Tuesday, March 27, 2018

ಇಂದಿನ ಇತಿಹಾಸ History Today ಮಾರ್ಚ್ 26

ಇಂದಿನ ಇತಿಹಾಸ History Today ಮಾರ್ಚ್ 26
 2018: ನವದೆಹಲಿ: ಮುಸ್ಲಿಮರು ಅನುಸರಿಸುವ ಬಹುಪತ್ನಿತ್ವ ಮತ್ತುನಿಕಾಹ್ ಹಲಾಲ ಸಾಂವಿಧಾನಿಕ ಸಿಂಧುತ್ವ ಬಗ್ಗೆ ಪರಿಶೀಲಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತು ಮತ್ತು ಬಗ್ಗೆ ಅಭಿಪ್ರಾಯ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಕಾನೂನು ಆಯೋಗವನ್ನು ಕೋರಿತು.   ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವು ತ್ರಿವಳಿ ತಲಾಖ್ನ್ನು ನಿಷೇಧಿಸಿ ನೀಡಲಾಗಿದ್ದ ತನ್ನ ೨೦೧೭ರ ತೀರ್ಪಿನಲ್ಲಿ ಮುಕ್ತವಾಗಿ ಇರಿಸಿದ್ದ ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸಮ್ಮತಿಸಿತು. ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ೨೦೧೭ರ ತನ್ನ ತೀರ್ಪಿನಲ್ಲಿ ಒಂದೇ ಉಸಿರಿನ ತ್ರಿವಳಿ ತಲಾಖ್ ಪದ್ಧತಿಯನ್ನು ಸಂವಿಧಾನ ಬಾಹಿರ ಎಂಬುದಾಗಿ ತೀರ್ಪು ನೀಡಿತ್ತು.  ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೂ ಒಳಗೊಂಡ ಪೀಠವುನಿಕಾಹ್ ಹಲಾಲ ಮತ್ತು ಬಹುಪತ್ನಿತ್ವ ಕ್ರಮಗಳ ಸಂವಿಧಾನ ಬದ್ಧತೆಯ ಪರಿಶೀಲನೆಗಾಗಿ ಹೊಸದಾಗಿ ಪಂಚಸದಸ್ಯ ಪೀಠ ರಚಿಸಬೇಕು ಎಂದು ಹೇಳಿತು.  ಬಹುಪತ್ನಿತ್ವ ವ್ಯವಸ್ಥೆಯು ಮುಸ್ಲಿಮ್ ಪುರುಷರಿಗೆ ನಾಲ್ವರು ಪತ್ನಿಯರನ್ನು ಹೊಂದಲು ಅವಕಾಶ ನೀಡಿದರೆ, ’ನಿಕಾಹ್ ಹಲಾಲ ಪ್ರಕಾರ ಮಹಿಳೆಯೊಬ್ಬಳು ತನ್ನ ವಿಚ್ಛೇದಿತ ಪತಿಯನ್ನು ಮತ್ತೆ ವಿವಾಹವಾಗಲು ಆಕೆ ಬೇರೊಬ್ಬ ಪುರುಷನ್ನು ಮದುವೆಯಾಗಿ ಆತನಿಂದ ವಿಚ್ಛೇದನ ಪಡೆಯಬೇಕಾಗುತ್ತದೆ.  ಈ ಪದ್ಧತಿಗಳು ಸಮಾನತೆಯ ಹಕ್ಕು ಮತ್ತು ಲಿಂಗ ನ್ಯಾಯವನ್ನು ಉಲ್ಲಂಘಿಸುತ್ತವೆ ಎಂಬ ವಾದ ಸೇರಿದಂತೆ ನಾಲ್ಕು ನೆಲೆಗಳನ್ನು ಆಧರಿಸಿ ಪದ್ಧತಿಗಳ ವಿರುದ್ಧ ಸಲ್ಲಿಸಲಾದ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸೇರಿದಂತೆ ಕನಿಷ್ಠ ಮೂರು  ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸುತ್ತಿತ್ತು.  ದೆಹಲಿಯ ಬಿಜೆಪಿ ನಾಯಕರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಮಾರ್ಚ್ ೫ರಂದು ದಾಖಲಿಸಿದ ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲವನ್ನು ನಿಷೇಧಿಸಬೇಕಾದ್ದು ಸಮಯದ ಅಗತ್ಯ ಎಂದು ಪ್ರತಿಪಾದಿಸಿದ್ದರು.  ತ್ರಿವಳಿ ತಲಾಖ್, ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲ ಪದ್ಧತಿಗಳು ಸಂವಿಧಾನದ ೧೪, ೧೫ ಮತ್ತು ೨೧ನೇ ಪರಿಚ್ಛೇದಗಳ ಉಲ್ಲಂಘನೆಯಾಗಿದ್ದು, ಮಹಿಳೆಯರಿಗಷ್ಟೇ ಅಲ್ಲ, ಸಾರ್ವಜನಿಕ ವ್ಯವಸ್ಥೆ, ನೈತಿಕತೆ ಮತ್ತು ಸ್ವಾಸ್ಥ್ಯಕ್ಕೂ ಹಾನಿಕಾರಕ ಎಂದು ಅರ್ಜಿ ಪ್ರತಿಪಾದಿಸಿತ್ತು. ‘ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿಧಿಗಳು ಎಲ್ಲ ಭಾರತೀಯ ನಾಗರಿಕರಿಗೂ ಅನ್ವಯವಾಗಬೇಕು ಮತ್ತು ತ್ರಿವಳಿ ತಲಾಖ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೯೮ಎ (ಮಹಿಳೆಯ ಪತಿ ಅಥವಾ ಪತಿಯ ಸಂಬಂಧಿಯು ಆಕೆಯ ವಿರುದ್ಧ ಎಸಗುವ ಕ್ರೌರ್ಯ) ಎಂಬುದಾಗಿ ಘೋಷಿಸಬೇಕು ಎಂದು ಅವರು ಕೋರಿದ್ದರು.  ಇದೇ ಪ್ರಕಾರ್ ನಿಕಾಹ್-ಹಲಾಲವನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೩೭೫ (ಅತ್ಯಾಚಾರ) ಮತ್ತು ಬಹುಪತ್ನಿತ್ವವನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೯೪ರ (ಗಂಡ ಅಥವಾ ಹೆಂಡತಿಯ ಜೀವಮಾನ ಕಾಲದಲ್ಲೇ ಮತು ಮದುವೆಯಾಗುವುದು) ಅಡಿಯಲ್ಲಿ ಅಪರಾಧ ಎಂಬುದಾಗಿ ಘೋಷಿಸಿಬೇಕು ಎಂದೂ ಅವರು ಮನವಿ ಮಾಡಿದ್ದರು. ಮಾರ್ಚ್ ೧೪ರಂದು ದೆಹಲಿ ಮೂಲದ ಮಹಿಳೆಯೊಬ್ಬರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಮುಸ್ಲಿಮ್ ವೈಯಕ್ತಿಕ ಕಾನೂನಿನ ಕಾರಣದಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೯೪ ಸಮುದಾಯಕ್ಕೆ ಅನ್ವಯವಾಗುವುದಿಲ್ಲ ಹಾಗೂ ಮದುವೆಯಾದ ಯಾರೇ ಮುಸ್ಲಿಮ್ ಮಹಿಳೆ ತನ್ನ ಪತಿಯ ವಿರುದ್ಧ ದ್ವಿಪತ್ನಿತ್ವ ಅಪರಾಧಕ್ಕಾಗಿ ದೂರು ನೀಡುವಂತಿಲ್ಲ ಎಂದು ಅರ್ಜಿ ಸಲ್ಲಿಸಿದ್ದಳು.  ೧೯೩೯ರ ಮುಸ್ಲಿಮ್ ವೈವಾಹಿಕ ಕಾಯ್ದೆಯನ್ನು ಸಂವಿಧಾನ ಬಾಹಿರ ಮತ್ತು ೧೪, ೧೫, ೨೧ ಮತ್ತು ೨೫ನೇ (ಪ್ರಜ್ಞಾ ಸ್ವಾತಂತ್ರ್ಯ, ಧರ್ಮದ ಮುಕ್ತ  ಆಚರಣೆ, ಮತ್ತು ಧರ್ಮದ ಪ್ರಸಾರ) ಪರಿಚ್ಛೇದಗಳ ಉಲ್ಲಂಘನೆ ಎಂಬುದಾಗಿ ಘೋಷಿಸಬೇಕು ಎಂದು ಅವರು ಕೋರಿದ್ದರು. ಇತರ ಧರ್ಮಗಳಿಗೆ ಸೇರಿದ ಮಹಿಳೆಯರು ಕಾನೂನು ಬದ್ಧವಾಗಿ ಬಹುಪತ್ನಿತ್ವ ಪದ್ಧತಿ ವಿರುದ್ಧ ಗಳಿಸಿದ ರಕ್ಷಣೆಯನ್ನು ಪಡೆಯುವಲ್ಲಿ ಭಾರತೀಯ ಮುಸ್ಲಿಮ್ ಮಹಿಳೆಯರು ವಿಫಲರಾಗಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.  ತಾನು ಸ್ವತಃ ಇಂತಹ ಪದ್ಧತಿಗಳ ಬಲಿಪಶು ಎಂಬುದಾಗಿ ಪ್ರತಿಪಾದಿಸಿದ ಅರ್ಜಿದಾರ್ತಿಯು, ತನ್ನ ಪತಿ ಮತ್ತು ಕುಟುಂಬವು ತನಗೆ ಹೆಚ್ಚಿನ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡುತ್ತಿದ್ದು, ಮದುವೆಯಾದ ಮನೆಯಿಂದ ಎರಡು ಬಾರಿ ಉಚ್ಚಾಟಿಸಲ್ಪಟ್ಟಿದ್ದೇನೆ ಎಂದು ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.  ತನ್ನ ಪತಿಯು ತನ್ನಿಂದ ಕಾನೂನುಬದ್ಧವಾದ ವಿಚ್ಛೇದನವನ್ನು ಪಡೆಯದೆಯೇ ಬೇರೆ ಮಹಿಳೆಯನ್ನು ಮದುವೆಯಾಗಿದ್ದಾನೆ. ಪೊಲೀಸರು ಷರಿಯಾದಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇದೆ ಎಂಬ ಕಾರಣಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೯೪ ಮತ್ತು ೪೯೮ಎ ಅಡಿಯಲ್ಲಿ ನಾನು ಸಲ್ಲಿಸಿದ ದೂರುಗಳನ್ನು ದಾಖಲಿಸಲು ನಿರಾಕರಿಸಿದರು ಎಂದು ಆಕೆ ತಿಳಿಸಿದ್ದರು.  ಕೊನೆಗೆ ಮಾರ್ಚ್ ೧೮ರಂದು, ಹೈದರಾಬಾದ್ ಮೂಲದ ವಕೀಲರೊಬ್ಬರು ಬಹುಪತ್ನಿತ್ವ ಪದ್ಧತಿಯನ್ನು ಪ್ರಶ್ನಿಸಿದರು. ಮುಸ್ಲಿಮ್ ವೈಯಕ್ತಿಕ ಕಾನೂನಿನ ಅಡಿಯಲ್ಲಿನ ಮಾದರಿಯ ಮದುವೆಗಳು ಮುಸ್ಲಿಮ್ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದು ಅವರು ವಾದಿಸಿದರು. ಮುಸ್ಲಿಮ್ ಕಾನೂನು ಪುರುಷನಿಗೆ ತಾತ್ಕಾಲಿಕ ಮದುವೆಗಳನ್ನು ಮಾಡಿಕೊಳ್ಳುವ ಮೂಲಕ ಹಲವಾರು ಪತ್ನಿಯರನ್ನು ಹೊಂದಲು ಅವಕಾಶ ನೀಡಿದೆ, ಆದರೆ ಅದೇ ಅನುಮತಿಯನ್ನು ಮಹಿಳೆಯರಿಗೆ ವಿಸ್ತರಿಸಲಾಗಿಲ್ಲ ಎಂದು ಅರ್ಜಿ ಪ್ರತಿಪಾದಿಸಿತ್ತು. ಅರ್ಜಿಯು ನಿಕಾಹ್ ಹಲಾಲ ಪದ್ಧತಿಯನ್ನೂ ವಿರೋಧಿಸಿತ್ತು.

