರ್ಮ ರೋಗದ ತೀವ್ರತೆ ಪುರುಷರಿಗಿಂತ ಮಹಿಳೆಯರಲ್ಲಿ ಇನ್ನೂ ಹೆಚ್ಚು. `ಮೊಬೈಲ್ ಹ್ಯಾಂಡ್ ಸೆಟ್ನಲ್ಲಿ ಕಿವಿಗಿಟ್ಟು ಕೊಳ್ಳುವ ಭಾಗದಲ್ಲಿರುವ ಬಿಳಿ ಲೋಹದಿಂದ ಅಲರ್ಜಿ ಹೆಚ್ಚು ಉಂಟಾಗುತ್ತದೆ' ಸಂಘದ ಡಾ. ಗ್ರಾಹಂ ಲೋವೆ ಹೇಳಿದರು.

2008: ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ನ್ಯೂಯಾರ್ಕಿನ ವಿಚಾರಣಾ ಮಂಡಳಿಯೊಂದು 20,000 ಅಮೆರಿಕನ್ ಡಾಲರ್ ಪರಿಹಾರ ನೀಡಲು ಸೂಚಿಸಿತು. ಹರ್ವಿಂದರ್ ವಿಲಕು ಅವರೇ ಪರಿಹಾರ ಪಡೆದ ಭಾರತೀಯ ಮೂಲದ ವ್ಯಕ್ತಿ. 2005 ರ ಮೇ ತಿಂಗಳಲ್ಲಿ ಇವರು ಯಾರ್ಕ್ ಕಾಲೇಜಿನ ಹೊರಭಾಗದಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಪೊಲೀಸರಿಗೆ ಅವರ ಹೆಸರು ಕೇಳಿದ್ದಕ್ಕೆ ಅವರು (ಪೊಲೀಸರು) ಅಂಗಿಯ ಕಾಲರ್ ಹಿಡಿದೆಳೆದು ಹೊಟ್ಟೆ ಮತ್ತು ತೊಡೆಯ ಮೇಲೆ ಹಲ್ಲೆ ನಡೆಸಿ ಜನಾಂಗೀಯ ನಿಂದನೆಯನ್ನು ಮಾಡಿದ್ದರು. ಆನಂತರ ಹರ್ವಿಂದರ್ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಘಟನೆ ನಡೆಯುವುದಕ್ಕೆ ನಾಲ್ಕು ತಿಂಗಳ ಮುನ್ನ ಹರ್ವಿಂದರ್ ಅಮೆರಿಕದ ಪೌರತ್ವ ಪಡೆದಿದ್ದರು.

2008: ಕ್ಷಯರೋಗ ನಿಯಂತ್ರಣ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ ಸಂಶೋಧನೆಗಳ ಮೂಲಕ ಹೊಸ ವಿಧಾನಗಳನ್ನು ಅಭಿವೃದ್ಧಿ ಪಡಿಸಿದ್ದ ಹಿರಿಯ ಕ್ಷಯರೋಗ ತಜ್ಞ ಅನಿವಾಸಿ ಭಾರತೀಯ (ಎನ್ಆರ್ಐ) ಪ್ರೊ.ಅಜಿತ್ ಲಾಲ್ವಾನಿ ಅವರಿಗೆ ಲಂಡನ್ನಿನ ಪ್ರತಿಷ್ಠಿತ ಪ್ರಶಸ್ತಿ `ರಾಯಲ್ ಕಾಲೇಜ್ ಆಫ್ ಫಿಜಿಶಿಯನ್ಸ್ ವೆಬರ್ ಪಾರ್ಕ್ ಟ್ರಸ್ಟ್ ಮೆಡಲ್' ಲಭಿಸಿತು. ಲಂಡನ್ನಿನ ರೀಜೆಂಟ್ಸ್ ಪಾರ್ಕ್ನಲ್ಲಿ ನಡೆದ ವಾರ್ಷಿಕ ಹಾರ್ವೇನಿಯನ್ ಭಾಷಣ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಂಡನ್ನಿನ ಇಂಪೀರಿಯಲ್ ಕಾಲೇಜಿನಲ್ಲಿ ಹಿರಿಯ ಸಂಶೋಧಕ ಮತ್ತು ಅಧ್ಯಕ್ಷರಾಗಿರುವ ಲಾಲ್ವಾನಿ ಅವರು ಇಲ್ಲಿನ ಬಹುದೊಡ್ಡ ವಿಟಮಿನ್ ತಯಾರಿಕಾ ಕಂಪೆನಿ `ವಿಟಬಯಾಟಿಕ್ಸ್' ನ ಸ್ಥಾಪಕ ಹಾಗೂ ಅಧ್ಯಕ್ಷರ ಪುತ್ರ .