2018: ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಲ್ಲದೇ ೨೦೧೩ರಲ್ಲಿ ಪಡೆದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದುಸಿ-ಫೋರ್ ಚುನಾವಣಾ ಪೂರ್ವ ಸಮೀಕ್ಷೆ  ಭವಿಷ್ಯ ನುಡಿಯಿತು. ೨೨೪ ಸದಸ್ಯಬಲದ ಕರ್ನಾಟಕ ರಾಜ್ಯ ವಿಧಾನಸಭೆಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮಾರ್ಚ್ ರಿಂದ ೨೫ರ ನಡುವಣ ಅವಧಿಯಲ್ಲಿ  ಸಿ-ಫೋರ್ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿತ್ತು ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ೧೫೪ ವಿಧಾನಸಭಾ ಕ್ಷೇತ್ರಗಳಲ್ಲಿನ ೨೨,೩೫೭ ಮತದಾರರನ್ನು ಸಂದರ್ಶನ ಮಾಡಿ ಸಮೀಕ್ಷಾ ವರದಿ ತಯಾರಿಸಲಾಗಿತ್ತು.  ಸಂದರ್ಶನಕ್ಕೆ ಒಳಪಟ್ಟ ಮತದಾರರು ರಾಜ್ಯದ ,೩೬೮ ಮತಗಟ್ಟೆಗಳಿಗೆ ಸೇರಿದವರು. ೩೨೬ ಪಟ್ಟಣ ಅಥವಾ ನಗರ ಪ್ರದೇಶ ಹಾಗೂ  ೯೭೭ ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು ಎಂದು ಸಿ-ಫೋರ್ ಸಂಸ್ಥೆ ಸಮೀಕ್ಷೆ ಹೇಳಿತು.  ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತಪ್ರಮಾಣ ಶೇಕಡಾ ೯ರಷ್ಟು ಸುಧಾರಿಸಲಿದ್ದು ಅದು ಶೇ ೪೬ರಷ್ಟು ಮತಗಳನ್ನು ಪಡೆಯಲಿದೆ. ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ  ಶೇ ೩೧ ಹಾಗೂ ಶೇ ೧೬ ರಷ್ಟು ಮತಗಳನ್ನು ಪಡೆಯಲಿವೆ. ಕಾಂಗ್ರೆಸ್ ೧೨೬ ಸ್ಥಾನಗಳನ್ನು ಗೆಲ್ಲಲಿದ್ದು,  ಬಿಜೆಪಿ ೭೦ ಹಾಗೂ ಜೆಡಿಎಸ್ ೨೭ ಸ್ಥಾನಗಳನ್ನು ಪಡೆಯಲಿವೆ ಎಂದು ಸಮೀಕ್ಷೆ ತಿಳಿಸಿತು.  ೨೦೧೩ರಲ್ಲೂ ಸಿ-ಫೋರ್ ಸಂಸ್ಥೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿತ್ತು.  ಕಾಂಗ್ರೆಸ್ ೧೧೯ ರಿಂದ ೧೨೦ ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ೧೨೨ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ೨೦೧೩ರ ಚುನಾವಣೆಯಲ್ಲಿ ೪೦ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯೂ ಈಬಾರಿ ತನ್ನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದೆ. ಬಿಜೆಪಿ ಬಾರಿ ೭೦ ಸ್ಥಾನಗಳನ್ನು ಗೆಲ್ಲಲಿದೆ. ಆದರೆ ಜೆಡಿ (ಎಸ್) ಬಲ ೪೦ರಿಂದ ೨೭ಕ್ಕೆ ಇಳಿಯಲಿದೆ. ಇತರರು ಕೇವಲ ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿತು.  ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪುರುಷರಲ್ಲಿ ಶೇಕಡಾ ೪೪ ಮಂದಿ ಕಾಂಗ್ರೆಸ್ಸನ್ನು, ಶೇಕಡಾ ೩೩ ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಶೇಕಡಾ ೧೭ ಮಂದಿ ಜೆಡಿ(ಎಸ್) ನ್ನು ಬೆಂಬಲಿಸಿದರೆ, ಶೇಕಡಾ ೬ರಷ್ಟು ಮಂದಿ ಇತರನ್ನು ಬೆಂಬಲಿಸಿದ್ದಾರೆ. ಮಹಿಳೆಯರಲ್ಲಿ ಶೇಕಡಾ ೪೮ ಮಂದಿ ಕಾಂಗ್ರೆಸ್ಸನ್ನು ಬೆಂಬಲಿಸಿದರೆ, ಶೇಕಡಾ ೨೯ ಮಂದಿ ಬಿಜೆಪಿಯನ್ನು, ಶೇಕಡಾ ೧೪ರಷ್ಟು ಮಂದಿ ಜೆಡಿ(ಎಸ್) ಮತ್ತು ಶೇಕಡಾ ೮ರಷ್ಟು ಮಂದಿ ಇತರರನ್ನು ಬೆಂಬಲಿಸಿದ್ದಾರೆ. ಎಲ್ಲ ವಯೋಮಾನದವರಲ್ಲೂ ಕಾಂಗ್ರೆಸ್ ಬೆಂಬಲಿಗರ ಸಂಖ್ಯೆ ಹೆಚ್ಚಿದೆ.  ಶುದ್ಧ ಕುಡಿಯುವ ನೀರು ರಾಜ್ಯದ ನಂಬರ್ ಸಮಸ್ಯೆ ಎಂಬುದಾಗಿ ಶೇಕಡಾ ೩೨ರಷ್ಟು ಮಂದಿ ಹೇಳಿದರೆ, ಶೇಕಡಾ ೨೬ರಷ್ಟು ಮಂದಿ ಇದು ಎರಡನೇ ದೊಡ್ಡ ಸಮಸ್ಯೆ ಎಂದಿದ್ದಾರೆ. ಶೇಕಡಾ ಮಂದಿಗೆ ಇದು ಮೂರನೇ ದೊಡ್ಡ ಸಮಸ್ಯೆ. ಅಸಮರ್ಪಕ ಒಳಚರಂಡಿ ಮತ್ತು ಕೆಟ್ಟ ರಸ್ತೆಗಳು ಇತರ ಪ್ರಮುಖ ಸಮಸ್ಯೆಗಳು ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ.  ಸಿದ್ದರಾಮಯ್ಯ ಜನಪ್ರಿಯ: ಮುಖ್ಯಮಂತ್ರಿ ಸ್ಥಾನಕ್ಕೆ ಯಾರನ್ನು ಆರಿಸುವಿರಿ ಎಂಬ ಪ್ರಶ್ನೆಗೆ ಶೇಕಡಾ ೪೫ ಮಂದಿ ಸಿದ್ದರಾಮಯ್ಯ ಪರ ಮತ ನೀಡಿದ್ದಾರೆ. ಶೇಕಡಾ ೨೬ರಷ್ಟು ಮಂದಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರಿಗೆ ತಮ್ಮ ಪ್ರಾಶಸ್ತ್ಯವನ್ನು ನೀಡಿದ್ದಾರೆ. ಶೇಕಡಾ ೧೩ರಷ್ಟು ಮಂದಿ ಮಾತ್ರ ಎಚ್.ಡಿ. ಕುಮಾರ ಸ್ವಾಮಿ ಪರ ನಿಂತಿದ್ದಾರೆ. ಲಿಂಗಾಯತರ ಮತ: ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಹೊರಟ ರಾಜ್ಯ ಸರ್ಕಾರದ ನಿಲುವನ್ನು ಲಿಂಗಾಯತ ಮತದಾರರ ಪೈಕಿ ಶೇಕಡಾ ೬೧ರಷ್ಟು ಮಂದಿ ಬೆಂಬಲಿಸಿದ್ದಾರೆ. ಶೇಕಡಾ ೩೨ರಷ್ಟು ಲಿಂಗಾಯತರು ತಾವು ಅದನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ. ಶೇಕಡಾ ೭ರಷ್ಟು ಮಂದಿ ಯಾವುದೇ ಅಭಿಪ್ರಾಯ ನೀಡಲಿಲ್ಲ ಎಂದು ಸಮೀಕ್ಷೆ ಹೇಳಿತು. ಬಡತನ ರೇಖೆಗಿಂತ ಕೆಳಗಿನ ಮತದಾರರ ಪೈಕಿ ಶೇಕಡಾ ೬೫ರಷ್ಟು ಮಂದಿ ಕಾಂಗ್ರೆಸ್ ಬಡವರ ಕಲ್ಯಾಣಕ್ಕಾಗಿ ಹೆಚ್ಚು ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಜನತಾದಳ ನಿಟ್ಟಿನಲ್ಲಿ ಅತ್ಯಂತ ಹೆಚ್ಚು ಕೆಲಸ ಮಾಡಿದೆ ಎಂದು ಶೇಕಡಾ ೧೦ರಷ್ಟು ಮತದಾರರು ಹೇಳಿದ್ದಾರೆ. ಶೇಕಡಾ ೬೪ರಷ್ಟು ರೈತರು ಕಾಂಗ್ರೆಸ್ ರೈತರಿಗಾಗಿ ಅತ್ಯಂತ ಹೆಚ್ಚಿನ ಕೆಲಸ ಮಾಡಿದೆ ಎಂದಿದ್ದಾರೆ. ಬಿಜೆಪಿ ಅತ್ಯಂತ ಹೆಚ್ಚು ಕೆಲಸ ಮಾಡಿದೆ ಎಂದು ಶೇಕಡಾ ೧೮ರಷ್ಟು ರೈತರು, ಜನತಾದಳ ಹೆಚ್ಚು ಕೆಲಸ ಮಾಡಿದೆ ಎಂದು ಶೇಕಡಾ ೧೫ ರಷ್ಟು ರೈತರು ಹೇಳಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅತ್ಯಂತ ಹೆಚ್ಚು ಕೆಲಸ ಮಾಡಿರುವುದು ಬಿಜೆಪಿ ಎಂದು ಶೇಕಡಾ ೫೯ರಷ್ಟು ಮಹಿಳೆಯರು ಹೇಳಿದರೆ, ಕಾಂಗ್ರೆಸ್ ಪರ ಶೇಕಡಾ ೨೮ ಮತ್ತು ಜನತಾದಳ ಪರ ಶೇಕಡಾ ಮಹಿಳೆಯು ಅಭಿಪ್ರಾಯ ನೀಡಿದ್ದಾರೆ. ಶೇಕಡಾ ೭೪ರಷ್ಟು ದಲಿತ ಮತದಾರರು, ಶೇಕಡಾ ೫೭ರಷ್ಟು ಹಿಂದುಳಿದ ಜಾತಿ ಮತದಾರರು, ಶೇಕಡಾ ೬೭ರಷ್ಟು ಹಿಂದುಳಿದ ವರ್ಗಗಳ ಮತದಾರರು ಕಾಂಗ್ರೆಸ್ ಪಕ್ಷವು ತಮ್ಮ ಸಮುದಾಯಗಳಿಗಾಗಿ ಅತ್ಯಂತ ಹೆಚ್ಚು ಕೆಲಸ ಮಾಡಿದೆ ಎಂದಿದ್ದಾರೆ. ಶೇಕಡಾ ೫೬ರಷ್ಟು ಮಂದಿ ೧೨,೦೦೦ ಕೋಟಿ ರೂಪಾಯಿ ಮೊತ್ತದ ಪಿಎನ್ ಬಿ ಹಗರಣ ಹಾಗೂ ನೀರವ್ ಮೋದಿ ಪಲಾಯನಕ್ಕೆ ಬಿಜೆಪಿ ಹೊಣೆ ಎಂದಿದ್ದಾರೆ.  ಬೆಂಗಳೂರು ಮೆಟ್ರೋ ನಿಲ್ದಾಣಗಳಿಂದ ಹಿಂದಿ ನಾಮಫಲಕ ಕಿತ್ತು ಹಾಕಿದ್ದನ್ನು ಶೇಕಡಾ ೯೨ರಷ್ಟು ಮಂದಿ ಬೆಂಬಲಿಸಿದರೆ, ಬಿಜೆಪಿಯು ಕರ್ನಾಟಕದಲ್ಲಿ ಹಿಂದಿ ಹೇರಲು ಯತ್ನಿಸುತ್ತಿದೆ ಎಂಬ ಸಿದ್ದರಾಮಯ್ಯ ಮಾತನ್ನು ಒಪ್ಪುವುದಾಗಿ ಶೇಕಡಾ ೫೯ ಮಂದಿ ಹೇಳಿದರು. ಶೇಕಡಾ ೫೬ ಮಂದಿ ಕರ್ನಾಟಕ ಸ್ವಂತ ಧ್ವಜ ಹೊಂದಿರಬೇಕು ಎಂದು ಹೇಳಿದರು. ಕರ್ನಾಟಕವು ಸಿಬಿಐಯಂತಹ ಸಂಸ್ಥೆಗಳನ್ನು ರಾಜಕೀಯ ಗುರಿಸಾಧನೆಗಾಗಿ ದುರುಪಯೋಗ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಮಾತನ್ನು ಶೇಕಡಾ ೫೮ ಮಂದಿ ಒಪಿದ್ದಾರೆ ಎಂದು ವರದಿ ತಿಳಿಸಿತು.

2018: ನವದೆಹಲಿ: ಕಾಂಗ್ರೆಸ್ ಸದಸ್ಯ ಮತ್ತು ಉದ್ಯಮಿ ಕಾರ್ತಿ ಚಿದಂಬರಂ ಅವರಿಗೆ ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಪೊಲೀಸರು ಬಂಧಿಸಲದಂತೆ ದೆಹಲಿ ಹೈಕೋರ್ಟ್ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಸುಪ್ರೀಂಕೋರ್ಟ್ ಏಪ್ರಿಲ್ ೨ರವರೆಗೆ ವಿಸ್ತರಿಸಿತು. ಹಣ ವರ್ಗಾವಣೆ ನಿಗ್ರಹ ಕಾಯ್ದೆಯ (ಪಿಎಂಎಲ್ ) ಸೆಕ್ಷನ್ ೧೯ರ ಅಡಿಯಲ್ಲಿ ಬಂಧಿಸಲು ಇರುವ ತನ್ನ ಅಧಿಕಾರ ಬಗ್ಗೆ ವಿವಿಧ ಹೈಕೋರ್ಟ್ಗಳು ವಿಭಿನ್ನ ತೀರ್ಪುಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಯುತ ಪ್ರಕಟಣೆ ನೀಡುವಂತೆ ಜಾರಿ ನಿರ್ದೇಶನಾಲಯ ಕೋರಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮೇಲಿನ ಆದೇಶ ನೀಡಿತು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠಕ್ಕೆ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ಮಾದಕ ದ್ರವ್ಯ ಕಳ್ಳಸಾಗಣೆ, ಭಯೋತ್ಪಾದನೆಗೆ ಹಣ ಒದಗಿಸುವುದು ಮತ್ತು ಕಪ್ಪು ಹಣ ವರ್ಗಾವಣೆಗಳ ಹಿನ್ನೆಲೆಯಲ್ಲಿ ಕಾಯ್ದೆಯ ಅಡಿಯಲ್ಲಿ ಬಂಧಿಸುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇದೆ ಎಂದು ಹೇಳಿದರು. ೧೯೮೮ರ ವಿಶ್ವಸಂಸ್ಥೆ ಸಮಾವೇಶದ ನಿರ್ಣಯವನ್ನು ಉಲ್ಲೇಖಿಸಿದ ಮೆಹ್ತ, ಹಲವಾರು ರಾಷ್ಟ್ರಗಳು ಹಣ ವರ್ಗಾವಣೆ ಅಪರಾಧದ ಜೊತೆ ವ್ಯವಹರಿಸಲು ಕಾನೂನಿನ ಅಗತ್ಯ ಇದೆ ಎಂದು ಭಾವಿಸಿವೆ ಎಂದು ನುಡಿದರು. -ಕಾಮರ್ಸ್ ನಿಂದಾಗಿ ಹಣ ವರ್ಗಾವಣೆ ಪ್ರರಕಣಗಳ ತನಿಖೆ ಕಷ್ಟಕರವಾಗಿ ಪರಿಣಮಿಸಿದೆ. ಅಕ್ರಮಗಳಿಕೆಯ ಹಣವನ್ನು ಜಾಗತೀಕರಣದ ಬಳಿಕ ಕಾಮರ್ಸ್ ಬಳಸಿಕೊಂಡು ಜಗತ್ತಿನ ಯಾವ ಮೂಲೆಗಾದರೂ ವರ್ಗಾಯಿಸುವುದು ಈಗ ಸುಲಲಿತವಾಗಿದೆ ಎಂದು ಅವರು ಹೇಳಿದರು.  ಮೆಹ್ತ ಅಹವಾಲಿನ ಬಳಿಕ ಪೀಠವು ಮಾಜಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂರಂ ಅವರನ್ನು ಬಂಧಿಸದಂತೆ ರಕ್ಷಣೆ ಒದಗಿಸಿರುವ ಮಾರ್ಚ್ ೧೫ರ ಮಧ್ಯಂತರ ಆದೇಶವನ್ನು ಏಪ್ರಿಲ್ ೨ರವೆಗೆ ವಿಸ್ತರಿಸಿರುವುದಾಗಿ ಹೇಳಿ, ವಿಚಾರಣೆಯನ್ನು ಏಪ್ರಿಲ್ ೨ಕ್ಕೆ ಮುಂದೂಡಿತು.

2018: ಮಾಸ್ಕೊ, ರಷ್ಯಾ (ಎಪಿ): ಸೈಬೀರಿಯಾದ ಕೆಮೆರೊವೊ ನಗರದ ಶಾಪಿಂಗ್ಮಾಲ್   ಒಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 73 ಮಂದಿ ಮೃತರಾದರು. ವಿಂಟರ್ಚೆರ್ರಿ ಶಾಪಿಂಗ್ಮಾಲ್ನಲ್ಲಿ ಮಾರ್ಚ್ 25ರ ಭಾನುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಶಾಲೆಗೆ ರಜಾ ದಿನವಾದ ಕಾರಣ ಮಕ್ಕಳು ಮತ್ತು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರುಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದರು. ಅನಾಹುತ ನಡೆಯುವ ವೇಳೆ ಯಾವುದೇ ಎಚ್ಚರಿಕೆ ಗಂಟೆ ಮೊಳಗಿರಲಿಲ್ಲ. 120ಕ್ಕಿಂತಲೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಮಾಲ್ನಲ್ಲಿರುವ ಸಿನಿಮಾ ಮಂದಿರದ ಒಳಗೆ ಹೆಚ್ಚಿನ ಮೃತದೇಹಗಳು ಪತ್ತೆಯಾಗಿವೆಎಂದು ಅವರು ತಿಳಿಸಿದರು. ಗಾಯಗೊಂಡ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಾಲ್ಕನೇ ಮಹಡಿಯಿಂದ ಜಿಗಿದು 11 ವರ್ಷದ ಬಾಲಕನೊಬ್ಬ ತೀವ್ರ ಗಾಯಗೊಂಡಿದ್ದಾನೆ. ಆತನ ಸಹೋದರ ಹಾಗೂ ಪಾಲಕರು ಮೃತಪಟ್ಟಿದ್ದಾರೆಎಂದು ಅಧಿಕಾರಿಗಳು ತಿಳಿಸಿದರು.