2008: ಚಲನಚಿತ್ರ ವಿತರಕ, ಚಿತ್ರಮಂದಿರಗಳ ಮಾಲೀಕ ಕೆ.ಸಿ.ದೇಸಾಯಿ (85) ಬೆಂಗಳೂರಿನಲ್ಲಿ ನಿಧನರಾದರು. ಪ್ರತಿಷ್ಠಿತ ಚಿತ್ರಮಂದಿರ ಎಂದು ಕರೆಸಿಕೊಂಡಿದ್ದ ಅಲಂಕಾರ್, ಹಿಂದೆ ಕನ್ನಡ ಚಲನಚಿತ್ರಗಳ ಜೀವನಾಡಿಯಂತಿದ್ದ ಪ್ರಭಾತ್ ಹಾಗೂ ಅಪ್ಸರಾ ಚಿತ್ರಮಂದಿರಗಳ ಮಾಲೀಕರಾಗಿದ್ದ ದೇಸಾಯಿ. ತಮ್ಮ ಚಲನಚಿತ್ರ ವಿತರಣಾ ಸಂಸ್ಥೆಗಳಾದ `ಫೇಮಸ್ ಫಿಲ್ಮ್ಸ್' ಮತ್ತು `ಅಮಿ ಫಿಲ್ಮ್ಸ್'ಗಳ ಮೂಲಕ ಹಿಂದಿ ಚಿತ್ರಗಳನ್ನಲ್ಲದೇ ಸುಮಾರು 100 ಕನ್ನಡ ಚಿತ್ರಗಳನ್ನೂ ಬಿಡುಗಡೆ ಮಾಡಿದ್ದರು. ಇದರೊಂದಿಗೆ ರಾಜ್ಯ ಕ್ರಿಕೆಟ್ ಮಂಡಳಿಗೆ ನಲವತ್ತು ವರ್ಷಗಳ ಕಾಲ ಖಜಾಂಚಿಯಾಗಿದ್ದರು. `ಅಂತ' `ಅಜಿತ್', `ನೀ ಬರೆದ ಕಾದಂಬರಿ' `ಬಣ್ಣದ ಗೆಜ್ಜೆ' ಅವರು ವಿತರಣೆ ಮಾಡಿದ ಮುಖ್ಯವಾದ ಸಿನಿಮಾಗಳು. ಚಿತ್ರರಂಗದಲ್ಲಿ ಶಿಸ್ತು, ಸಂಯಮಕ್ಕೆ ಅವರು ಮತ್ತೊಂದು ಹೆಸರಾಗಿದ್ದರು.

2008: ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 10 ಸಾವಿರ ಗಡಿಯಿಂದ ಕೆಳಮಟ್ಟಕ್ಕೆ ಕುಸಿಯಿತು. ವಾರಾಂತ್ಯದ ದಿನ ಷೇರು ವಹಿವಾಟು ಆರಂಭದಲ್ಲಿ ಏರುಗತಿ ಪ್ರದರ್ಶಿಸಿತು. ಆದರೆ, ಆನಂತರ ಶೇ 5.73 ರಷ್ಟು ಅಂದರೆ, 606 ಅಂಶಗಳ ಪತನ ದಾಖಲಿಸಿತು.