2017:  ಕ್ವೀನ್ಸ್ ಲ್ಯಾಂಡ್:  ಒಂದು ಶತಮಾನದ ಹಿಂದೆಯೇ ವಿನಾಶ ಹೊಂದಿದೆ ಎಂದುಕೊಳ್ಳಲಾಗಿದ್ದ ಆಸ್ಟ್ರೇಲಿಯಾದ ‘ನೈಟ್ ಪ್ಯಾರಟ್’ (ಗಿಣಿ) ಇದೀಗ ಪ್ರತ್ಯಕ್ಷವಾಗಿದ್ದು, ಪಕ್ಷಿ ವೀಕ್ಷಕರ ಪಾಲಿಗೆ ಅರಗಿಣಿಯಾಯಿತು. ಆಸ್ಟ್ರೇಲಿಯಾ ಮೂಲದ ಸಣ್ಣ ಗಾತ್ರದ ಗಿಣಿಯ ಸಂತತಿ ನೂರು ವರ್ಷಗಳ ಹಿಂದೆಯೇ ಅಳಿದುಹೋಗಿದೆ ಎಂದು ಮೂರು ವರ್ಷಗಳ ಹಿಂದೆ ಘೊಷಿಸಲಾಗಿತ್ತು. ಅಚ್ಚರಿ ಎಂಬಂತೆ ಈ ಗಿಣಿಯು ಪಶ್ಚಿಮ ಆಸ್ಟ್ರೇಲಿಯಾ ಭಾಗದ ಕ್ವಿನ್ಸ್​ಲೆಂಡ್​ನಲ್ಲಿ ಈಗ ಕಾಣಿಸಿತು. ಅಪರೂಪದ ಈ ಗಿಣಿಯ ಬೆನ್ನು ಹತ್ತಿರುವ ನಾಲ್ವರು ಛಾಯಾಗ್ರಾಹಕರ ತಂಡ, ಈ ಶುಕದ ದನಿ ಕೇಳಲು ಅದೆಷ್ಟೋ ರಾತ್ರಿಗಳನ್ನು ಗೊತ್ತುಗುರಿ ಇಲ್ಲದ ಪ್ರದೇಶದಲ್ಲಿ ಕಳೆದಿತ್ತು. ಕಡೆಗೂ ಗಿಣಿಯು ಪಶ್ಚಿಮ ಆಸ್ಟ್ರೇಲಿಯಾ ಭಾಗದಲ್ಲಿ ಫೆಬ್ರವರಿ ತಿಂಗಳಲ್ಲಿ ಪತ್ತೆಯಾಗಿತ್ತು. ಹಳದಿ ಹಾಗೂ ಹಸಿರು ಮೈಬಣ್ಣ, ರೆಕ್ಕೆ ಭಾಗದಲ್ಲಿ ಕಪ್ಪು ಬಣ್ಣ ಹೊಂದಿರುವ ಈ ಗಿಣಿ ಕುಬ್ಜವಾಗಿದೆ.. ನಿಶಾಚರಿಯಾದ ಗಿಣಿಯ ಚಿತ್ರವನ್ನು ಛಾಯಾಗ್ರಾಹಕರು ಹರಸಾಹಸ ಮಾಡಿ ತೆಗೆದಿದ್ದಾರೆ. ಗಿಣಿಯ ದನಿ ಸೇರಿ ಹಲವು ವೈಶಿಷ್ಟ್ಯ ಗಳನ್ನು ಸೆರೆಹಿಡಿಯಲು ಸಾಧ್ಯವಾಗಿದ್ದಕ್ಕೆ ಛಾಯಾಗ್ರಾಹಕರ ತಂಡ ಹೆಮ್ಮೆ ವ್ಯಕ್ತಪಡಿಸಿದೆ ಎಂದು ಕ್ಸಿನ್​ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು.
2017:  ಕೋಯಿಕ್ಕೋಡ್: ಮಹಿಳೆಯೊಬ್ಬರ ಜತೆ ಫೋನ್‍ನಲ್ಲಿ ಅಸಭ್ಯವಾಗಿ ಮಾತನಾಡಿದ್ದಾರೆ
ಎಂಬ ಆರೋಪದ ಹಿನ್ನಲೆಯಲ್ಲಿ ಕೇರಳದ ಸಾರಿಗೆ ಸಚಿವ ಎ.ಕೆ ಶಶೀಂದ್ರನ್ ಅವರು ರಾಜೀನಾಮೆ ನೀಡಿದರು. ತಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಬಳಿ ಸಹಾಯ ಕೇಳಲು ಬಂದವರ ಜತೆ ಉತ್ತಮ ರೀತಿಯಲ್ಲಿಯೇ ವರ್ತಿಸಿದ್ದೇನೆ. ತಾನು ಈ ತಪ್ಪು ಮಾಡಿದ್ದೇನೆ ಎಂದು ಸಮ್ಮತಿಸಿ ರಾಜೀನಾಮೆ ನೀಡುತ್ತಿಲ್ಲ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧನಿದ್ದೇನೆ. ಈ ಆರೋಪದ ಸತ್ಯಾಸತ್ಯತೆ ಹೊರಬರಲಿ. ನನ್ನ ಪಕ್ಷಕ್ಕೂ ಸಚಿವ ಸಂಪುಟಕ್ಕೂ ಚ್ಯುತಿ ಬರುವಂತೆ ಯಾವುದೇ ಕಾರ್ಯಗಳನ್ನು ನಾನು ಮಾಡಿಲ್ಲ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಶೀಂದ್ರನ್ ಹೇಳಿದರು. ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ) ಪಕ್ಷದವರಾದ  ಶಶೀಂದ್ರನ್ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸುದ್ದಿ ಸ್ಫೋಟಿಸಿದ ಖಾಸಗಿ ವಾಹಿನಿ: ಈದಿನ  ಉದ್ಘಾಟನೆಯಾದ ಖಾಸಗಿ ವಾಹಿನಿಯೊಂದು ಮಹಿಳೆಯೊಂದಿಗೆ ವ್ಯಕ್ತಿಯೊಬ್ಬರು ಲೈಂಗಿಕಾಸಕ್ತಿಯಿಂದ ಮಾತನಾಡುತ್ತಿರುವ ಆಡಿಯೊ ಕ್ಲಿಪ್ ಪ್ರಸಾರ ಮಾಡಿತ್ತು. ಆ ವ್ಯಕ್ತಿ ಯಾರ ಜತೆ ಮಾತನಾಡುತ್ತಿದ್ದಾರೆ ಎಂಬುದು ಆಡಿಯೋದಲ್ಲಿ ಇಲ್ಲ. ಆದರೆ ಅಲ್ಲಿರುವ ವ್ಯಕ್ತಿ ರಾಜಕಾರಣಿ. ಗೋವಾದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದೇನೆ ಎಂಬಲ್ಲಿಂದ ಮಾತು ಶುರುವಾಗಿ ಆನಂತರ ಮಾತು ಲೈಂಗಿಕಾಸಕ್ತಿ ಬಗ್ಗೆ ಹೊರಳುತ್ತದೆ. ಈ ಆಡಿಯೊ ಕ್ಲಿಪ್ ಪ್ರಸಾರವಾಗುತ್ತಿದ್ದಂತೆ ಕೇರಳ ರಾಜ್ಯ ರಾಜಕೀಯದಲ್ಲಿ ಶಶೀಂದ್ರನ್ ಬಗ್ಗೆ ಭಾರಿ ಚರ್ಚೆಗಳು ನಡೆದು, ಮಧ್ಯಾಹ್ನದ ಹೊತ್ತಿಗೆ ಶಶೀಂದ್ರನ್ ರಾಜೀನಾಮೆ ನೀಡಿದರು. ಶಶೀಂದ್ರನ್ ಅವರ ವಿರುದ್ಧ ಕೇಳಿ ಬಂದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ತನಿಖೆ ನಡೆಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.  ಕೇರಳದಲ್ಲಿ ಮೇ 2016ರಲ್ಲಿ ಅಧಿಕಾರಕ್ಕೇರಿದ್ದ ಎಲ್‍ಡಿಎಫ್ ನೇತೃತ್ವದ ಸರ್ಕಾರದಲ್ಲಿ ಆರೋಪದಿಂದಾಗಿ ಸಚಿವರು ರಾಜೀನಾಮೆ ನೀಡಿದ ಎರಡನೇ ಪ್ರಕರಣ ಇದು. ಕಳೆದ ಅಕ್ಟೋಬರ್ ತಿಂಗಳಲ್ಲಿ  ಕೈಗಾರಿಕಾ ಸಚಿವ ಇ.ಪಿ ಜಯರಾಜನ್ ರಾಜೀನಾಮೆ ನೀಡಿದ್ದರು. ತಮ್ಮ ಖಾತೆಯಡಿಯಲ್ಲಿರುವ ಸಾರ್ವಜನಿಕ ವಲಯದಲ್ಲಿ ಸಂಬಂಧಿಯೊಬ್ಬರಿಗೆ ಉದ್ಯೋಗ ನೀಡಿ ವಿವಾದಕ್ಕೀಡಾಗಿ ಜಯರಾಜನ್ ರಾಜೀನಾಮೆ ನೀಡಿದ್ದರು.
2017: ಸಿನ್ಸಿನಾಟಿ: ಅಮೆರಿಕದ ಓಹಿಯೋ ರಾಜ್ಯದ ಸಿನ್ಸಿನಾಟಿ ನಗರದಲ್ಲಿರುವ ನೈಟ್ ಕ್ಲಬ್​ನಲ್ಲಿ
ವ್ಯಕ್ತಿಯೋರ್ವ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, 14 ಜನರು ಗಂಭೀರವಾಗಿ ಗಾಯಗೊಂಡರು.  ಬೆಳಗಿನ ಜಾವ 1 ಗಂಟೆಯ ಸುಮಾರಿಗೆ (ಸ್ಥಳೀಯ ಕಾಲಮಾನ) ಕ್ಯಾಮಿಯೋ ನೈಟ್ ಕ್ಲಬ್​ನಲ್ಲಿ ಈ ಘಟನೆ ಘಟಿಸಿದೆ ಎಂದು ಸಿನ್ಸಿನಾಟಿ ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದರು. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಸ್ಥಳದಿಂದ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೂ ಯಾರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿಲ್ಲ. ಘಟನಾ ಸ್ಥಳದಲ್ಲಿದ್ದವರ ವಿಚಾರಣೆ ನಡೆಸಲಾಗುತ್ತಿದೆ. ಪ್ರಸ್ತುತ ಸ್ಥಿತಿಯಲ್ಲಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದರು.
2017: ಬೆಂಗಳೂರು: ಮಹಾಭಾರತದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪಕ್ಕೆ
ಗುರಿಯಾಗಿರುವ ನಟ ಕಮಲ ಹಾಸನ್ ವಿರುದ್ಧ ಪ್ರಣವಾನಂದ ಸ್ವಾಮೀಜಿ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದರು. ಮಹಾಭಾರತದಲ್ಲಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ಹೆಣ್ಣನ್ನು ಜೂಜಿಗಿಡಲಾಗಿತ್ತು, ಇಂತಹ ಗ್ರಂಥಗಳನ್ನು ನಾವು ನಂಬಬೇಕಾ ಎಂದು ಕಮಲ ಹಾಸನ್ ಅವರು ಖಾಸಗಿ ಟಿವಿ ಚಾನಲ್​ಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನಿಸಿದ್ದರು. ಇದನ್ನು ಖಂಡಿಸಿರುವ ಪ್ರಣವಾನಂದ ಸ್ವಾಮೀಜಿ ಅವರು ಈದಿನ ಬೆಳಗ್ಗೆ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಕಮಲಹಾಸನ್ ಅವರು ಹಿಂದೂ ಧಾರ್ವಿುಕ ಗ್ರಂಥವಾದ ಮಹಾಭಾರತದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಪ್ರಣವಾನಂದ ಅವರು ತಮ್ಮ ದೂರಿನಲ್ಲಿ ತಿಳಿಸಿದರು.
2017: ಬೆಂಗಳೂರು: ಬೆಂಗಳೂರಿನಿಂದ ಹಾಸನಕ್ಕೆ ಹೊಸದಾಗಿ ನಿರ್ಮಿಸಲಾಗಿರುವ ರೈಲು
ಮಾರ್ಗದಲ್ಲಿ ಸಂಚರಿಸಲಿರುವ ಬೆಂಗಳೂರು-ಹಾಸನ ಸೂಪರ್ ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹಸಿರು ನಿಶಾನೆ ತೋರಿದರು. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುರೇಶ್ ಪ್ರಭು ಮತ್ತು ದೇವೇಗೌಡ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಬೆಂಗಳೂರು-ಹಾಸನ ರೈಲಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಅನಂತಕುಮಾರ್, ಕಾನೂನು ಸಚಿವ ಟಿ.ಬಿ ಜಯಚಂದ್ರ, ಆರ್.ವಿ.ದೇಶಪಾಂಡೆ, ವೀರಪ್ಪ ಮೊಯ್ಲಿ, ಸಂಸದ ಡಿ.ಕೆ.ಸುರೇಶ್, ಮೇಯರ್ ಪದ್ಮಾವತಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಸೋಮವಾರ ಮಾರ್ಚ್ 27ರಿಂದ  ಇಂಟರ್ ಸಿಟಿ ರೈಲು ಪ್ರಯಾಣಿಕರ ಸಂಚಾರಕ್ಕೆ ಮುಕ್ತವಾಗಲಿದ್ದು, ಹಾಸನದಿಂದ ಬೆಳಗ್ಗೆ 6.15 ಕ್ಕೆ ಹೊರಡುವ ಇಂಟರ್ ಸಿಟಿ ರೈಲು ಬೆಳಗ್ಗೆ 9 ಗಂಟೆಗೆ ಬೆಂಗಳೂರು ತಲುಪಲಿದೆ. ಸಂಜೆ 6.15 ಕ್ಕೆ ಯಶವಂತಪುರದಿಂದ ಹೊರಡುವ ರೈಲು ರಾತ್ರಿ 9 ಕ್ಕೆ ಹಾಸನ ತಲುಪಲಿದೆ.
2009: ಸಮಯದ ಕೊರತೆಯಿಂದ ಖ್ಯಾತ ಹಿಂದಿ ಚಿತ್ರ ನಟಿ ಐಶ್ವರ್ಯ ರೈ ಬಾರ್ಬಿ ಗೊಂಬೆಗೆ ರೂಪದರ್ಶಿಯಾಗಲು ನಿರಾಕರಿಸಿದರು. ಪೂರ್ವ ನಿಗದಿತ ಕಾರ್ಯಕ್ರಮ ಹಾಗೂ ಈ ಮೊದಲೇ ಸಹಿ ಹಾಕಿದ ಚಿತ್ರಗಳ ಶೂಟಿಂಗ್ ಹಿನ್ನೆಲೆಯಲ್ಲಿ ಐಶ್ವರ್ಯ ಬಾರ್ಬಿಗೆ ರೂಪದರ್ಶಿಯಾಗಲು ನಿರಾಕರಿಸಿದ್ದು, ಬಾರ್ಬಿ ಜನಕರಾದ ಮಾಟೆಲ್ ಕಂಪೆನಿಗೆ ಐಶ್ವರ್ಯ ಪ್ರತಿನಿಧಿಗಳು ಈ ಕುರಿತು ಸಂದೇಶ ಕಳುಹಿಸಿದರು.

2009: ಆಶಾದಾಯಕ ವಾತಾವರಣ ಸೃಷ್ಟಿಸಿದ ಷೇರುಪೇಟೆ 11 ವಾರಗಳ ನಂತರ 10 ಸಾವಿರ ಗಡಿ ದಾಟಿತು. ಈ ಮೂಲಕ ಮತ್ತೆ ಹೂಡಿಕೆದಾರರಲ್ಲಿ ಹೊಸ ಸಂಚಲನ ಹುಟ್ಟು ಹಾಕಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ದಿನದ ವಹಿವಾಟಿನಲ್ಲಿ 335.20 ಅಂಕಗಳ ಏರಿಕೆ ದಾಖಲಿಸಿ, 10,003 ಅಂಕಗಳ ದಿನದ ವಹಿವಾಟು ಅಂತ್ಯಗೊಳಿಸಿತು. ಹಿಂದಿನ ನಾಲ್ಕು ದಿನಗಳ ವಹಿವಾಟಿನಲ್ಲಿ ಒಟ್ಟು 1036.42 ಅಂಕ ಹೆಚ್ಚಳವಾಯಿತು.

2008: ಜಾಗತಿಕ ತಾಪಮಾನ ಏರಿಕೆಗೆ ಮಾನವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕಳೆದ ಏರಡು ದಶಕಗಳಲ್ಲಿ ವೈಜ್ಞಾನಿಕವಾಗಿ ಸಂಗ್ರಹಿಸಿದ ಅಂಕಿ-ಅಂಶಗಳಿಂದ ಇದು ಸಾಬೀತಾಗಿದೆ ಎಂದು 'ಗ್ರೀನ್ ಪೀಸ್' ಸಂಸ್ಥೆ ಈದಿನ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ತಿಳಿಸಿತು. ಕಳೆದ ಒಂದು ಶತಮಾನದಲ್ಲಿ ಭೂಮಿಯ ತಾಪಮಾನ 0.6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಏರಿದೆ. ಈ ಶತಮಾನದ ಅಂತ್ಯದ ವೇಳೆಗೆ ತೈಲ ಇಂಧನ ಬಳಕೆ ಹಾಗೂ ಭೂಮಿಯ ಅತಿಯಾದ ಬಳಕೆಯಿಂದ ಇಂಗಾಲದ ಡೈಆಕ್ಸೈಡ್ ಹಾಗೂ ಮಿಥೇನ್ ಅನಿಲ ಹೊರಸೂಸುವಿಕೆ ಹೆಚ್ಚಾಗಲಿದೆ. ಜಗತ್ತಿನಾದ್ಯಂತ ಭೂ ತಾಪಮಾನ 5-6 ಡಿಗ್ರಿ ಸೆಲ್ಸಿಯಸ್ಸಿನಷ್ಟು ಹೆಚ್ಚಲಿದೆ ಎಂದು `ಗ್ರೀನ್ಪೀಸ್' ಸಂಸ್ಥೆ ಹೇಳಿತು. ಉಷ್ಣಾಂಶದಲ್ಲಿ ಕೇವಲ 2 ಡಿಗ್ರಿ ಹೆಚ್ಚಾದರೂ ಭೂಮಿಯ ಬಹುತೇಕ ಭಾಗ ಮಾನವರು ವಾಸಿಸಲು ಅನರ್ಹವಾಗುತ್ತದೆ. ಹಲವು ಸಸ್ಯ, ಪ್ರಾಣಿ ಸಂಕುಲಗಳು ಭೂಮಿಯಿಂದ ಕಣ್ಮರೆಯಾಗುತ್ತವೆ ಎಂದು ಈ ವರದಿ ಹೇಳಿತು. ಮುಂದಿನ 50 ವರ್ಷಗಳಲ್ಲಿ ಬಿಸಿಗಾಳಿ ಬೀಸುವುದು ಹೆಚ್ಚಾಗಲಿದೆ. ಬೇಸಿಗೆಯಲ್ಲಿ ಇನ್ನಷ್ಟು ಉರಿ ಉಂಟಾಗಲಿದೆ. ಚಳಿಗಾಲದಲ್ಲಿ ಚಳಿಯ ಪ್ರಮಾಣ ಇನ್ನಷ್ಟು ಹೆಚ್ಚಲಿದೆ. ಕೈಗಾರಿಕಾ ಕ್ರಾಂತಿಯ ನಂತರ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣ 10 ಪಟ್ಟು ಹೆಚ್ಚಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಚೀನಾದಂತಹ ದೇಶಗಳು ಇಂಗಾಲದ ಡೈಆಕ್ಸೈಡನ್ನು ದೊಡ್ಡ ಪ್ರಮಾಣದಲ್ಲಿ ಹೊರಸೂಸುತ್ತಿವೆ ಎಂದು ವರದಿ ಹೇಳಿತು. ಜಾಗತಿಕ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಪ್ರಮಾಣದಲ್ಲಿ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟ ಶೇ 60ರಷ್ಟು ಅನಿಲವನ್ನು ಬಿಡುಗಡೆ ಮಾಡುತ್ತಿವೆ. ಭಾರತ ಶೇ 3ರಷ್ಟು ಹಾಗೂ ಚೀನಾ ಶೇ 8ರಷ್ಟು ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತಿವೆ ಎಂದು ಗ್ರೀನ್ ಪೀಸ್ ತಿಳಿಸಿತು. ಇತ್ತೀಚಿನ ಹವಾಮಾನ ವೈಪರೀತ್ಯಕ್ಕೆ ತಾಪಮಾನ ಏರಿಕೆಯೇ ಕಾರಣ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಉಷ್ಣವಲಯದಲ್ಲಿ ಬರಗಾಲ ಸಾಮಾನ್ಯವಾಗಿದೆ. ಚಂಡಮಾರುತಗಳು ಪದೇ ಪದೇ ಏಳುತ್ತಿವೆ. ಪರ್ವತ ಪ್ರದೇಶಗಳಲ್ಲಿ ಹಿಮ ಕರಗುತ್ತಿದ್ದರೆ, ಸಮುದ್ರ ಮಟ್ಟ ಒಂದೇ ಸಮನೇ ಏರುತ್ತಿದೆ ಎಂದು ಈ ವರದಿ ಅಭಿಪ್ರಾಯ ಪಟ್ಟಿತು. ಹಸಿರು ಅನಿಲದ ಪರಿಣಾಮ ತಗ್ಗಿಸಲು ವಿಶ್ವದ ದೊಡ್ಡ ದೇಶಗಳ ರಾಜಧಾನಿಗಳಲ್ಲಿ ಮಾರ್ಚ್ 29ರ ರಾತ್ರಿ `ಅರ್ಥ್ ಅವರ್' ಆಚರಿಸಿ, ಒಂದು ಗಂಟೆ ಕಾಲ ಎಲ್ಲಾ ದೀಪಗಳನ್ನೂ ದೀಪಗಳನ್ನು ಆರಿಸಲಾಗುವುದು. ತನ್ಮೂಲಕ ವಿದ್ಯುಚ್ಛಕ್ತಿ ಉಳಿಸುವುದು ಈ ಆಂದೋಲನದ ಉದ್ದೇಶ.