2007: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಕ್ರೆಗ್ ಮೆಕ್ ಮಿಲನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವೆಲ್ಲಿಂಗ್ಟನ್ನಿನಲ್ಲಿ ವಿದಾಯ ಘೋಷಿಸಿದರು. ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ವೈಯಕ್ತಿಕ ಕಾರಣಗಳಿಂದಾಗಿ 31ರ ಹರೆಯದ ಅವರು ಈ ನಿರ್ಧಾರ ಕೈಗೊಂಡರು. ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಕೊನೆಗೊಂಡ ಟ್ವೆಂಟಿ 20 ವಿಶ್ವಕಪ್ ಟೂರ್ನಿಯ ಬಳಿಕ ನಿವೃತ್ತಿ ಪ್ರಕಟಿಸಲು ಬಯಸಿದ್ದೆ ಎಂದು ಅವರು ತಿಳಿಸಿದರು. ಟ್ವೆಂಟಿ 20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ಕಿವೀಸ್ ಪರ ಅತ್ಯಧಿಕ ರನ್ ಪೇರಿಸಿದ್ದರು.

2007: ತೆಲುಗು ಚಿತ್ರ ನಟ ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ (19) ತಂದೆಯ 'ಗೃಹ ಬಂಧನ'ದಿಂದ ತಪ್ಪಿಸಿಕೊಂಡು ಹೋಗಿ ತನ್ನ ಪ್ರಿಯಕರ ಸಿರೀಶ್ ಭಾರದ್ವಾಜ್ ಅವರನ್ನು ಮದುವೆಯಾದ ಘಟನೆ ಬೆಳಕಿಗೆ ಬಂತು. ಚಾರ್ಟರ್ಡ್ ಅಕೌಂಟೆಂಟ್ ಪದವಿ ಓದುತ್ತಿದ್ದ ಶ್ರೀಜಾ, ನಾಲ್ಕು ವರ್ಷದಿಂದ ಸಿರೀಶನನ್ನು ಪ್ರೀತಿಸುತ್ತಿದ್ದರು. ಆ ಪ್ರೀತಿಗೆ ಚಿರಂಜೀವಿ ಕುಟುಂಬ ಸುತರಾಂ ಒಪ್ಪಿರಲಿಲ್ಲ. ಆಕೆಯ ಓದನ್ನೂ ಮೊಟಕುಗೊಳಿಸಿ ಒಂದು ವರ್ಷದಿಂದ ಮನೆಯಲ್ಲೇ ಇಟ್ಟಿದ್ದರು. ಈದಿನ ಮುಂಜಾನೆ ಮನೆಯಿಂದ ತಪ್ಪಿಸಿಕೊಂಡ ಶ್ರೀಜಾ, ಹೈದರಾಬಾದಿನಲ್ಲಿ ಆರ್ಯ ಸಮಾಜದಲ್ಲಿ ತಾನು ಪ್ರೀತಿಸಿದ ಸಿರೀಶನೊಂದಿಗೆ ರಹಸ್ಯವಾಗಿ ಮದುವೆಯಾದರು. ನಂತರ ಮಾಧ್ಯಮಗಳ ಮುಂದೆ ಬಂದು ತಮ್ಮ 'ಪ್ರೇಮ ಕಥೆ'ಯನ್ನು ಬಹಿರಂಗ ಪಡಿಸಿದರು. ಕಳೆದ ವರ್ಷ ಚಿರಂಜೀವಿ ಅವರ ಹಿರಿಯ ಪುತ್ರಿಯ ಮದುವೆ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ವಿಜೃಂಭಣೆಯಿಂದ ನಡೆದಿತ್ತು.

2007: ಪಾಕಿಸ್ಥಾನವು ಅಂತಾರಾಷ್ಟ್ರೀಯ ಕ್ರಿಕೆಟ್ಟಿಗೆ ನೀಡಿದ ಅತ್ಯುತ್ತಮ ಅಂಪೈರ್ ಅಲೀಮ್ ದಾರ್ ಮಟ್ಟಿಗೆ ಈದಿನ ಮುಂಬೈಯ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಹಣಾಹಣಿಯ ಪಂದ್ಯದಲ್ಲಿ ತಮ್ಮ ನೂರನೇ ಏಕದಿನ ಪಂದ್ಯದ ಸಂಭ್ರಮವನ್ನು ಅನುಭವಿಸಿದರು. ನಾಗಪುರ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅದು ಅವರ 99 ನೆಂಯ ಏಕದಿನ ಪಂದ್ಯವಾಗಿತ್ತು. 2003ರಲ್ಲಿ ಢಾಕಾದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದಲ್ಲಿ ಅವರು ಮೊತ್ತ ಮೊದಲ ಬಾರಿಗೆ ಟೆಸ್ಟ್ ಅಂಪೈರ್ ಆಗಿದ್ದರು. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಆಗಿ ಅವರು ಪದಾರ್ಪಣೆ ಮಾಡಿದ್ದು ಆತಿಥೇಯ ಪಾಕಿಸ್ಥಾನ ಹಾಗೂ ಪ್ರವಾಸಿ ಶ್ರೀಲಂಕಾ ತಂಡಗಳು 2000 ಇಸವಿಯ ಫೆಬ್ರುವರಿಯಲ್ಲಿ ಹಣಾಹಣಿ ನಡೆಸಿದ್ದಾಗ.

2007: ಚಿತ್ರದುರ್ಗ ಮುರುಘಾಮಠದ ಪ್ರತಿಷ್ಠಿತ `ಬಸವ ಶ್ರೀ ಪ್ರಶಸ್ತಿ'ಯನ್ನು ಈ ಬಾರಿ ಹರಿಯಾಣದ ಸಮಾಜ ಸೇವಕ ಸ್ವಾಮಿ ಅಗ್ನಿವೇಶ್ ಅವರಿಗೆ ಘೋಷಿಸಲಾಯಿತು. ಪ್ರಶಸ್ತಿಯು 1ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2007: ಮೈಸೂರು ದಸರಾ ಉತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡುವ ರಾಜ್ಯ ಸಂಗೀತ ವಿದ್ವಾನ್ ಗೌರವ ಪುರಸ್ಕಾರಕ್ಕೆ ನಾಡಿನ ಹಿರಿಯ ಹಿಂದೂಸ್ಥಾನಿ ಗಾಯಕ ಪಂಡಿತ್ ಸಿದ್ದರಾಮಸ್ವಾಮಿ ಕೋರವಾರ ಅವರು ಆಯ್ಕೆಯಾದರು.

2007: ಮುಂಬೈ: ಬ್ಯಾಟಿಂಗಿನಲ್ಲೂ ಬೌಲರುಗಳು ಮಿಂಚಿದ್ದರಿಂದ ಮುಂಬೈಯಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2 ವಿಕೆಟುಗಳ ರೋಚಕ ಗೆಲುವು ಸಾಧಿಸಿತು.

2007: ಕರ್ನಾಟಕ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ವಿದ್ಯುತ್ ಸರಬರಾಜು ಮಾಡಲು ಅಥವಾ ಅಗತ್ಯವಾದ ಲೈನು/ ಇತರ ಕೆಲಸಗಳಿಗಾಗಿ ಗ್ರಾಹಕರಿಂದ ಎರಡು ತಿಂಗಳ ವಿದ್ಯುತ್ ಬಿಲ್ (2 ಎಂಎಂಡಿ) ಮೊತ್ತಕ್ಕೆ ಸಮಾನವಾದ ಠೇವಣಿಯನ್ನು ಪಡೆಯಬಹುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ ಇ ಆರ್ ಸಿ) ಆದೇಶ ನೀಡಿತು. ಒಂದು ವೇಳೆ ಎರಡು ತಿಂಗಳಿಗೊಮ್ಮೆ ವಿದ್ಯುತ್ ಬಿಲ್ ನೀಡುವ ಕ್ರಮ ಇದ್ದರೆ 3 ತಿಂಗಳ ಬಿಲ್ (3 ಎಂಎಂಡಿ) ಮೊತ್ತವನ್ನು ಭದ್ರತೆಯಾಗಿ ಪಡೆಯಬಹುದು, ಅಕ್ಟೋಬರ್ 11ರಿಂದ ಈ ಆದೇಶ ಜಾರಿಗೆ ಬಂದಿದೆ ಎಂದು ಆಯೋಗದ ಕಾರ್ಯದರ್ಶಿಗಳು ಪ್ರಕಟಿಸಿದರು.