2008: ಸಣ್ಣ ಕಾರು `ನ್ಯಾನೊ' ಪ್ರದರ್ಶಿಸಿ ವಿಶ್ವವನ್ನು ಅಚ್ಚರಿಯಲ್ಲಿ ಮುಳುಗಿಸಿದ್ದ ಭಾರತದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆ ಟಾಟಾ ಮೋಟಾರ್ಸ್, ಈಗ ಪ್ರತಿಷ್ಠಿತ ವಿಲಾಸಿ ಕಾರು ಬ್ರಾಂಡುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳನ್ನು (ಜೆ ಎಲ್ ಆರ್) ಸ್ವಾಧೀನಪಡಿಸಿಕೊಂಡು ಜಾಗತಿಕ ಆಟೊಮೊಬೈಲ್ ರಂಗದಲ್ಲಿ ಹೊಸ ಇತಿಹಾಸ ಬರೆಯಿತು. ಅನೇಕ ತಿಂಗಳ ಊಹಾಪೋಹ ಮತ್ತು ಅನೇಕ ಬಾರಿ ಮುಂದೂಡಿಕೆ ನಂತರ ಕೊನೆಗೂ ಟಾಟಾ ಮೋಟಾರ್ಸ್, ಅಮೆರಿಕದ ಫೋರ್ಡ್ ಮೋಟಾರ್ ಕಂಪನಿಯ ವಿಲಾಸಿ ಕಾರು ಬ್ರಾಂಡುಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳನ್ನು (ಜೆ ಎಲ್ ಆರ್) 2.3 ಶತಕೋಟಿ ಡಾಲರುಗಳಿಗೆ ಖರೀದಿಸಿತು. ಅಂತಿಮವಾಗಿ ಅಂದಾಜು ರೂ 9200 ಕೋಟಿಗಳಿಗೆ ಈ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿತು. ಆಟೊಮೊಬೈಲ್ ರಂಗದಲ್ಲಿ ಭಾರತದ ಸಂಸ್ಥೆಯೊಂದರ ಅತಿ ದೊಡ್ಡ ಸ್ವಾಧೀನ ಪ್ರಕ್ರಿಯೆ ಇದು. ರೂ.1 ಲಕ್ಷ ಮೌಲ್ಯದ ಅಗ್ಗದ ಕಾರು ತಯಾರಿಕೆಯಿಂದ ಹಿಡಿದು ದುಬಾರಿ ಕಾರು ತಯಾರಿಕೆಯ ಹೆಗ್ಗಳಿಕೆಯು ಟಾಟಾ ಮೋಟಾರ್ಸಿನ ಪಾಲಾಯಿತು.

2008: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಈ ಹಿಂದೆ ನಾಗರಹೊಳೆಯಲ್ಲಿ ಉಳಿದುಕೊಂಡಿದ್ದ ಕೋಣೆಯಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರೂ ಹಿಂದಿನ ದಿನ ರಾತ್ರಿ ವಾಸ್ತವ್ಯ ಹೂಡಿದರು. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದ ಅವರು ಮಧ್ಯರಾತ್ರಿ 12.30ರ ವೇಳೆಗೆ ನಾಗರಹೊಳೆ ಅರಣ್ಯದಲ್ಲಿನ ಕಾವೇರಿ ಲಾಜ್ ಗೆ ಆಗಮಿಸಿದರು. ಇಂದಿರಾಗಾಂಧಿ ಅವರೂ ಚಿಕ್ಕಮಗಳೂರು ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭದಲ್ಲಿ ಇಲ್ಲಿಯೆ ಉಳಿದುಕೊಂಡಿದ್ದರು. ರಾಹುಲ್ ಗಾಂಧಿ ಅವರಿಗೆ ನಾಗರಹೊಳೆ ಕಾಡಿನಲ್ಲಿಯೇ ಇದ್ದ ಕಿಂಗ್ಸ್ ಸ್ಯಾಂಚುರಿ ರೆಸಾರ್ಟಿನಲ್ಲಿ ಎರಡು ಕೋಣೆಗಳನ್ನು ಮುಂಗಡ ಕಾಯ್ದಿರಿಸಿದ್ದರೂ ಅವರು ಕಾವೇರಿ ಲಾಜ್ನಲ್ಲಿಯೇ ಉಳಿದುಕೊಂಡರು. ಇಂದಿರಾಗಾಂಧಿ ಅವರಿಗೆ ಊಟ ಬಡಿಸಿದ್ದ ರವೀಂದ್ರ ನಾಯರ್ ಅವರೇ ರಾತ್ರಿ ಊಟ ಹಾಗೂ ಈದಿನ ಬೆಳಗ್ಗೆ ತಿಂಡಿಯನ್ನು ರಾಹುಲ್ ಗಾಂಧಿ ಅವರಿಗೂ ಬಡಿಸಿದರು.

2008: ಪದವಿ ಪೂರ್ವ (ಪಿ.ಯು) ಕಾಲೇಜು ಉಪನ್ಯಾಸಕರ ನೇಮಕಾತಿಯ ಅರ್ಹತಾ ಮಾನದಂಡವಾಗಿ ಇತ್ತೀಚೆಗೆ ಸೇರಿಸಲಾಗಿದ್ದ ಬಿ.ಇಡಿ ಪದವಿಯನ್ನು ಕೈ ಬಿಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಪಿ.ಯು. ಉಪನ್ಯಾಸಕರಾಗಲು ಸ್ನಾತಕೋತ್ತರ ಪದವಿ ಜತೆ ಬಿ.ಇಡಿ ಪದವಿ ಇರಬೇಕೆಂಬ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿ ಈ ತೀರ್ಮಾನ ತೆಗೆದುಕೊಂಡಿತು.

2008: ಹಣ ದುರುಪಯೋಗಪಡಿಸಿದ ಆರೋಪಕ್ಕೆ ಗುರಿಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರನ್ನು ಮುಂಬೈಯಲ್ಲಿ ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಮುಂಬೈ ಪೊಲೀಸಿನ ಆರ್ಥಿಕ ಅವ್ಯವಹಾರ ತಡೆ ಘಟಕದ (ಇಒಡಬ್ಲ್ಯು) ಅಧಿಕಾರಿಗಳು ದಾಲ್ಮಿಯ ಅವರನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ನ್ಯಾಯಾಧೀಶ ಆರ್. ಕೆ. ವಾಂಖೇಡೆ ಅವರು 25,000 ರೂಪಾಯಿ ಮುಚ್ಚಳಿಕೆಯ ಮೇಲೆ ಅವರನ್ನು ಬಿಡುಗಡೆಗೊಳಿಸಿದರು.

2008: ವಿಭು ಎಂಬ 55 ದಿನಗಳ ರಣಹದ್ದಿನ ಮರಿಯೊಂದು ಬಂಧನದಲ್ಲಿ ಜನಿಸಿ, ಬದುಕುಳಿದ ವಿಶ್ವದ ಮೊದಲ ರಣಹದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹರಿಯಾಣದ ಪಿಂಜೊರಿನಲ್ಲಿ ಅರಣ್ಯ ಇಲಾಖೆ ಸಂರಕ್ಷಿಸಿದ್ದ ಬಿಳಿ ಬೆನ್ನಿನ ರಣಹದ್ದು ಜೋಡಿಯೊಂದು ತನ್ನ ಜಾತಿಯ ಜಾಯಮಾನದಂತೆ ಗೂಡು ಕಟ್ಟಿ, ಮೊಟ್ಟೆ ಇಟ್ಟು 55 ದಿನಗಳ ಹಿಂದೆ ಮರಿ ಹಾಕಿತ್ತು. ಚಂಡೀಗಢ ಸಮೀಪದ ಪಿಂಜೊರಿನ `ರಣಹದ್ದು ಸಂರಕ್ಷಣೆ ಹಾಗೂ ತಳಿ ಸಂವರ್ಧನೆ ಕೇಂದ್ರ'ದಲ್ಲಿ ಈ ಅಪರೂಪದ ಘಟನೆ ನಡೆಯಿತು ಎಂದು ಹರಿಯಾಣದ ಅರಣ್ಯ ಹಾಗೂ ಪರಿಸರ ಸಚಿವೆ ಕಿರಣ್ ಚೌಧುರಿ ತಿಳಿಸಿದರು. ಮರಿ ಚೆನ್ನಾಗಿ ಬೆಳೆಯುತ್ತಿದ್ದು ಮುಂದಿನ 45 ದಿನಗಳಲ್ಲಿ ಹಾರುವ ಸಾಮರ್ಥ್ಯ ಪಡೆಯುವುದು. ಬಿಳಿಬೆನ್ನಿನ ರಣಹದ್ದು ಜಾತಿಯಲ್ಲಿ ಮರಿ 100 ದಿನಗಳ ಕಾಲ ಗೂಡಿನಲ್ಲಿ ಇರುತ್ತದೆ. ಗಂಡು-ಹೆಣ್ಣು ಹಕ್ಕಿಗಳು ಸಮನಾಗಿ ಮರಿಯ ಪಾಲನೆ ಮಾಡುತ್ತವೆ. ಅಳಿಯುತ್ತಿರುವ ರಣಹದ್ದುಗಳನ್ನು ಸಂರಕ್ಷಿಸಲು ಬಾಂಬೆ ನ್ಯಾಚುರಲ್ ಹಿಸ್ಟರಿ ಸಹಯೋಗದಲ್ಲಿ ಹರಿಯಾಣ ಅರಣ್ಯ ಇಲಾಖೆ ಪಿಂಜೊರಿನಲ್ಲಿ ರಣಹದ್ದು ಸಂರಕ್ಷಣಾ ಕೇಂದ್ರ ನಡೆಸಿದೆ.