2007: ರಿಜ್ವಾನುರ್ ರೆಹಮಾನ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಕೋಲ್ಕತ್ತ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಕಿತ್ತೊಗೆಯುವ ನಿರ್ಧಾರ ಕೈಗೊಂಡಿತು. ಕೋಲ್ಕತ್ತಾ ಪೊಲೀಸ್ ಆಯುಕ್ತ ಪ್ರಸುನ್ ಮುಖರ್ಜಿ, ಪೊಲೀಸ್ ಉಪ ಕಮಿಷನರುಗಳಾದ ಗ್ಯಾನ್ವಂತ್ ಸಿಂಗ್ ಮತ್ತು ಅಜಯ್ ಕುಮಾರ್, ರೌಡಿ ನಿಗ್ರಹ ದಳದ ಸಹಾಯಕ ಕಮಿಷನರ್ ಸುಕಾಂತಿ ಚಕ್ರವರ್ತಿ, ಸಬ್ ಇನ್ಸ್ಪೆಕ್ಟರ್ ಕೃಷ್ಣೇಂದು ಘೋಷ್ ಅವರ ವಿರುದ್ಧ ಈ ತನಿಖೆಗೆ ಹೈಕೋರ್ಟ್ ಆಜ್ಞಾಪಿಸಿತ್ತು.

2007: ಸಾಹಿತ್ಯ ಲೋಕದ ಅತ್ಯುನ್ನತ `ಬೂಕರ್' ಪ್ರಶಸ್ತಿ ಐರಿಷ್ ಲೇಖಕಿ ಅನ್ನೆ ಎನ್ ರೈಟ್ (45) ಅವರಿಗೆ ಲಭಿಸಿತು. ಭಾರತದ ಇಂದ್ರಾ ಸಿನ್ಹಾ ಹಾಗೂ ಇತರ ನಾಲ್ವರನ್ನು ಹಿಂದಿಕ್ಕಿ ಅನ್ನೆ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇಂದ್ರಾ ಅವರ `ಅನಿಮಲ್ಸ್ ಪೀಪಲ್', ಇಯಾನ್ ಮೆಕ್ ವಾನ್ ಅವರ `ಆನ್ ಚೆಸಿಲ್ ಬೀಚ್' ಹಾಗೂ ಲಾಯ್ಡ್ ಜೋನ್ಸ್ ಅವರ `ಮಿಸ್ಟರ್ ಪಿಪ್' ಪುಸ್ತಕಗಳನ್ನು ಅನ್ನೆ ಅವರ `ದಿ ಗ್ಯಾದರಿಂಗ್' ಹಿಂದಿಕ್ಕಿತು. ಹೋವರ್ಡ್ ಡೇವೀಸ್ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿತು. ಪ್ರಶಸ್ತಿಯು 50 ಸಾವಿರ ಪೌಂಡುಗಳ ನಗದು ಬಹುಮಾನ ಹೊಂದಿದೆ.