2008: ಆಗ್ರಾ ಬಳಿಯ ಹುಲಾಸ್ ಪುರ ಗ್ರಾಮದಲ್ಲಿ ತಂದೆಯ ಜೊತೆ ಆಟವಾಡುತ್ತಿದ್ದಾಗ 45 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 3 ವರ್ಷದ ಬಾಲಕಿ ವಂದನಾಳನ್ನು 26ಗಂಟೆಗಳ ಬಳಿಕ ಸುರಕ್ಷಿತವಾಗಿ ಹೊರ ತರಲಾಯಿತು. ಸ್ಥಳದಲ್ಲೇ ಕಾದಿದ್ದ ಅಂಬುಲೆನ್ಸ್ ಮೂಲಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಂದನಾ ಹಿಂದಿನ ದಿನ ಕೊಳವೆ ಬಾವಿಗೆ ಬಿದ್ದಿದ್ದಳು.

2008: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪ್ರಜಾವಾಣಿಯ ಹಿರಿಯ ಉಪಸಂಪಾದಕ ಕೇಶವ ಜಿ. ಝಿಂಗಾಡೆ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷ- ಸುದರ್ಶನ ಚೆನ್ನಂಗಿಹಳ್ಳಿ, ಕಾರ್ಯ ನಿರ್ವಾಹಕನಿರ್ದೇಶಕ- ಎ.ಎಂ.ಸುರೇಶ್, ಖಜಾಂಚಿ- ದಿನೇಶ್ ಕಾರ್ಯಪ್ಪ, ಆಂತರಿಕ ಲೆಕ್ಕಪರಿಶೋಧಕ- ಬಿ.ಎನ್.ಶ್ರೀಧರ, ಹಾಗೂ ನಿರ್ದೇಶಕರಾಗಿ ಎಂ.ಎನ್. ಗುರುಮೂರ್ತಿ, ಕೆ.ಶಿವಸುಬ್ರಹ್ಮಣ್ಯ, ಕೆ.ವಿ.ಪ್ರಭಾಕರ, ಎಸ್.ಗಿರೀಶ್ ಬಾಬು, ಮಂಜುನಾಥ್ ಚಾಂದ್, ಎಂ.ಜಯರಾಮ ಅಡಿಗ, ಸುಧಾ ಹೆಗಡೆ ಹಾಗೂ ನಾಗರಾಜ ರಾ. ಚಿನಗುಂಡಿ ಆಯ್ಕೆಯಾದರು.

2008: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾದ 500 ಮೆಗಾವ್ಯಾಟ್ ಸಾಮರ್ಥ್ಯದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೊದಲನೇ ಘಟಕವನ್ನು ಸಂಪೂರ್ಣವಾಗಿ ದೇಶಕ್ಕೆ ಸಮರ್ಪಿಸಲು ಸಿದ್ಧತೆಗಳು ನಡೆದಿದ್ದು, ಪರೀಕ್ಷಾರ್ಥವಾಗಿ ಮೊದಲ ಬಾರಿಗೆ ಕಲ್ಲಿದ್ದಲು ಬಳಸಿ ಹಿಂದಿನ ದಿನ ಸಂಜೆ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಲಾಯಿತು.

2008: ಗೋಧ್ರಾ ಬಳಿಕದ ಕೋಮು ಗಲಭೆಗಳ ಮರು ತನಿಖೆಗಾಗಿ 10 ದಿನಗಳ ಒಳಗೆ ವಿಶೇಷ ತನಿಖಾ ತಂಡ (ಸಿಟ್) ರಚಿಸುವಂತೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತು.

2008: ಕೀರ್ತಿ ಮತ್ತು ಅದೃಷ್ಟ ಎರಡನ್ನೂ ಗೆಲ್ಲುವ ಅತ್ಯುತ್ತಮ ಅವಕಾಶ ಹೆಸರಿಗೆ ಇದೆ ಎಂದು ಲಂಡನ್ನಿನ ಒಂದು ಅಧ್ಯಯನ ಹೇಳಿತು. ಬ್ರಿಟನ್ನಿನ ಹೆರ್ಟ್ ಫೋರ್ಡ್ ಷೈರ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ಕೆಲವು ವ್ಯಕ್ತಿಗಳ ಯಶಸ್ಸಿಗೆ ಮತ್ತು ಕೆಲವರ ದುರದೃಷ್ಟಕ್ಕೆ ಅವರ ಹೆಸರೇ ಕಾರಣ ಎಂದು `ದಿ ಟೈಮ್ಸ್' ವರದಿ ಮಾಡಿತು. 6500 ಮಂದಿಯ ಸಮೀಕ್ಷೆಯಿಂದ ಲಭಿಸಿದ ಫಲಿತಾಂಶವನ್ನು ಆಧರಿಸಿ ಈ ತೀರ್ಮಾನಕ್ಕೆ ಸಂಶೋಧಕರು ಬಂದರು. ಜೇಮ್ಸ್ ಮತ್ತು ಎಲಿಜಬೆತ್ನಂತಹ ಹೆಸರುಗಳು ಯಶಸ್ಸಿನ ಸಂಕೇತವಾಗಿದ್ದರೆ, ರಿಯಾನ್ ಮತ್ತು ಸೋಫೀಯಂತಹ ಹೆಸರುಗಳು ಅದೃಷ್ಟದ ಸಂಕೇತಗಳು. ಆದರೆ ಜ್ಯಾಕ್ ಮತ್ತು ಲೂಸಿಯಂತಹ ಹೆಸರುಗಳು ದುರದೃಷ್ಟಕರ ಹೆಸರುಗಳು ಎಂಬುದು ಸಮೀಕ್ಷೆಯ ಅಭಿಪ್ರಾಯ.
2007: ದೇಶದಾದ್ಯಂತ ಕುತೂಹಲ ಕೆರಳಿಸಿದ್ದ ಭಾರತೀಯ ತೈಲ ನಿಗಮದ ಮಾರಾಟ ಅಧಿಕಾರಿ ಮಂಜುನಾಥ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವನ್ ಕುಮಾರ್ ಮಿತ್ತಲ್ ಗೆ ಉತ್ತರ ಪ್ರದೇಶದ ಲಖೀಂಪುರದ ಜಿಲ್ಲಾ ನ್ಯಾಯಾಲಯವು ಮರಣದಂಡನೆ ವಿಧಿಸಿತು. ಉಳಿದ ಏಳುಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

2007: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ ನಾಡಿನ ಅತ್ಯುನ್ನತ ನಾಗರಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು.ಸಿದ್ದಗಂಗಾಮಠದ ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ `ಕರ್ನಾಟಕ ರತ್ನ' ಮತ್ತು ಖ್ಯಾತ ವಿಮರ್ಶಕ ಜಿ.ಎಸ್. ಆಮೂರ ಅವರಿಗೆ `ಪಂಪ ಪ್ರಶಸ್ತಿ' ಘೋಷಿಸಲಾಯಿತು. `ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ'ಗೆ ಹಿರಿಯ ಕಲಾವಿದರಾದ ಬಿ.ಕೆ. ಹುಬಳಿ, ಜಕಣಾಚಾರಿ ಪ್ರಶಸ್ತಿಗೆ ಶಿಲ್ಪಿ ಬಿ.ಎನ್. ಚನ್ನಪ್ಪಾಚಾರ್ಯ, ಜಾನಪದ ಶ್ರೀ ಪ್ರಶಸ್ತಿಗೆ ಈಶ್ವರಪ್ಪ ಗುರಪ್ಪ ಅಂಗಡಿ, ಕನಕ ಪುರಂದರ ಪ್ರಶಸ್ತಿಗೆ ವಿ. ರಾಮರತ್ನಂ, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಸಿ.ಕೆ. ತಾರಾ ಆಯ್ಕೆಯಾದರು.

2007: 1984ರ ಸಿಖ್-ವಿರೋಧಿ ದೊಂಬಿಗಳ ಕಾಲದಲ್ಲಿ ಕುಟುಂಬ ಒಂದರ ಮೂವರು ಸದಸ್ಯರನ್ನು ಕೊಂದುದಕ್ಕಾಗಿ ಮೂವರು ವ್ಯಕ್ತಿಗಳನ್ನು ತಪ್ಪಿತಸ್ಥರು ಎಂದು ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿತು. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ರಾಜೇಂದರ್ ಕುಮಾರ್ ಶಾಸ್ತ್ರಿ ಅವರು ಆರೋಪಿಗಳಾದ ಹರಪ್ರಸಾದ್ ಭಾರಧ್ವಾಜ್, ಆರ್.ಪಿ. ತಿವಾರಿ ಮತ್ತು ಜಗದೀಶ ಗಿರಿ ಅವರು ದೆಹಲಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಸೇರಿದಂತೆ ಸಿಖ್ ಕುಟುಂಬದ ಮೂವರನ್ನು ಕೊಂದ ಪ್ರಕರಣದಲ್ಲಿ ಅಪರಾಧಿಗಳು ಎಂದು ತೀರ್ಪು ನೀಡಿದರು. ಇಪ್ಪತ್ತೆರಡೂವರೆ ವರ್ಷಗಳ ಹಿಂದೆ 1984ರ ನವೆಂಬರ್ ಒಂದು ಮತ್ತು ಎರಡರಂದು ಅರ್ಜಿದಾರರಾದ ಹರ್ಮಿಂದರ್ ಕೌರ್ ಅವರ ಪೂರ್ವ ದೆಹಲಿಯ ಮನೆಯ ಮೇಲೆ ಆರೋಪಿಗಳ ನೇತೃತ್ವದಲ್ಲಿ ಗುಂಪೊಂದು ಹಲ್ಲೆ ನಡೆಸಿತ್ತು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಸಿಖ್ ವಿರೋಧಿ ದಂಗೆಗಳು ಭುಗಿಲೆದ್ದ ಸಂದರ್ಭದಲ್ಲಿ ಈ ಹಲ್ಲೆ ನಡೆದಿತ್ತು. ಪ್ರಕರಣದಲ್ಲಿ ಆರೋಪಿಯಾಗಿದ್ದ ಇನ್ನೊಬ್ಬ ಮಹಿಳೆ ಕಮಲೇಶ್ ಮತ್ತು  ಸೂರಜ್ ಗಿರಿ ಅವರನ್ನು ಸಾಕ್ಷ್ಯಗಳ ಅಭಾವದ ಕಾರಣ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರು ಬಿಡುಗಡೆ ಮಾಡಿದರು. ಹರ್ಮಿಂದರ್ ಕೌರ್ ಅವರ ಪತಿ, ದೆಹಲಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ನಿರಂಜನ್ ಸಿಂಗ್ 1984ರ ನವೆಂಬರ್ 1ರಂದು ಶಾಹ್ ದರ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರತರಾಗಿದ್ದಾಗ ಅಲ್ಲಿಗೆ ಬಂದ ಆರೋಪಿಗಳ ನೇತೃತ್ವದ ಗುಂಪು ನಿರಂಜನ್ ಸಿಂಗ್ ಅವರನ್ನು ಕೊಂದು ಬೆಂಕಿ ಹಚ್ಚಿತು. ಅದಕ್ಕೂ ಮುನ್ನ ಆರೋಪಿಗಳು ನಿರಂಜನ್ ಸಿಂಗ್ ಅವರನ್ನು ಮಾನಸರೋವರ ಪಾರ್ಕಿನ ಅವರ ಮನೆಯವರೆಗೂ ಅಟ್ಟಿಸಿಕೊಂಡು ಹೋಗಿದ್ದರು. ಅವರ 17 ವರ್ಷದ ಮಗ ಗುರ್ಪಾಲ್ ಸಿಂಗ್ ಮತ್ತು ಅಳಿಯ ಮಹೇಂದರ್ ಸಿಂಗ್ ಅವರನ್ನು ಆರೋಪಿಗಳು ಮರುದಿನ ಕೊಂದು ಹಾಕಿದರು ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು. ದಂಗೆ ಕಾಲದಲ್ಲಿ ಬದುಕಿ ಉಳಿದ ಕೌರ್ ಅವರು ಸಿಖ್ ವಿರೋಧಿ ಗಲಭೆಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಜೈನ್ ಮತ್ತು ಬ್ಯಾನರ್ಜಿ ಆಯೋಗದ ಮುಂದೆ ಪ್ರಮಾಣಪತ್ರ ಸಲ್ಲಿಸಿದ ಬಳಿಕ 1996ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ಸಲ್ಲಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಎಚ್. ಕೆ. ಎಲ್. ಭಗತ್ ಅವರನ್ನು ಕೂಡಾ ಪ್ರಕರಣದಲ್ಲಿ ಆರೋಪಿ ಎಂಬುದಾಗಿ ಹೆಸರಿಸಲಾಗಿತ್ತು. ಆದರೆ ನಂತರ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲವೆಂಬ ಕಾರಣದಿಂದ ಆರೋಪ ಮುಕ್ತರನ್ನಾಗಿ ಮಾಡಲಾಗಿತ್ತು.

2006: ಖ್ಯಾತ ರಂಗ ಕಲಾವಿದ ಏಣಗಿ ಬಾಳಪ್ಪ ಅವರಿಗೆ ಹೊನ್ನಾವರ ತಾಲ್ಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ `ಶಿವರಾಮ ಹೆಗಡೆ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಮಹಾಗಣಪತಿ ಯಕ್ಷಗಾನ ಮಂಡಳಿ ನಿರ್ದೇಶಕ ಕೆರೆಮನೆ ಶಂಭುಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದರು.

2006: ಇಬ್ಬರು ಮಕ್ಕಳ ತಾಯಿ ಮುಂಬೈಯ ಆರತಿ ಠಾಕೂರ್ (24) ಅವರು `ನೋ ಮಾರ್ಕ್ಸ್ ಮಿಸೆಸ್ ಇಂಡಿಯಾ ವರ್ಲ್ಡ್

2006' ಆಗಿ ಆಯ್ಕೆಯಾದರು. ಈಕೆ ಶಿವಮೊಗ್ಗದ ಗುಲ್ವಾಡಿ ಸ್ಟುಡಿಯೋದ ಆರ್. ಡಿ. ಗುಲ್ವಾಡಿ ಮತ್ತು ಛಾಯಾದೇವಿ ಗುಲ್ವಾಡಿ ಅವರ ಮೊಮ್ಮಗಳು. ಇವರ ಶಾಲಾ ಶಿಕ್ಷಣ ಶಿವಮೊಗ್ಗದ ವಾಸವಿ ಶಾಲೆಯಲ್ಲಿ ನಡೆದಿತ್ತು.

2006: ಮೆಲ್ಬೋರ್ನಿನ ಯಾರಾ ನದಿಯ ದಡದಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟವು ವರ್ಣರಂಜಿತ ಸಾಂಸ್ಕತಿಕ ಕಾರ್ಯಕ್ರಮದೊಂದಿಗೆ ಅಂತ್ಯಗೊಂಡಿತು. ಕ್ರೀಡಾಕೂಟದಲ್ಲಿ 22 ಸ್ವರ್ಣ ಸೇರಿ ಐವತ್ತು ಪದಕ ಪಡೆದ ಭಾರತ, ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಭಾರತದ ಶೂಟರ್ ಸಮರೇಶ್ ಜಂಗ್ ಕ್ರೀಡಾಕೂಟದ ಶ್ರೇಷ್ಠ ಕ್ರೀಡಾಪಟು ಎನಿಸಿಕೊಂಡರು. ಅಚಂತ ಶರತ್ ಕಮಲ್ ಅವರಿಗೆ ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಬಂಗಾರ ಲಭಿಸಿತು. ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಬಾಲಿವುಡ್ ತಾರೆಯರಾದ ರಾಣಿ ಮುಖರ್ಜಿ, ಸೈಫ್ ಅಲಿಖಾನ್ ಭಾಂಗ್ರಾ ಅವರ ಆಕರ್ಷಕ ನೃತ್ಯ ಮುಕ್ತಾಯ ಸಮಾರಂಭದ ವಿಶೇಷ ಕಾರ್ಯಕ್ರಮವಾಗಿ ಗಮನಸೆಳೆಯಿತು.

2006: ಮಂಗಳೂರಿನಲ್ಲಿ 98 ಗಂಟೆ 32 ಸೆಕೆಂಡುಗಳ ಕಾಲ ನಿರಂತರ ಉಪನ್ಯಾಸ ಮಾಡುವ ಮೂಲಕ ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಅಣ್ಣಯ್ಯ ರಮೇಶ್ 'ಗಿನ್ನೆಸ್' ವಿಶ್ವ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರು ಸೇರ್ಪಡೆಗೆ ಅವಕಾಶ ಪಡೆದುಕೊಂಡರು. ಮಾರ್ಚ್ 22ರ ಬೆಳಗ್ಗೆ 9ಕ್ಕೆ ಆರಂಭಿಸಿದ್ದ ತಮ್ಮ `ಮ್ಯಾರಥಾನ್ ಉಪನ್ಯಾಸ'ವನ್ನು ಅವರು ಈ ದಿನ ಬೆಳಗ್ಗೆ 11.35ಕ್ಕೆ ಕೊನೆಗೊಳಿಸಿದರು. ಆಂಧ್ರಪ್ರದೇಶದ ನಾರಾಯಣ ಶಿವಶಂಕರ್ ಅವರು 72 ಗಂಟೆ 9 ನಿಮಿಷಗಳ ನಿರಂತರ ಉಪನ್ಯಾಸ ಮಾಡಿ ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರು ದಾಖಲಿಸಿದ್ದರು.

1982: ಕಲಾವಿದ ಪಾರ್ಶ್ವನಾಥ್ ಶಾ. ಉಪಾಧ್ಯ ಜನನ.

1979: ಎರಡು ವರ್ಷಗಳ ಶಾಂತಿ ಮಾತುಕತೆಗಳ ಬಳಿಕ ಇಸ್ರೇಲಿ ಪ್ರಧಾನಿ ಮೆನಾಕೆಮ್ ಬೆಗಿನ್ ಮತ್ತು ಈಜಿಪ್ಟಿನ ಅಧ್ಯಕ್ಷ ಅನ್ವರ್ ಸಾದತ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

1970: ಕಲಾವಿದೆ ಅರ್ಚನಾ ಹಂಡೆ ಜನನ.

1959: ಲಾಹೋರಿನಲ್ಲಿ ನಡೆದ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ನಡುವಣ ಪಂದ್ಯದಲ್ಲಿ ಪಾಕಿಸ್ಥಾನದ ಪರವಾಗಿ ಆಟವಾಡಿದ ಮುಷ್ತಾಖ್ ಮಹಮ್ಮದ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಟೆಸ್ಟ್ ಆಟಗಾರ ಎನ್ನಿಸಿದ. ಆಗ ಆತನ ವಯಸ್ಸು 15 ವರ್ಷ 124 ದಿನಗಳು.

1906: ಖ್ಯಾತ ವರ್ಣಚಿತ್ರ ಹಾಗೂ ಶಿಲ್ಪ ಕಲಾವಿದ ಎಸ್. ಎನ್. ಸ್ವಾಮಿ (26-03-1906ರಿಂದ 27-12-1969) ಅವರು ಅವರು ಶಿಲ್ಪ ಸಿದ್ಧಾಂತಿ ವೀರತ್ತ ಸ್ವಾಮಿ ಅವರ ಮಗನಾಗಿ ಈಗಿನ ಚಾಮರಾಜ ನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯಲ್ಲಿ ಜನಿಸಿದರು.

1932: ಕಲಾವಿದೆ ಉಷಾ ದಾತಾರ್ ಜನನ.

1902: ಈಗಿನ ಜಿಂಬಾಬ್ವೆಗೆ ರೊಡೇಷಿಯಾ ಎಂಬ ಹೆಸರು ಬರಲು ಕಾರಣನಾದ ಸಿಸಿಲ್ ರ್ಹೋಡ್ಸ್ (1853-1902) ತನ್ನ 48ನೇ ವಯಸ್ಸಿನಲ್ಲಿ ಮೃತನಾದ. ಈತ ತನ್ನ ವಜ್ರದ ಗಣಿಯಿಂದ ಲಭಿಸಿದ ಸಂಪತ್ತನ್ನು ವಿನಿಯೋಗಿಸಿ ಆಕ್ಸ್ ಫರ್ಡಿನಲ್ಲಿ ರ್ಹೋಡ್ಸ್ ಸ್ಕಾಲರ್ ಶಿಪ್ ಆರಂಭಿಸಿದ.

1892: ಅಮೆರಿಕಾದ ಖ್ಯಾತ ಪ್ರಬಂಧಕಾರ ಹಾಗೂ ಕವಿ ವಾಲ್ಟ್ ವೈಟ್ ಮ್ಯಾನ್ ತನ್ನ 72ನೇ ವಯಸ್ಸಿನಲ್ಲಿ ಮೃತನಾದ. ಈತನ `ಲೀವ್ಸ್ ಆಫ್ ಗ್ರಾಸ್' ಕೃತಿ ಅಮೆರಿಕದ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು.

1874: ಈದಿನ ಹುಟ್ಟಿದ ರಾಬರ್ಟ್ ಫ್ರಾಸ್ಟ್ ಮುಂದೆ ಅಮೆರಿಕಾದ ಖ್ಯಾತ ಕವಿಯಾದ.

No comments:

Post a Comment