2007: ಸುಮಾರು 140 ದಶಲಕ್ಷ ವರ್ಷಗಳ ಹಿಂದೆ `ಗೊಂಡ್ವಾನಾಲ್ಯಾಂಡ್' ಎಂದೇ ಕರೆಯಲ್ಪಡುವ ಮಹಾಖಂಡ ಒಡೆದು ನಂತರ ಅದರ ಒಂದು ಭಾಗವಾದ ಭಾರತ ಉಪಖಂಡ ಅತಿ ವೇಗವಾಗಿ ಯುರೇಷಿಯಾಕ್ಕೆ ಅಪ್ಪಳಿಸಿದ ಪರಿಣಾಮ ಹಿಮಾಲಯ ಪರ್ವತ ಮತ್ತು ಟಿಬೆಟ್ ಪ್ರಸ್ಥಭೂಮಿ ರಚನೆಯಾಗಿರುವುದಾಗಿ ಬ್ರಿಟನ್ನಿನ ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ತಿಳಿಸಿತು. ಈ ಮಹಾಖಂಡದಲ್ಲಿ ಆಧುನಿಕ ಆಫ್ರಿಕಾ, ಭಾರತ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ ಹಾಗೂ ದಕ್ಷಿಣ ಅಮೆರಿಕ ಉಪಖಂಡಗಳು ಸೇರಿದ್ದವು. ಇತರ ಭಾಗಗಳಿಗಿಂತಲೂ ಭಾರತ ಅತಿವೇಗವಾಗಿ (ವರ್ಷಕ್ಕೆ 18ರಿಂದ 20 ಸೆಂಟಿ ಮೀಟರಿನಷ್ಟು) ಚಲಿಸಿ, ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಯುರೇಷಿಯಾಕ್ಕೆ ಅಪ್ಪಳಿಸಿ ಹಿಂದಕ್ಕೆ ಸರಿದಾಗ ಭೂಮಿ ದೊಡ್ಡ ಪರ್ವತವಾಗಿ ಮಾರ್ಪಟ್ಟು ವಿಶ್ವದ ಅತಿ ಎತ್ತರದ ಶಿಖರ ನಿರ್ಮಾಣವಾಯಿತು. ಆದರೆ ಆಸ್ಟ್ರೇಲಿಯಾ ಮತ್ತು ಆಫ್ರಿಕಾ ನಿಧಾನಗತಿಯಲ್ಲಿ ವರ್ಷಕ್ಕೆ 4 ಸೆಂಟಿ ಮೀಟರಿನಷ್ಟು ಚಲಿಸಿತು. ದಕ್ಷಿಣ ಅಮೆರಿಕ ಸ್ವಲ್ಪ ವೇಗವಾಗಿ ಚಲಿಸಿತು. ಅಂಟಾರ್ಕ್ಟಿಕಾ ಮಾತ್ರ ಅಲ್ಲೇ ಉಳಿಯಿತು ಎಂದು ಜರ್ಮನ್ ಮತ್ತು ಭಾರತೀಯ ತಜ್ಞ ಲೇಖಕರು ನಂಬುವುದಾಗಿ ಪತ್ರಿಕೆ ಪ್ರಕಟಿಸಿತು.

2007: ಬರ್ಕಿನಾ ಫಾಸೋ, ಕೋಸ್ಟಾ ರಿಕಾ, ಕ್ರೊವೇಷಿಯಾ, ಲಿಬಿಯಾ ಹಾಗೂ ವಿಯೆಟ್ನಾಂ ದೇಶಗಳನ್ನು ಮುಂದಿನ ಎರಡು ವರ್ಷಗಳ ಅವಧಿಗಾಗಿ ಭದ್ರತಾ ಮಂಡಲಿಗೆ ಹಂಗಾಮಿ ಸದಸ್ಯರನ್ನಾಗಿ ವಿಶ್ವಸಂಸ್ಥೆಯ ಮಹಾಸಭೆ ಆಯ್ಕೆ ಮಾಡಿತು.

2006: ಭಾರತೀಯ ಸಂಜಾತ ವಿಜ್ಞಾನಿ ಮಂಡ್ಯಮ್ ಶ್ರೀನಿವಾಸನ್ (56) ಅವರಿಗೆ ವೈಜ್ಞಾನಿಕ ಸಂಶೋಧನೆಗೆ ನೀಡಲಾಗುವ ಆಸ್ಟ್ರೇಲಿಯಾದ ಪ್ರತಿಷ್ಠಿತ ಪ್ರಧಾನ ಮಂತ್ರಿ ಪ್ರಶಸ್ತಿ ಲಭಿಸಿತು. ಮೂರು ಲಕ್ಷ ಡಾಲರ್ ಮೌಲ್ಯದ ಈ ಪ್ರಶಸ್ತಿಯನ್ನು ಮೆಲ್ಬೋರ್ನಿನಲ್ಲಿ ಪ್ರದಾನ ಮಾಡಲಾಯಿತು. ಆಸ್ಟ್ರೇಲಿಯಾದ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿರುವ ಶ್ರೀನಿವಾಸನ್ ಅವರು ಜೇನ್ನೊಣಗಳ ಹಾರಾಟ ಕೌಶಲ ಬಗ್ಗೆ ಮಾಡಿದ ಸಂಶೋಧನೆ ಹಾಗೂ ಅದನ್ನು ರೊಬೋಟಿಕ್ ವಿಮಾನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಿದ ಸಾಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಯಿತು.

2006: ಕುತೂಹಲ ಕೆರಳಿಸಿದ್ದ ಪ್ರಿಯದರ್ಶಿನಿ ಮಟ್ಟು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿಯ ಪುತ್ರ ಸಂತೋಷ ಕುಮಾರ ಸಿಂಗ್ ತಪ್ಪಿತಸ್ಥ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. 1996ರ ಜುಲೈ 23ರಂದು ಈ ಕೊಲೆ ನಡೆದಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಎಸ್. ಸೋಧಿ, ಹಾಗೂ ನ್ಯಾಯಮೂರ್ತಿ ಪಿ.ಕೆ. ಭಾಸಿನ್ ಅವರನ್ನು ಒಳಗೊಂಡ ಪೀಠವು ಆರೋಪಿಯನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿತು.

2006: ಮಹಾತ್ಮ ಗಾಂಧಿಯವರಿಗೆ ನೊಬೆಲ್ ಶಾಂತಿ ಪಾರಿತೋಷಕ ನೀಡದೆ ಆಯ್ಕೆ ಸಮಿತಿ ಈವರೆಗಿನ ಅತಿದೊಡ್ಡ ತಪ್ಪು ಎಸಗಿದೆ ಎಂದು ನಾರ್ವೆಯ ನೊಬೆಲ್ ಸಂಸ್ಥೆ ನಿರ್ದೇಶಕ ಗೀರ್ ಲುಂಡೆಸ್ಟ್ಯಾಂಡ್ ಅಭಿಪ್ರಾಯಪಟ್ಟರು. ಮಹಾತ್ಮ ಗಾಂಧಿ ಅವರಿಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡುವ ಪ್ರಸ್ತಾವನೆ ಇತ್ತು, ಆದರೆ 1948ರಲ್ಲಿ ಗಾಂಧೀಜಿ ನಿಧನರಾದ ಬಳಿಕ ಆ ಯೋಚನೆ ಕೈಬಿಡಲಾಯಿತು ಎಂದು ಲುಂಡೆ ಸ್ಟ್ಯಾಂಡ್ ನಾರ್ವೆಯ ರಾಜಧಾನಿ ಓಸ್ಲೊದಲ್ಲಿ ಭಾರತೀಯ ಪತ್ರಕರ್ತರಿಗೆ ತಿಳಿಸಿದರು.

1997: ಕ್ರಾಂತಿಕಾರಿ ಅರ್ನೆಸ್ಟೋ `ಚೆ' ಗ್ಯುವೇರಾ ಅವರ ಅವಶೇಷಗಳನ್ನು 30 ವರ್ಷಗಳ ಬಳಿಕ ಕ್ಯೂಬಾದಲ್ಲಿ ಸಮಾಧಿ ಮಾಡಲಾಯಿತು. ಮೂವತ್ತು ವರ್ಷಗಳ ಹಿಂದೆ ಬೊಲಿವಿಯಾದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು.

1979: ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಮದರ್ ತೆರೇಸಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

1970: ಅನಿಲ್ ಕುಂಬ್ಳೆ ಜನ್ಮದಿನ. 300 ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ಟುಗಳನ್ನು ಪಡೆದ ಏಕೈಕ ಭಾರತೀಯ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

1970: ಅನ್ವರ್ ಸಾದತ್ ಅವರು ಅಬ್ದುಲ್ ನಾಸ್ಸೇರ್ ಅವರ ಉತ್ತರಾಧಿಕಾರಿಯಾಗಿ ಈಜಿಪ್ಟಿನ ಅಧ್ಯಕ್ಷ ಸ್ಥಾನಕ್ಕೆ ಏರಿದರು.

1941: ಹಿರಿಯ ಭಾಷಾ ವಿಜ್ಞಾನಿ, ಘನ ವಿದ್ವಾಂಸ, ವಿಮರ್ಶಕ ಡಾ. ಕೆ.ಜಿ. ಶಾಸ್ತ್ರಿ ಅವರು ಗಣೇಶ ಶಾಸ್ತ್ರಿ- ಮೀನಾಕ್ಷಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.

1941: ಸಾಹಿತಿ ಶಾಂತಾ ಸನ್ಮತಿಕುಮಾರ್ ಜನನ.

1933: ಆಲ್ಬರ್ಟ್ ಐನ್ ಸ್ಟೀನ್ ಅವರು ನಾಜಿ ಜರ್ಮನಿಯಿಂದ ನಿರಾಶ್ರಿತರಾಗಿ ಅಮೆರಿಕಕ್ಕೆ ಆಗಮಿಸಿದರು.

1932: ಸಾಹಿತಿ ಎಚ್. ಬಿ. ಚಂಪಕಮಾಲಾ ಜನನ.

1932: ಸಾಹಿತಿ ರಾಜೀವ್ ತಾರಾನಾಥ ಜನನ.

1926: ಸಾಹಿತಿ ಎಂ.ಎನ್. ಸರೋಜಮ್ಮ ಜನನ.

1920: ಭಾರತದ ಕಮ್ಯೂನಿಸ್ಟ್ ಪಕ್ಷವು ತಾಷ್ಕೆಂಟಿನಲ್ಲಿ ಸ್ಥಾಪನೆಗೊಂಡಿತು. ಏಳುಮಂದಿ ಸದಸ್ಯರಲ್ಲಿ ಎಂ.ಎನ್. ರಾಯ್ ಮತ್ತು ಬೀರೇಂದ್ರ ಚಟ್ಟೋಪಾಧ್ಯಾಯ ಸೇರಿದ್ದರು.

1919: ಭಾರತದಲ್ಲಿ ಖಿಲಾಫತ್ ಚಳವಳಿ ಆರಂಭಗೊಂಡಿತು. ಮುಸ್ಲಿಂ ನಾಯಕ ಮೌಲಾನಾ ಜೌಹರ್ ಅಲಿ ಮತ್ತು ಮೌಲಾನಾ ಶೌಕತ್ ಅಲಿ ಸೋದರರು ಮತ್ತು ಅಬ್ದುಲ್ ಕಲಾಂ ಆಜಾದ್ ನೇತೃತ್ವದಲ್ಲಿ ಚಳವಳಿಗೆ ನಾಂದಿ ಹಾಡಲಾಯಿತು.

1912: ಪೋಪ್ ಒಂದನೇ ಜಾನ್ ಪಾಲ್ (1912-78) ಜನ್ಮದಿನ. 1978ರಲ್ಲಿ ಪೋಪ್ ಪದವಿಗೆ ಏರಿದ ಇವರು ಆ ಹುದ್ದೆಯಲ್ಲಿ ಇದ್ದುದು 34 ದಿನ ಮಾತ್ರ. ಆಧುನಿಕ ಕಾಲದಲ್ಲಿ ಈ ಹುದ್ದೆಯಲ್ಲಿ ಅತ್ಯಂತ ಕಡಿಮೆ ದಿನ ಇದ್ದವರು ಇವರು.

1906: ಸ್ವಾಮಿ ರಾಮತೀರ್ಥ ಜನನ.

1817: ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯದ ಸ್ಥಾಪಕ ಸರ್ ಸೈಯದ್ ಅಹಮದ್ ಖಾನ್ (1817-98) ಜನ್ಮದಿನ. ಮುಸ್ಲಿಂ ಶಿಕ್ಷಣತಜ್ಞ, ನ್ಯಾಯವಾದಿ ಹಾಗೂ ಗ್ರಂಥಕರ್ತರಾಗಿದ್ದ ಇವರು 19ನೇ ಶತಮಾನದಲ್ಲಿ ಭಾರತೀಯ ಮುಸ್ಲಿಮರ ಪುನರುತ್ಥಾನಕ್ಕೆ ಮಹತ್ವದ ಕಾಣಿಕೆ ನೀಡಿದರು.

1777: ಸ್ವಾತಂತ್ರ್ಯ ಸಮರ ಕಾಲದ ಸರಟೋಗಾ ಕದನದಲ್ಲಿ ಅಮೆರಿಕನ್ ವಸಾಹತುಗಾರರಿಗೆ (ಕೊಲೊನಿಸ್ಟ್) ಜನರಲ್ ಹೊರಾಷಿಯೋ ಗೇಟ್ಸ್ ನಾಯಕತ್ವದಲ್ಲಿ ವಿಜಯ ಲಭಿಸಿತು. ಜಾನ್ ಬರ್ಗೊಯೆನ್ ನೇತೃತ್ವದ ಬ್ರಿಟಿಷ್ ಪಡೆಗಳು ಪರಾಭವ ಅನುಭವಿಸಿದವು.

No comments:

Post a Comment